ರಾಗಿ ಇಳುವರಿ ಕುಂಠಿತ: ಮಾರಾಟಕ್ಕೆ ಹಿಂಜರಿಕೆ, ಕೇವಲ 6857 ರೈತರಿಂದ ಪೂರೈಕೆ!

By Kannadaprabha NewsFirst Published May 8, 2024, 12:45 PM IST
Highlights

ಕೇವಲ 6857 ರೈತರಿಂದ 1.42 ಲಕ್ಷ ಟನ್ ರಾಗಿ ಪೂರೈಕೆ. ಒಟ್ಟು 12,106 ರೈತರಿಂದ 2.95 ಲಕ್ಷ ಟನ್ ರಾಗಿ ನೋಂದಣಿ. ಪ್ರತಿ ಕ್ವಿಂಟಲ್‌ ಗೆ 3846 ರು. ನಿಗದಿ, ಗಡುವು ವಿಸ್ತರಣೆ

ಎಂ.ಅಫ್ರೋಜ್ ಖಾನ್

ರಾಮನಗರ (ಮೇ.8): ಕಳೆದ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಕಾದು ಕುಳಿತು ಪೈಪೋಟಿಗಿಳಿದಿದ್ದ ರೈತರು, ಈ ಬಾರಿ ತೀರಾ ನೀರಸ ಪ್ರತಿಕ್ರಿಯೆ ತೋರಿದ್ದಾರೆ.

ಬರಗಾಲದಿಂದ ರಾಗಿ ಇಳುವರಿ ಕುಂಠಿತಗೊಂಡಿದ್ದು, ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಮೊದಲು ಮಾರ್ಚ್ 31ರವರೆಗೆ ನೀಡಿದ್ದ ಗಡು‍‍ವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈಗ ನೋಂದಣಿ ಮಾಡಿಕೊಂಡವರ ಪೈಕಿ ಶೇ.50ರಷ್ಟು ರೈತರು ಮಾತ್ರ ರಾಗಿ ಪೂರೈಕೆ ಮಾಡಿದ್ದಾರೆ.

ಆಹಾರ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತಕ್ಕೆ ಸರ್ಕಾರ ಇಂತಿಷ್ಟು ಕ್ವಿಂಟಲ್‌ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಲು ಗುರಿ ನೀಡಿತ್ತು. ಅದರಂತೆ 12,106 ರೈತರು 2,95,398 ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು.

ಆದರೆ, ಈವರೆಗೆ 6,857 ರೈತರು ಮಾತ್ರ 1,42,942 ಕ್ವಿಂಟಲ್ ರಾಗಿಯನ್ನು ಸರಬರಾಜು ಮಾಡಿದ್ದಾರೆ. ಉಳಿದಂತೆ ನೋಂದಣಿ ಮಾಡಿಸಿಕೊಂಡಿರುವ ರೈತರು ಖರೀದಿ ಕೇಂದ್ರದತ್ತ ಮುಖ ಮಾಡುತ್ತಿಲ್ಲ.

ಗಗನಕ್ಕೆ ಹೋಗುತ್ತಿರುವ ತಂಬಾಕಿನ ಬೆಲೆ, ಉತ್ಪಾದನೆ ಇಳಿಮುಖ

ರಾಗಿ ಖರೀದಿ ಅನುಮಾನ: ಕಳೆದ (2022-23ನೇ) ಸಾಲಿನಲ್ಲಿ 77 ಸಾವಿರ ಹೆಕ್ಟೇರ್ ಪೈಕಿ 66,719 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿತ್ತು. ಆಗ 22,350 ರೈತರು 3.29 ಲಕ್ಷ ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 20,589 ರೈತರು 3.02 ಲಕ್ಷ ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿ ಲಾಭ ಕಂಡಿದ್ದರು.

ಪ್ರಸಕ್ತ ಸಾಲಿನಲ್ಲಿ 72,600 ಹೆಕ್ಟೇರ್ ಗುರಿಯಲ್ಲಿ 63,111 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಾಗಿ ಬೆಳೆ ಇದೆ. ಈ ಬಾರಿ ಮಳೆ ಅಭಾವದಿಂದ ನಿರೀಕ್ಷಿತ ಪ್ರಮಾಣದಷ್ಟು ರಾಗಿಯೇ ಉತ್ಪಾದನೆ ಆಗಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕನೇ ಒಂದು ಭಾಗದಷ್ಟು ರಾಗಿಯೂ ಖರೀದಿ ಆಗುವುದು ಅನುಮಾನವಾಗಿದೆ.

ಹಾಸನ: ಅನುಮಾನಸ್ಪದ ಸಾವು, ಅಂತ್ಯಸಂಸ್ಕಾರ ಮಾಡಿದ ಶವ 6 ತಿಂಗಳ ಬಳಿಕ ಹೊರತೆಗೆದು ಪರೀಕ್ಷೆ!

ಕ್ವಿಂಟಲ್ ರಾಗಿಗೆ 3846 ರು. ನಿಗದಿ: ಸರ್ಕಾರ ರಾಗಿಯ ದರವನ್ನು ಪ್ರತಿ ಕ್ವಿಂಟಲ್‌ ಗೆ 3846 ರು. ನಿಗದಿ ಮಾಡಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಲ್ ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲಾಗುತ್ತದೆ. ಈ ದರ ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ, ಬೆಳೆಯೇ ಇಲ್ಲದಿರುವುದರಿಂದ ರೈತರಲ್ಲಿ ನಿರಾಸೆ ಮೂಡಿಸಿದೆ.

ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಿದ್ದೇವೆ. ಬ್ಯಾನರ್ ಹಾಕಿದ್ದೇವೆ, ಕರಪತ್ರ ಹಂಚಿದ್ದೇವೆ. ಈ ಸಲ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಆದರೂ ನೋಂದಣಿ ಕಡಿಮೆ ಆಗಿದೆ. ಜ.1ರಿಂದಲೇ ಖರೀದಿಯನ್ನೂ ಆರಂಭಿಸಿದ್ದೇವೆ. ಈವರೆಗೆ 6857 ರೈತರು 1.42 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿದ್ದಾರೆ ಎಂದು ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ರಮೇಶ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ರಾಗಿ ಬಿತ್ತನೆ ಪ್ರಮಾಣ ಕಡಿಮೆ: ಪ್ರಸ್ತುತ ಮಳೆ ಕೊರತೆಯಿಂದ ಜಿಲ್ಲೆಯ ಆರೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲೆಯ ಮುಖ್ಯ ಬೆಳೆ ಎನಿಸಿರುವ ರಾಗಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ಬಿತ್ತನೆ ಸಮಯದಲ್ಲಿ ಮಳೆ ಬರಲಿಲ್ಲ. ನಂತರವೂ ಮಳೆ ಬಾರದ ಕಾರಣ ಮೊಳಕೆಯಲ್ಲೇ ಮುದುಡಿ ಹೋಗಿತ್ತು. ಹೀಗಾಗಿ, ಹಲವು ರೈತರು ರಾಗಿ ಬೆಳೆ ಬಾರದೆ ಕೈ ಸುಟ್ಟುಕೊಂಡಿದ್ದಾರೆ. ಮನೆ ಬಳಕೆಗೆ ಆಗುವಷ್ಟು ಮಾತ್ರ ರಾಗಿ ಉತ್ಪಾದನೆ ಆಗಿದೆ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸಹ ಸಮೃದ್ಧಿಯಾಗಿ ರಾಗಿ ಬೆಳೆದು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಿದ್ದರು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ರಾಗಿ ಸೇರಿದಂತೆ ಯಾವುದೇ ಬೆಳೆ ರೈತರ ಕೈ ಸೇರದೆ ನೆಲ ಕಚ್ಚಿದೆ.

ಮೇ 4ರವರೆಗೆ ರಾಗಿ ಮಾರಾಟದ ನೋಂದಣಿ ವಿವರ

ತಾಲೂಕು ನೋಂದಣಿ ರೈತರು ರಾಗಿ ಪ್ರಮಾಣ(ಕ್ವಿ)

ಚನ್ನಪಟ್ಟಣ 762 21185.50

ರಾಮನಗರ 942 21892.00

ಕನಕಪುರ 3792 95911.00

ಮಾಗಡಿ 6610 156408.50

ಒಟ್ಟು 12106 295398.00

ಮೇ 4ರವರೆಗೆ ರಾಗಿ ಸರಬರಾಜಿನ ವಿವರ

ತಾಲೂಕು ರಾಗಿ ಪೂರೈಸಿದ ರೈತರು ರಾಗಿ ಪ್ರಮಾಣ (ಕ್ವಿ)

ಚನ್ನಪಟ್ಟಣ 479 11858.00

ರಾಮನಗರ 639 13322.50

ಕನಕಪುರ 1355 33565.00

ಮಾಗಡಿ 4384 84196.50

ಒಟ್ಟು 6857 142942.00

click me!