ಆಂತರಿಕ ಭಿನ್ನಾಭಿಪ್ರಾಯ: ಹೊಸ ವರ್ಷಕ್ಕೆ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ

By Kannadaprabha News  |  First Published Nov 26, 2024, 4:55 AM IST

ಸದ್ಯ ಪಕ್ಷದ ಸಂಘಟನಾ ಪರ್ವ ನಡೆಯುತ್ತಿದ್ದು, ಮುಂದಿನ ಡಿಸೆಂಬರ್‌ ಮೂರನೇ ವಾರ ಅಂತ್ಯಗೊಳ್ಳಲಿದೆ. ಆ ಬಳಿಕ ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡುವತ್ತ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರು ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ. 


ಬೆಂಗಳೂರು(ನ.26): ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆಯ ಸೋಲಿನ ಹಿನ್ನೆಲೆಯಲ್ಲಿ ಬರುವ ಹೊಸ ವರ್ಷದ ಆರಂಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ ಆಗಲಿದ್ದು, ಸಂಘಟನೆಗೆ ಹೊಸ ಸ್ವರೂಪ ಸಿಗಲಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸೂಚಿಸಿದ್ದು, ಪದಾಧಿಕಾರಿಗಳ ಪೈಕಿ ಹಲವರ ಕೈಬಿಟ್ಟು ಹಿರಿಯರು ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಬಲ್ಲವರಿಗೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಕೋರ್‌ ಕಮಿಟಿಯನ್ನು ಹೊಸದಾಗಿ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. 

ಈ ಎಲ್ಲ ಬದಲಾವಣೆಗಳನ್ನು ಮಾಡುವ ಮೂಲಕ ಮುಂದಿನ ವರ್ಷದಲ್ಲಿ ಬರಬಹುದಾದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಜ್ಜಾಗಲು ಬಯಸಿದೆ. 
ಸದ್ಯ ಪಕ್ಷದ ಸಂಘಟನಾ ಪರ್ವ ನಡೆಯುತ್ತಿದ್ದು, ಮುಂದಿನ ಡಿಸೆಂಬರ್‌ ಮೂರನೇ ವಾರ ಅಂತ್ಯಗೊಳ್ಳಲಿದೆ. ಆ ಬಳಿಕ ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡುವತ್ತ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರು ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ. 

Tap to resize

Latest Videos

ಸಿಎಂ ನೋಡಿದ್ರೆ ಅಯ್ಯೋ‌ ಪಾಪ‌ ಅನಿಸುತ್ತೆ, ಗ್ಯಾರಂಟಿ ಹಣ ಹೊಂದಿಸಲು ಸಿದ್ದು ಪರದಾಟ: ವಿಜಯೇಂದ್ರ

ಈಗಿರುವ ರಾಜ್ಯ ಪದಾಧಿಕಾರಿಗಳ ಪೈಕಿ ವಿಜಯೇಂದ್ರ ಅವರು ತಮ್ಮ ಆಪ್ತರಿಗೆ ಆದ್ಯತೆ ನೀಡಿ ಸಂಘಟನೆಯಲ್ಲಿ ಹೆಚ್ಚು ಅನುಭವ ಇರುವವರನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋ ಪವಿದೆ. ಹೀಗಾಗಿ ಅಂಥವರನ್ನು ಕೈಬಿಟ್ಟು ಸಮರ್ಥರನ್ನು ಒಳಗೊಂಡು ತಂಡವನ್ನು ಕಟ್ಟಲು ನಿರ್ಧರಿಸಲಾಗಿದೆ. ಅಲ್ಲದೆ ಪದಾಧಿಕಾರಿಗಳಲ್ಲಿ ಸಂಘಟನೆಯ ಅನುಭವದ ಜೊತೆಗೆ ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಪಾಡಬೇಕು. ಆಗ ಭಿನ್ನಾಭಿಪ್ರಾಯ ಕೂಡ ಕಡಮೆ ಆಗಲಿದೆ ಎನ್ನುವ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಯತ್ನಾಳ ವಿರುದ್ಧ ಕ್ರಮ: 

ಇದರೊಂದಿಗೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ದಿನದಿಂದಲೂ ಪಕ್ಷ ಮತ್ತು ಪಕ್ಷದ ನಾಯಕತ್ವದ ವಿರುದ್ದ ಪದೇ ಪದೇ ಬಹಿರಂಗವಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಾಗೂ ಮುಜುಗರ ಉಂಟು ಮಾಡುವಂಥ ಹೇಳಿಕೆ ಕೊಡುತ್ತಿರುವ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತವರ ಆಪ್ತ ನಾಯಕರ ಬಾಯಿಗೆ ಬೀಗ ಹಾಕುವ ಅಥವಾ ಶಿಸ್ತು ಕ್ರಮದ ಬಿಸಿ ಮುಟ್ಟಿಸುವ ಪ್ರಯತ್ನವೂ ನಡೆಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. 

ವಕ್ಫ್‌ ಹೋರಾಟ: ವಿಜಯೇಂದ್ರ ಪ್ಲಾನ್ ಭಿನ್ನರಿಂದ ಹೈಜಾಕ್?

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದ ಕುರಿತ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರುವ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹಿಂದೆ ನಳಿನ್ ಕುಮಾರ್‌ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿ ವೇಳೆ ಇದ್ದ ಕೋರ್‌ ಕಮಿಟಿಯೇ ಮುಂದುವರೆದಿದೆ. ಈ ಕಮಿಟಿಯನ್ನು ಹೊಸದಾಗಿ ರಚಿಸಿ ಪ್ರಮುಖ ನಿರ್ಧರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಏನು ಬದಲಾವಣೆ? 

* ಕೆಲವು ಪದಾಧಿಕಾರಿಗಳಿಗೆ ಕೊಕ್, ಹೊಸಬರಿಗೆ ಅವಕಾಶ ಸಂಭವ 
* ಕಟೀಲ್ ಕಾಲದಿಂದ ಇರುವ ಕೋರ್ ಕಮಿಟಿ ಬದಲಿಸಿ ಹೊಸ ಕಮಿಟಿ ರಚನೆ 
* ಪಕ್ಷದಲ್ಲಿ ವಿಜಯೇಂದ್ರ ಆಪ್ತರಿಗೆ ಹೆಚ್ಚು ಅಧಿಕಾರವಿದೆ ಎಂಬ ಆರೋಪ ಸರಿಪಡಿಸಿ ಸಮರ್ಥರಿಗೆ ಹುದ್ದೆ ಸಂಭವ ಅನುಭವದ ಜೊತೆಗೆ ಜಾತಿ, ಪ್ರಾದೇಶಿಕ ಸಮತೋಲನಕ್ಕೆ ಒತ್ತು, ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ 
* 'ಬಂಡುಕೋರ' ಯತ್ನಾಳ್ ತಂಡದ ಬಾಯಿಗೆ ಬೀಗ ಅಥವಾ ಶಿಸ್ತು ಕ್ರಮ?

click me!