Bengaluru: ನಂಬರ್ ಬ್ಲಾಕ್ ಮಾಡಿದ್ದಕ್ಕೆ ಗೆಳತಿಯ ಹತ್ಯೆ: ಕ್ಯಾಬ್‌ ಚಾಲಕನ ಬಂಧನ

By Kannadaprabha NewsFirst Published Mar 9, 2023, 12:53 PM IST
Highlights

ಇತ್ತೀಚೆಗೆ ತನ್ನೊಂದಿಗೆ ಮುನಿಸಿಕೊಂಡಿದಕ್ಕೆ ಗೆಳತಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಕ್ಯಾಬ್‌ ಚಾಲಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಮಾ.09): ಇತ್ತೀಚೆಗೆ ತನ್ನೊಂದಿಗೆ ಮುನಿಸಿಕೊಂಡಿದಕ್ಕೆ ಗೆಳತಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಕ್ಯಾಬ್‌ ಚಾಲಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ಹುಣಸಮಾರನಹಳ್ಳಿ ನಿವಾಸಿ ಭೀಮರಾಯ ಬಂಧಿತನಾಗಿದ್ದು, ಮಾ.4ರಂದು ಇಂದಿರಾ ನಗರದ ನಿವಾಸಿ ದೀಪಾ (48) ಎಂಬುವರನ್ನು ಕೊಂದು ಬಳಿಕ ಮೃತದೇಹವನ್ನು ಬಾಗಲೂರು ಸಮೀಪ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಹುಚ್ಚು ಮೋಹ: ಕಲಬುರಗಿ ಜಿಲ್ಲೆಯ ಭೀಮರಾಯ ನಗರದಲ್ಲಿ ಕ್ಯಾಬ್‌ ಚಾಲಕನಾಗಿದ್ದ. ಕೆಲ ತಿಂಗಳ ಹಿಂದೆ ಆತನಿಗೆ ಖಾಸಗಿ ಕಂಪನಿ ಅಕೌಂಟೆಂಟ್‌ ದೀಪಾಳ ಪರಿಚಯವಾಗಿತ್ತು. ಆಕೆಯನ್ನು ಆಫೀಸಿಗೆ ಕರೆದುಕೊಂಡು ಹೋಗಿ ಬರುವುದನ್ನು ಈತನೇ ಮಾಡುತ್ತಿದ್ದ. ಹೀಗಾಗಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆದರೆ ಇತ್ತೀಚೆಗೆ ಭೀಮರಾಯನಿಂದ ದೀಪಾ ಅಂತರ ಕಾಯ್ದುಕೊಂಡಿದ್ದಳು. ಆದರೆ ವಯಸ್ಸಿನಲ್ಲಿ ತನಗಿಂತ ಎರಡು ಪಟ್ಟು ಹಿರಿಯವಳಾಗಿದ್ದ ಅವಿವಾಹಿತೆ ದೀಪಾಳ ಮೇಲೆ ಭೀಮರಾಯನಿಗೆ ವಿಪರೀತ ಮೋಹ ಬೆಳೆದಿತ್ತು. ತನ್ನನ್ನು ಗೆಳತಿ ಕಡೆಗಣಿಸುತ್ತಿದ್ದಾಳೆ ಎಂದು ಕೆರಳಿದ ಆತ, ಪದೇ ಪದೇ ಕರೆ ಮಾಡಿ ಮನವೊಲೈಕೆಗೆ ಯತ್ನಿಸಿ ವಿಫಲನಾಗಿದ್ದ. ಇದರಿಂದ ಬೇಸತ್ತು ಆತನ ಮೊಬೈಲ್‌ ಸಂಖ್ಯೆಯನ್ನು ಆಕೆ ಬ್ಲಾಕ್‌ ಮಾಡಿದ್ದಳು.

ಕಾರ್ಲಾನ್ ಹಾಸಿಗೆ ಮಳಿಗೆಯಲ್ಲಿ ಬೆಂಕಿ ಅವಘಡ: ಕ್ಷಣಾರ್ಧದಲ್ಲಿ ಹೊತ್ತಿಉರಿದ ಮಳಿಗೆ

ಮಾ.4ರಂದು ದೀಪಾಳ ಕಚೇರಿ ಬಳಿಗೆ ತೆರಳಿದ ಭೀಮರಾಯ, ಮಾತನಾಡುವ ನೆಪದಲ್ಲಿ ಕರೆಯಿಸಿಕೊಂಡು ಬಳಿಕ ಹೋಟೆಲ್‌ನಲ್ಲಿ ದೋಸೆ ತಿಂದಿದ್ದರು. ಮಾತಿನ ನಡುವೆ ತನ್ನನ್ನು ಬಿಟ್ಟು ಬಿಡುವಂತೆ ದೀಪಾ ಹೇಳಿದ್ದಾಳೆ. ಈ ಮಾತಿಗೆ ಆಕ್ಷೇಪಿಸಿದ ಆರೋಪಿ, ಆಕೆಯೊಂದಿಗೆ ಜಗಳವಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹಲಸೂರು ಸಮೀಪ ದೀಪಾಳಿಗೆ ಜಾಕ್‌ ರಾಡ್‌ನಿಂದ ಭೀಮರಾಯ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ಆಕೆ ಸಾವನಪ್ಪಿದ್ದಾಳೆ. ಬಳಿಕ ಮೃತದೇಹವನ್ನು ಬಾಗಲೂರು ಸಮೀಪ ಸಾತನೂರು-ಹೊಸಹಳ್ಳಿ ಮುಖ್ಯರಸ್ತೆ ಬದಿಯ ಖಾಲಿ ಪ್ರದೇಶದಲ್ಲಿ ಬಿಸಾಡಿ ಆತ ಪರಾರಿಯಾಗಿದ್ದ.

ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್‌’ ಭರವಸೆಗಳಿಗೆ ಮರುಳಾಗಬೇಡಿ: ಸಿಎಂ ಬೊಮ್ಮಾಯಿ

ಮರುದಿನ ಅಪರಿಚಿತ ಮೃತದೇಹ ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಇತ್ತ ದೀಪಾ ಸಂಪರ್ಕಕ್ಕೆ ಸಿಗದೆ ಹೋದಾಗ ದಿಗಿಲುಕೊಂಡ ಆಕೆಯ ಸಂಬಂಧಿಕರು, ಇಂದಿರಾನಗರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಅಷ್ಟರಲ್ಲಿ ಬಾಗಲೂರು ಸಮೀಪ ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗಿರುವ ವಿಚಾರ ತಿಳಿದ ಇಂದಿರಾ ನಗರ ಪೊಲೀಸರು, ಈ ಸಂಗತಿಯನ್ನು ದೀಪಾಳ ಸಂಬಂಧಿಕರಿಗೆ ತಿಳಿದರು. ಡಾ. ಬಿ.ಆರ್‌.ಅಂಬೇಡ್ಕರ್‌ ವೈದ್ಯಕೀಯ ಮಹಾವಿದ್ಯಾಲಯದ ಶವಾಗಾರದಲ್ಲಿದ್ದ ಮೃತದೇಹವನ್ನು ದೀಪಾಳ ಪೋಷಕರು ಗುರುತಿಸಿದ್ದಾರೆ. ದೀಪಾಳ ಜತೆ ಭೀಮರಾಯನ ಎಂಬಾತನ ಸ್ನೇಹವಿತ್ತು ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!