ಹೆಸರಿಗೆ ಅನ್ವರ್ಥವಾಗಿ ಬೆಳೆಯುವುದು ಎನ್ನುವುದಕ್ಕೆ ನಟ ದೊಡ್ಡಣ್ಣನಂಥ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಅವರು ದೇಹದಿಂದ, ಕಂಠದಿಂದ ಮಾತ್ರವಲ್ಲ ಅಭಿನಯದಿಂದಲು ಚಿತ್ರರಂಗದಲ್ಲಿ ದೊಡ್ಡಣ್ಣನಾಗಿ ಗುರುತಿಸಿಕೊಂಡವರು. ಪ್ರಸ್ತುತ ಲಾಕ್ಡೌನ್ ಮತ್ತು ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಅವರು ಆಡಿರುವ ಮಾತುಗಳು ಕೂಡ ಅಷ್ಟೇ ತೂಕವನ್ನು ಹೊಂದಿವೆ. ನಿರ್ಮಾಪಕರ ಕಷ್ಟದ ಬಗ್ಗೆ ಮಾತನಾಡುವಾಗ ಅವರು ಅಂಬರೀಷ್ ಅವರನ್ನು ನೆನಪಿಸಿದ ರೀತಿ ತೀರ ವಿಭಿನ್ನವಾಗಿತ್ತು. ಇದು ದೊಡ್ಡಣ್ಣನ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ.
ಹೆಸರಿಗೆ ಅನ್ವರ್ಥವಾಗಿ ಬೆಳೆಯುವುದು ಎನ್ನುವುದಕ್ಕೆ ನಟ ದೊಡ್ಡಣ್ಣನಂಥ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಅವರು ದೇಹದಿಂದ, ಕಂಠದಿಂದ ಮಾತ್ರವಲ್ಲ ಅಭಿನಯದಿಂದಲು ಚಿತ್ರರಂಗದಲ್ಲಿ ದೊಡ್ಡಣ್ಣನಾಗಿ ಗುರುತಿಸಿಕೊಂಡವರು. ಪ್ರಸ್ತುತ ಲಾಕ್ಡೌನ್ ಮತ್ತು ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಅವರು ಆಡಿರುವ ಮಾತುಗಳು ಕೂಡ ಅಷ್ಟೇ ತೂಕವನ್ನು ಹೊಂದಿವೆ. ನಿರ್ಮಾಪಕರ ಕಷ್ಟದ ಬಗ್ಗೆ ಮಾತನಾಡುವಾಗ ಅವರು ಅಂಬರೀಷ್ ಅವರನ್ನು ನೆನಪಿಸಿದ ರೀತಿ ತೀರ ವಿಭಿನ್ನವಾಗಿತ್ತು. ಇದು ದೊಡ್ಡಣ್ಣನ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ.
ಶಶಿಕರ ಪಾತೂರು
undefined
ನೀವು ಇತ್ತೀಚೆಗೆ ಹೊಸ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಿಲ್ಲವೇ?
ಎಲ್ಲಾದರೂ ಉಂಟೇ? ತಾಯಾಣೆ ಒಪ್ಕೊಳ್ತೀನಿ.! ನಾನು ಸಾಯುವ ಕ್ಷಣದವರೆಗೂ ಪಾತ್ರ ಮಾಡುತ್ತೇನೆ. ಯಾಕೆಂದರೆ ಅದೇ ನನ್ನ ಪ್ರೊಫೆಷನ್. ನನಗೆ ಅದರ ಮೇಲೆ ಪ್ರೀತಿ, ಅಭಿಮಾನ, ಕಾಳಜಿ, ಗೌರವ ಮತ್ತು ಪಾತ್ರ ಮಾಡುವಂಥ ಆರೋಗ್ಯ ಎಲ್ಲವೂ ಇದೆ. ಹಾಗಾಗಿ ನಿರಾಕರಿಸುವ ಪ್ರಶ್ನೆಯೇ ಇಲ್ಲ.
ನಿಮ್ಮ ಆರೋಗ್ಯದ ರಹಸ್ಯ ಏನು?
ನನಗೆ ಈಗ ಎಪ್ಪತ್ತೊಂದು ವರ್ಷ ಆಯ್ತು. ದೇಹದ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುತ್ತೇನೆ. ಇಲ್ಲವಾದರೆ ಕೈಕಾಲು ಅಲ್ಲಾಡಿಸುವುದೇ ಕಷ್ಟವಾಗಬಹುದು. ದೇಹ ಮತ್ತು ಮನಸಿಗೆ ಸದಾ ಶ್ರಮ ಕೊಡುತ್ತಿರಬೇಕು. ಜೀವನದಲ್ಲಿ ನಂಬಿಕೆ ಭರವಸೆಗಳನ್ನು ಯಾವತ್ತಿಗೂ ಕಳೆದುಕೊಳ್ಳಬಾರದು. ಚಿಂತೆ ಮಾಡಬಾರದು. ಖಿನ್ನತೆ ಬರಬಾರದು. ಬೇರೆಯವರ ಶ್ರಿಮಂತಿಕೆ ಕಂಡು ನಾವು ಹಾಗಿರಬೇಕು ಎನ್ನುವ ಪ್ರಯತ್ನದಲ್ಲೇ ದಿನ ಕಳೆಯಬಾರದು. ಈಶ್ವರಚಂದ್ರರ ಲೈಫ್ ಹಿಸ್ಟರಿ ಓದಿಬಿಡಿ. ಆಗ ಆರೋಗ್ಯವಾದ ಬಾಳಿನ ರಹಸ್ಯ ಅರ್ಥವಾಗುತ್ತದೆ. ದೇಹಕ್ಕೆ ಕಷ್ಟ ಕೊಡುವುದರಿಂದ ರಕ್ತ ಸಂಚಲನೆ ಚೆನ್ನಾಗಿರುತ್ತದೆ. ಮನಸಿಗೆ ಕಸುವು ಕೊಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ.
ಗದಗ: ದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣನ ಪುತ್ರ
ಪುಸ್ತಕ ಓದುವುದು ನಿಮ್ಮ ಹವ್ಯಾಸವೂ ಹೌದಲ್ಲವೇ?
ಈ ಲಾಕ್ಡೌನ್ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡಿದ್ದೇ ಪುಸ್ತಕಗಳು. ನಮ್ಮ ಮನೆಯಲ್ಲಿ ಸುಮಾರು ಎರಡು ಸಾವಿರದಷ್ಟು ಪುಸ್ತಕಗಳನ್ನು ಕೊಂಡು ಇರಿಸಿದ್ದೇನೆ. ಅದರಲ್ಲಿ ನಾಟಕದ ಪುಸ್ತಕಗಳು ಕೂಡ ಸಾಕಷ್ಟಿವೆ. ಅವುಗಳಲ್ಲಿ ಎಷ್ಟೋ ಪುಸ್ತಕಗಳನ್ನು ನಾನು ಓದಿರಲಿಲ್ಲ. ಆದರೆ ಈಗ ಅವೆಲ್ಲವನ್ನು ಓದುವ ಸುಯೋಗ ಸಿಕ್ಕಿತು. ಮುಖ್ಯವಾಗಿ ಜ್ಞಾನಪೀಠ ಪುರಸ್ಕೃತ ವಿಷ್ಣು ಸಖಾರಾಂ ಖಾಂಡೇಕರ್ ಅವರು ರಚಿಸಿರುವ `ಯಯಾತಿ' ಕಾದಂಬರಿ ಓದಿದೆ. ಕನ್ನಡದಲ್ಲಿ ಓದುವುದು ಮತ್ತು ವ್ಯಾಖ್ಯಾನ ನೀಡುವುದು ಎಂದರೆ ನನಗೆ ಖುಷಿ. ಒಂದು ವೇಳೆ ಏನಾದರೂ ಜಿಜ್ಞಾಸೆ ಮೂಡಿದಾಗ ನೋಡಲು ಎರಡು ರೂಪಾಯಿ ಮತ್ತು ಹತ್ತು ರೂಪಾಯಿಗಳಿಗೆ ಕೊಂಡಂಥ `ರತ್ನಕೋಶ'ವೂ ಇವೆ!
ನಿಮ್ಮ ಇಷ್ಟು ವರ್ಷಗಳ ಅನುಭವದಲ್ಲಿ ಚಿತ್ರರಂಗವನ್ನು ಕಂಡಾಗ ಏನು ಅನಿಸುತ್ತದೆ?
ಇಂದು ಚಿತ್ರರಂಗ ಎನ್ನುವುದು ಒಂದು ರೀತಿ ಜೇಬುಗಳ್ಳರ ಸಂತೆಯಾಗಿದೆ. ಇನ್ನೊಬ್ಬರ ಜೇಬು ಕತ್ತರಿಸಿ ಸಂಪಾದನೆ ಮಾಡಿಕೊಳ್ಳುವುದೇ ಕಲೆ ಆಗಿದೆ. ಅಂದಹಾಗೆ ಈ ಮಾತು ನನ್ನದಲ್ಲ. ಹಂಸಲೇಖ ಎನ್ನುವ ಬುದ್ಧಿವಂತ ಹೇಳಿರುವ ಮಾತು ಇದು. ಅದು ಎಲ್ಲರೂ ಒಪ್ಪುವಂಥ ಮಾತು. ಯಾಕೆ ಒಂದು ರೀತಿ ಚೋರ್ ಬಜಾರ್ ಆಗಿದೆ ಎಂದರೆ ಈಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೆಚ್ಚಿನ ನಿರ್ಮಾಪಕರಿಗೆ ಟೇಸ್ಟೇ ಇಲ್ಲ. ಡೈಲಾಗ್ ಬರದೇ ಇರುವಂಥ ನಾಯಕರು, ಶ್ರದ್ಧೆ ಸಂಸ್ಕಾರ ಇರದಂಥ ನಿರ್ದೇಶಕರೇ ಹೆಚ್ಚಿದಾಗ ನಾವೇನು ಹೆಳೋಣ? ಟಿವಿ ವಾಹಿನಿಗಳು ಕೂಡ `ನೀವು ಬೆಚ್ಚಿ ಬೀಳ್ತೀರ..' ಎಂದು ಹೇಳುವ ಮೂಲಕವೇ ಸುಳ್ಳು ಹರಡುತ್ತವೆ. ಅದನ್ನೇ ಜನಗಳು ನೋಡುತ್ತಿದ್ದಾರೆ. ಸತ್ಯ ಕಠೋರವಾಗಿದೆ. ಮೊದಲೆಲ್ಲ ದೂರದರ್ಶನದ ಸುದ್ದಿಗಳು ಎಷ್ಟು ಗಂಭೀರವಾಗಿದ್ದವು. ಚಿತ್ರರಂಗ ಮಾತ್ರವಲ್ಲ ಒಟ್ಟು ಪ್ರಪಂಚವೇ ತುಂಬ ಕೂಲ್ ಆಗಿತ್ತು.
ಚಿತ್ರ ಮಂದಿರಗಳ ಪರಿಸ್ಥಿತಿ ಏನಾದೀತು?
ತಂತ್ರಜ್ಞಾನ ಬೆಳೆದ ಹಾಗೆ ನಾಳೆ ಏನಾಗುತ್ತೋ ಗೊತ್ತಿಲ್ಲ. ಸಿನಿಮಾ ತೆರೆಗೆ ಬಂದು ಜನ ಒಂದೊಂದು ಸೀಟ್ ಬಿಟ್ಟು ಕುಳಿತುಕೊಳ್ಳಬೇಕಾಗಿ ಬಂದರೆ ಈಗ ಸಾವಿರ ಸೀಟ್‌ಗಳಿರುವ ಚಿತ್ರಮಂದಿರಗಳೇ ಇಲ್ಲ. ಇತ್ತೀಚಿನ ತನಕ ಬೆಂಗಳೂರಿಗೆ `ಕಪಾಲಿ' ಚಿತ್ರಮಂದಿರ ದೊಡ್ಡದಾಗಿತ್ತು. ಆದರೆ ಅದಕ್ಕಿಂತ ಎಷ್ಟೋ ದೊಡ್ಡ ಥಿಯೇಟರ್‌ಗಳಲ್ಲಿ ಸಿನಿಮಾ ನೀಡಿ ಚಪ್ಪಾಳೆ ಹೊಡೆದ ಅಭ್ಯಾಸ ನನಗಿದೆ. ಈಗ ಅಷ್ಟು ದೊಡ್ಡ ಚಿತ್ರ ಮಂದಿರಗಳೇ ಇಲ್ಲ. ಸಾಮಾನ್ಯ ಕೂಲಿ ಮಾಡುವ ಪ್ರೇಕ್ಷಕರು ತಮ್ಮ ಮೆಚ್ಚಿನ ಕಲಾವಿದ ಪರದೆಯಲ್ಲಿ ಕಾಣಿಸಿಕೊಂಡಾಗ ಚಿಲ್ಲರೆ ಎಸೆದು ಖುಷಿ ಪಡುತ್ತಿದ್ದರು. ಕಸ ಗುಡಿಸಲು ಬರುವವರಿಗೆ ಅದೇ ಜೀವನಾಧಾರ ಆಗಿತ್ತು. ಆದರೆ ಈಗ ನಿರ್ಮಾಪಕರಲ್ಲೇ ದುಡ್ಡಿರದ ಪರಿಸ್ಥಿತಿ ಬಂದಿದೆ. ನಾಲ್ಕು ಕೋಟಿ ಸಿನಿಮಾ ಅಂದರೆ ಒಂದು ಕೋಟಿ ಕೈಯಿಂದ ಹಾಕಿ, ಉಳಿದ ಮೂರು ಕೋಟಿಯನ್ನು ಬಡ್ಡಿಗೆ ತಂದಿರುತ್ತಾನೆ. ಅವುಗಳಿಗೆ ಬಡ್ಡಿ ಕಟ್ಟಿ ಹೇಗೆ ಜೀವನ ಸಾಗಿಸಬಲ್ಲ? ಹಿಂದೆ ಅಂಬರೀಷ್ ಸೋತ ನಿರ್ಮಾಪಕನಲ್ಲಿ "ಲೇಯ್ ನಾನು ಡೇಟ್ ಕೊಡ್ತಿನಿ, ನನ್ನ ಹಾಕೊಂಡು ಒಂದು ಸಿನಿಮಾ ಮಾಡು" ಎಂದು ಹೇಳಿರುವುದನ್ನು ನೋಡಿದ್ದೇನೆ. ಒಬ್ಬ ರಾಜ್ ಕುಮಾರ್ "ನಾನೊಬ್ಬ ಊಟ ಮಾಡಿದರೆ ಸಾಲದು. ನನ್ನ ನಂಬಿಕೊಂಡು ಬೇಕಾದಷ್ಟು ಜೀವಗಳಿವೆ. ಅವರೆಲ್ಲರೂ ಊಟ ಮಾಡಬೇಕು" ಎಂದಿದ್ದು ಗೊತ್ತು. ಆದರೆ ಇದು ಅವರ ಕಾಲ ಅಲ್ಲ. ಈಗ ಮುಟ್ಟಿದರೆ ಕೋಟಿ. ಒಂದು ವೇಳೆ ಸ್ಟಾರ್ ಡೇಟ್ ಕೊಟ್ಟರು ಸಿನಿಮಾ ಬಿಡುಗಡೆ ಮಾಡುವುದೇ ಕಷ್ಟವಿದೆ. ಒಟ್ಟಿನಲ್ಲಿ ಈ ವರ್ಷವಂತೂ ಚಿತ್ರಮಂದಿರ ನಾರ್ಮಲ್ ಸ್ಥಿತಿಗೆ ಮರಳುವುದು ತುಂಬಾನೇ ಕಷ್ಟವಿದೆ.