
ತುಮಕೂರು (ಮೇ 20): ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದನ್ನು ಪೊಲೀಸರು ಬೇಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲೊಬ್ಬ ಐನಾತಿ ಕಳ್ಳ, ತನ್ನೊಂದಿಗೆ ಕಳ್ಳತನ ಮಾಡಲು ಬರುವ ಶಿಷ್ಯನಿಗೆ ಮಾಸಿಕ 20 ಸಾವಿರ ರೂ. ಸಂಬಳ ನೀಡುತ್ತಿದ್ದನು.
ಹೌದು, ಈ ಸುದ್ದಿಯನ್ನು ಓದಿದರೆ ನಿಮಗೆ ನಗು ಬರಬಹುದು. ಆದರೆ, ಈ ಕಳ್ಳರ ಗುಂಪಿನಿಂದ ತೊಂದರೆ ಅನುಭವಿಸಿದವರು ರೈತರು ಎಂಬುದು ಎಂಥವರಿಗೂ ಸಿಟ್ಟು ಬಂದೇ ಬರುತ್ತದೆ. ಇನ್ನು ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ, ಸ್ವತಃ ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಕೊರಟಗೆರೆ ಕ್ಷೇತ್ರದಲ್ಲಿ ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ. ತುಮಕೂರು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮತ್ತು ಕೊರಟಗೆರೆ ತಾಲೂಕಿನಲ್ಲಿ ಬೋರ್‌ವೆಲ್‌ಗಳ ಕೇಬಲ್ ಕಳ್ಳತನದಿಂದ ರೈತರು ಹೈರಾಣಾಗಿದ್ದರು.
'ಸಿಎಂ ಸೋಮಾರಿ ಸಿದ್ದು' ಎಂದು ಹೀಗಳೆದ ನಟ ಅಹಿಂಸಾ ಚೇತನ್
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಕಳೆದದೊಂದು ತಿಂಗಳಿಂದ ನಿರಂತರವಾಗಿ ರೈತರ ಬೋರ್‌ವೆಲ್‌ಗಳ ಕೇಬಲ್‌ಗಳು ಕಳ್ಳತನವಾಗುತ್ತಿದ್ದವು. ಇದರಿಂದ ರೈತರು ಹೈರಾಣಾಗಿದ್ದರು. ಈ ಬಗ್ಗೆ ರೈತರೆಲ್ಲರೂ ಸೇರಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆಗ ಕೊರಟಗೆರೆ ತಾಲೂಕಿನ ವಡ್ಡಗೆರೆ ಬಳಿ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಕಳ್ಳತನದ ಕೃತ್ಯಕ್ಕೆ ಬಳಸಿದ್ದ ಕಾರಿನ ಚಲನವಲನ ಗಮನಿಸಿದ ಪೊಲೀಸರು ಕಳ್ಳರ ಪತ್ತೆ ಮಾಡಿ ಬಂಧಿಸಿದ್ದಾರೆ.
ಪೊಲೀಸರು ವೆಂಕಟೇಶ್, ರಾಘವೇಂದ್ರ ಹಾಗೂ ವಿನೇಶ್ ಎಂಬ ಮೂವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಳದಲ್ಲಿ ಕಳ್ಳರನ್ನ ಬಂಧಿಸಿ ಕೊರಟಗೆರೆ ಠಾಣೆಗೆ ಕೊರೆದೊಯ್ದಿದ್ದಾರೆ. ಇನ್ನು ಕಳ್ಳರನ್ನು ವಿಚಾರಣೆ ಮಾಡಿದಾಗ ಒಬ್ಬ ಕಳ್ಳ ರಾಘವೇಂದ್ರ ತಾನು 20 ಸಾವಿರ ರೂ. ಸಂಬಳಕ್ಕಾಗಿ ದುಡಿಯುತ್ತಿದ್ದೇನೆ ಸರ್. ಇದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಹೇಳಿದ್ದಾನೆ. ಇದನ್ನು ಕೇಳಿ ಶಾಕ್ ಆದ ಪೊಲೀಸರು ಪೂರ್ಣವಾಗಿ ಬಾಯಿ ಬಿಡಿಸಿದ್ದಾರೆ. ತುಮಕೂರಿನ ಐನಾತಿ ಕಳ್ಳ ವೆಂಕಟೇಶ್, ಬೆಂಗಳೂರಿನ ರಾಘವೇಂದ್ರ ಎನ್ನುವವರನ್ನು ನಿಮಗೆ ರಾತ್ರಿಪಾಳಿ ಕೆಲಸ ಕೊಡುವುದಾಗಿ ತನ್ನ ಗುಂಪಿಗೆ ಸೇರಿಸಿಕೊಂಡು ರಾತ್ರಿ ಕಾರಿನಲ್ಲಿ ಕರೆದೊಯ್ಯುತ್ತಿದ್ದನು. ಆಗ ನಮ್ಮೊಂದಿಗೆ ಬಂದು ರೈತರ ಬೋರ್‌ವೆಲ್‌ಗಳಲ್ಲಿನ ಕೇಬಲ್‌ಗಳನ್ನು ಕದಿಯುತ್ತಿದ್ದನು. ಇದಕ್ಕೆ ನಾನು ಕೂಡ ಸಹಾಯ ಮಾಡುತ್ತಿದ್ದೆನು ಎಂದು ಕಳ್ಳ ರಾಘವೇಂದ್ರ ಹೇಳಿದ್ದಾನೆ.
ಉದ್ಯೋಗಿಗಳಿಗೆ 8 ತಿಂಗಳ ಬೋನಸ್ ನೀಡಲು ಮುಂದಾದ ಕಂಪನಿ
ವೆಂಕಟೇಶ್ ಮತ್ತು ರಾಘವೇಂದ್ರ ಸೇರಿ ಕದ್ದ ಎಲ್ಲ ಕೇಬಲ್‌ಗಳನ್ನು ಬೆಂಗಳೂರಿನ ವಿನೇಶ್ ಎನ್ನುವವರಿಗೆ ಮಾರುತ್ತಿದ್ದರು. ಮೂವರೂ ಸೇರಿ ರೈತರ ಕೇಬಲ್‌ಗಳನ್ನು ಕದ್ದು ಮಾರುತ್ತಾ ಸುಖಕರ ಜೀವನ ಮಾಡುತ್ತಿದ್ದರು. ಆದರೆ, ಪ್ರತಿದಿನ ಒಬ್ಬರಲ್ಲಾ ಒಬ್ಬ ರೈತರು ತನ್ನ ಬೋರ್‌ವೆಲ್‌ಗಳಿಗೆ ಅಳವಡಿಕೆ ಮಾಡಿದ್ದ ಸಾವಿರಾರು ರೂ. ಮೌಲ್ಯದ ಕೇಬಲ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇನ್ನು ಬೆಳೆಗಳಿಗೆ ನೀರು ಹರಿಸಲಾಗದೇ ನಷ್ಟಕ್ಕೆ ಸಿಲುಕುತ್ತಿದ್ದರು. ಈಗ ಕೇಬಲ್ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ