ಜಿಎಸ್‌ಟಿ ನಷ್ಟದ ಸಾಲಕ್ಕೆ ಕೇಂದ್ರದಿಂದಲೇ ಬಡ್ಡಿ ಪಾವತಿ, ರಾಜ್ಯಗಳಿಗೆ ತುಸು ರಿಲೀಫ್‌!

Published : Aug 30, 2020, 07:23 AM ISTUpdated : Aug 30, 2020, 10:36 AM IST
ಜಿಎಸ್‌ಟಿ ನಷ್ಟದ ಸಾಲಕ್ಕೆ ಕೇಂದ್ರದಿಂದಲೇ ಬಡ್ಡಿ ಪಾವತಿ, ರಾಜ್ಯಗಳಿಗೆ ತುಸು ರಿಲೀಫ್‌!

ಸಾರಾಂಶ

ಜಿಎಸ್‌ಟಿ ನಷ್ಟದ ಸಾಲಕ್ಕೆ ಕೇಂದ್ರದಿಂದಲೇ ಬಡ್ಡಿ ಪಾವತಿ| ಆರ್‌ಬಿಐನಿಂದ ಅಗ್ಗದ ಸಾಲ| ರಾಜ್ಯಗಳಿಗೆ ತುಸು ರಿಲೀಫ್‌

ನವದೆಹಲಿ(ಆ.30): ಕೊರೋನಾ ಲಾಕ್‌ಡೌನ್‌ನಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯದಲ್ಲಿ ಭಾರಿ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಆ ಕೊರತೆಯನ್ನು ನೀಗಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ 2 ದಾರಿ ಸೂಚಿಸಿದ್ದ ಕೇಂದ್ರ ಸರ್ಕಾರ ಶನಿವಾರ ಆ ಬಗ್ಗೆ ಸ್ಪಷ್ಟತೆ ನೀಡಿದೆ. ಜಿಎಸ್‌ಟಿ ಪರಿಹಾರವನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನಿಂದ ಸಾಲದ ರೂಪದಲ್ಲಿ ಪಡೆಯಲು ರಾಜ್ಯಗಳು ಮುಂದಾದರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದರ ಜತೆಗೆ ಬಡ್ಡಿಯನ್ನು ಜಿಎಸ್‌ಟಿ ಸೆಸ್‌ ಮೂಲಕ ಪಾವತಿಸುವುದಾಗಿ ಭರವಸೆ ನೀಡಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟದ ನಡುವೆಯೇ ಸಾಲ ಮಾಡಬೇಕಾದ ಭೀತಿ ಎದುರಿಸುತ್ತಿದ್ದ ರಾಜ್ಯಗಳಿಗೆ ಕೊಂಚ ನಿರಾಳತೆ ಸಿಕ್ಕಂತಾಗಿದೆ.

ಆರ್ಥಿಕ ಸಂಕಷ್ಟ: ಎಚ್‌ಎಎಲ್‌ನ 15% ಷೇರು ಮಾರಾಟಕ್ಕೆ ಕೇಂದ್ರ ಸಿದ್ಧತೆ!

ಜಿಎಸ್‌ಟಿ ಪರಿಹಾರ ಈ ಬಾರಿ ನೀಡಲು ಆಗುವುದಿಲ್ಲ. ಹೀಗಾಗಿ ರಾಜ್ಯಗಳು ಸಾಲದ ಮೂಲಕ ಹಣ ಹೊಂದಿಸಿಕೊಳ್ಳಬೇಕು ಎಂದು ಗುರುವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದರು. ಬಿಜೆಪಿಯೇತರ ರಾಜ್ಯಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್‌ ಭೂಷಣ್‌ ಅವರು ರಾಜ್ಯಗಳಿಗೆ ಪತ್ರ ಬರೆದು ಸ್ಪಷ್ಟತೆ ನೀಡಿದ್ದಾರೆ. ಅಲ್ಲದೆ ಸೆ.1ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ರಾಜ್ಯಗಳ ಜತೆ ಸಭೆ ನಡೆಸಲು ಮುಂದಾಗಿದ್ದಾರೆ.

ಬಡ್ಡಿ ನಾವೇ ಪಾವತಿಸ್ತೀವಿ:

ಪ್ರಸಕ್ತ ವರ್ಷದಲ್ಲಿ 3 ಲಕ್ಷ ಕೋಟಿ ರು. ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ನೀಡಬೇಕಾಗಿದೆ. ಈ ಪೈಕಿ ಸೆಸ್‌ ಮೂಲಕ ಸಂಗ್ರಹವಾಗಿರುವ 65 ಸಾವಿರ ಕೋಟಿ ರು.ಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಉಳಿಕೆ 2.35 ಲಕ್ಷ ಕೋಟಿ ರು.ಗಳಲ್ಲಿ 97 ಸಾವಿರ ಕೋಟಿ ರು. ಮಾತ್ರ ಜಿಎಸ್‌ಟಿ ಪರಿಹಾರವಾಗಿದೆ. ಮಿಕ್ಕ ಹಣ ಕೋವಿಡ್‌ನಿಂದ ಆರ್ಥಿಕತೆ ಮೇಲಾಗಿರುವ ನಷ್ಟ. ಈ ಪೈಕಿ 97 ಸಾವಿರ ಕೋಟಿ ರು.ಗಳನ್ನು ರಾಜ್ಯ ಸರ್ಕಾರಗಳು ಸಾಲ ಮಾಡಲು ಬಯಸಿದರೆ, ಭಾರತೀಯ ರಿಸವ್‌ರ್‍ ಬ್ಯಾಂಕ್‌ ಮೂಲಕ ವಿಶೇಷ ಏಕಗವಾಕ್ಷಿ ವ್ಯವಸ್ಥೆಯಡಿ ಕಡಿಮೆ ಬಡ್ಡಿಗೆ ಸಾಲ ಕೊಡಿಸಲಾಗುತ್ತದೆ. ಈ ಸಾಲದ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಜಿಎಸ್‌ಟಿ ಸೆಸ್‌ ಮೂಲಕ ಪಾವತಿಸುತ್ತದೆ. ಇದು ಮೊದಲ ಆಯ್ಕೆಯಾಗಿದೆ ಎಂದು ರಾಜ್ಯಗಳಿಗೆ ಪತ್ರ ಬರೆದಿದೆ.

13,764 ಕೋಟಿ ರು. ಜಿಎಸ್‌ಟಿ ಪರಿಹಾರಕ್ಕೆ ರಾಜ್ಯ ಆಗ್ರಹ

ಇನ್ನು ಎರಡನೇ ಆಯ್ಕೆಯಡಿ, 2.35 ಲಕ್ಷ ಕೋಟಿ ರು.ಗಳನ್ನು ರಾಜ್ಯಗಳು ಮಾರುಕಟ್ಟೆಸಾಲಪತ್ರಗಳ ಮೂಲಕ ಸಂಗ್ರಹಿಸಬಹುದು. ಈ ಸಾಲಕ್ಕೆ ರಾಜ್ಯಗಳೇ ತಮ್ಮ ಸಂಪನ್ಮೂಲದಿಂದ ಬಡ್ಡಿ ಪಾವತಿಸಬೇಕು. ಅಸಲನ್ನು ಜಿಎಸ್‌ಟಿ ಸೆಸ್‌ ಮೂಲಕ ತೀರಿಸಬಹುದು ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್‌ ಭೂಷಣ್‌ ಅವರು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ. ಈ ಎರಡರ ಪೈಕಿ ಯಾವುದೇ ಆಯ್ಕೆಯನ್ನೂ ಬಳಸಿಕೊಂಡರೂ, ರಾಜ್ಯಗಳ ಸಾಲ ಪಡೆಯುವ ಮಿತಿಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ನಡುವೆ, ರಿಸವ್‌ರ್‍ ಬ್ಯಾಂಕ್‌ನಿಂದ ರಾಜ್ಯ ಸರ್ಕಾರಗಳಿಗೇ ಸಾಲ ಮಾಡುವ ಅವಕಾಶ ಕಲ್ಪಿಸಿದರೆ ಕೆಟ್ಟಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರವೇ ಸಾಲ ಮಾಡಿ ರಾಜ್ಯಗಳಿಗೆ ನೀಡಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ. ಆದರೆ, ಈ ರೀತಿ ಮಾಡಿದರೆ, ಕೇಂದ್ರ ಸರ್ಕಾರದ ಸೆಕ್ಯುರಿಟಿಗಳಿಗೆ ಸಿಗುವ ಪ್ರತಿಫಲ ಕಡಿಮೆಯಾಗಲಿದ್ದು, ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಹೀಗಾಗಿ ರಾಜ್ಯಗಳೇ ಸಾಲ ಮಾಡಿದರೆ ಉತ್ತಮ ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ.

ದ್ವಿಚಕ್ರ ವಾಹನ ದರ ಭಾರೀ ಇಳಿಕೆ?

2 ಆಯ್ಕೆಗಳು

1. .97000 ಕೋಟಿ: ರಾಜ್ಯಗಳ ಒಟ್ಟಾರೆ ಜಿಎಸ್‌ಟಿ ನಷ್ಟ. ಇದನ್ನು ಭರಿಸಲು ಆರ್‌ಬಿಐ ಮೂಲಕ ಸಾಲ. ಇದಕ್ಕೆ ಕೇಂದ್ರದಿಂದ ಬಡ್ಡಿ ಪಾವತಿ

2. .2.35 ಲಕ್ಷ ಕೋಟಿ: ರಾಜ್ಯಗಳ ಒಟ್ಟಾರೆ ಆದಾಯ ನಷ್ಟ. ಇದಕ್ಕೆ ಮಾರುಕಟ್ಟೆಯಿಂದ ಸಾಲ ಪಡೆಯಲು ಅವಕಾಶ. ಬಡ್ಡಿ ರಾಜ್ಯಗಳೇ ಕಟ್ಟಬೇಕು

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..