ಈ ಸ್ಮಾರ್ಟ್ ಐಡಿಯಾ ಪಾಲಿಸಿ ಮನೆ ಚಿಕ್ಕದೆಂಬ ಚಿಂತೆ ಬಿಡಿ
ನಗರಗಳಲ್ಲಿನ ಪುಟ್ಟ ಮನೆಯಲ್ಲಿರುವವರು ಅತಿಥಿಗಳಿಗೆ, ನೆಂಟರಿಷ್ಟರಿಗೆ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಎದ್ದು ಕಾಣದಂತೆ ಮಾಡಲು ಹೆಣಗಾಡುತ್ತಾರೆ. ಆದ್ರೆ ಒಳಾಂಗಣ ವಿನ್ಯಾಸ ಮಾಡುವಾಗ ಸ್ಮಾಟ್ ಆಗಿ ಯೋಚಿಸುವ ಜೊತೆಗೆ ಒಂದಿಷ್ಟು ಟಿಪ್ಸ್ ಅನುಸರಿಸಿದ್ರೆ ಮನೆ ಚಿಕ್ಕದಿದೆ ಎಂಬ ಭಾವನೆಯೇ ಮೂಡುವುದಿಲ್ಲ.
ನಗರಗಳಲ್ಲಿ ಫ್ಲ್ಯಾಟ್ ಅಥವಾ ವಿಲ್ಲಾ ಖರೀದಿಸಿದ ತಕ್ಷಣ ಜಾಗ ಕಡಿಮೆಯಿದೆ,ಮನೆ ತುಂಬಾ ಚಿಕ್ಕದು ಎಂಬ ಭಾವನೆ ಮೂಡುವುದು ಸಹಜ. ಆದ್ರೆ ಮನೆಯಲ್ಲಿ ಸ್ಥಳಾವಕಾಶ ಕಡಿಮೆಯಿದ್ರೂ ಸೂಕ್ತವಾದ ಇಂಟೀರಿಯರ್ ಐಡಿಯಾಗಳನ್ನು ಅಳವಡಿಸಿಕೊಂಡ್ರೆ,ಎಲ್ಲ ವಸ್ತುಗಳನ್ನು ಲಭ್ಯವಿರುವ ಸ್ಥಳದಲ್ಲೇ ಇಡಲು ಸಾಧ್ಯವಾಗುವ ಜೊತೆಗೆ ನೋಡುಗರಿಗೆ ಜಾಗ ಕಡಿಮೆಯಿದೆ ಎಂಬ ಭಾವನೆ ಮೂಡದಂತೆ ಮಾಡಲು ಸಾಧ್ಯವಿದೆ. ಅದು ಹೇಗೆ ಅಂತೀರಾ?
ನೈಸರ್ಗಿಕ ಬೆಳಕಿರಲಿ
ಮನೆಯೊಳಗೆ ನೈಸರ್ಗಿಕವಾದ ಬೆಳಕಿದ್ದರೆ,ಸ್ಥಳಾವಕಾಶ ಕಡಿಮೆಯಿದೆ ಎಂಬ ಭಾವನೆ ಮೂಡುವುದಿಲ್ಲ. ಹಾಗಾಗಿ ಮನೆಯ ಕಿಟಕಿಗಳು ದೊಡ್ಡದಿರುವಂತೆ ನೋಡಿಕೊಳ್ಳಿ. ಒಂದು ವೇಳೆ ಕಿಟಕಿಗಳು ಚಿಕ್ಕದಿದ್ದರೂ ಹೆಚ್ಚು ಬೆಳಕು ಒಳಗೆ ಪ್ರವೇಶಿಸಲು ಅನುಕೂಲವಿರುವಂತಹ ತೆಳ್ಳಗಿನ ಕರ್ಟನ್‍ಗಳನ್ನು ಬಳಸಿ. ಗಾಳಿ, ಬೆಳಕು ಆಡುತ್ತಿರುವ ಮನೆ ತಾಜಾತನದ ಅನುಭವ ನೀಡುವ ಜೊತೆಗೆ ಮನಸ್ಸಿಗೆ ಆಹ್ಲಾದ, ಉಲ್ಲಾಸವನ್ನುಂಟು ಮಾಡುತ್ತದೆ.
ಮನೆಯಲ್ಲಿ ಕಿರಿಕಿರಿ ತಪ್ಪಿಸಲು ಅಡುಗೆ ಮನೆಗೆ ವಾಸ್ತು ಟಿಪ್ಸ್!
ಸ್ಲೈಡಿಂಗ್ ಡೋರ್‍ಗೆ ಆದ್ಯತೆ ನೀಡಿ
ಮನೆಯಲ್ಲಿ ಬಾಲ್ಕನಿ ಸೇರಿದಂತೆ ಕೆಲವೊಂದು ಜಾಗಗಳಿಗೆ ಸ್ಲೈಡಿಂಗ್ ಡೋರ್ ಬಳಸಬಹುದು. ಇದರಿಂದ ಸ್ಥಳಾವಕಾಶದ ಕೊರತೆ ಉಂಟಾಗುವುದಿಲ್ಲ. ಅದೇ ನಾರ್ಮಲ್ ಬಾಗಿಲು ಅಳವಡಿಸಿದ್ರೆ ಅದನ್ನು ತೆಗೆದು, ಹಾಕುವಾಗ ಜಾಗದ ಅಭಾವ ಎದ್ದು ಕಾಣುತ್ತದೆ. ಅಲ್ಲದೆ,ಈ ಡೋರ್‍ಗೆ ಗ್ಲಾಸ್ ವಿಂಡೋ ಇದ್ರೆ ಬೆಳಕು ರೂಮ್ ಒಳಗೆ ಪ್ರವೇಶಿಸುತ್ತದೆ. ಇನ್ನು ವಾರ್ಡ್‍ರೋಪ್‍ಗಳಿಗೆ ಕೂಡ ಸ್ಲೈಡಿಂಗ್ ಡೋರ್ ಅಳವಡಿಸುವುದು ಬೆಸ್ಟ್. ಇದರಿಂದ ರೂಮ್ ಕಿರಿದಾಗಿದ್ದರೂ ಸ್ಥಳಾವಕಾಶದ ಕೊರತೆ ಎದುರಾಗೋದಿಲ್ಲ. ಜೊತೆಗೆ ರೂಮ್ ನೋಡಿದ ತಕ್ಷಣ ಜಾಗ ಕಡಿಮೆಯಿದೆ ಎಂಬ ಭಾವನೆಯೂ ಮೂಡುವುದಿಲ್ಲ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಫ್ಯಾಟ್‍ಗಳಲ್ಲಿ ಸ್ಲೈಡಿಂಗ್ ಡೋರ್‍ಗಳ ಬಳಕೆ ಹೆಚ್ಚುತ್ತಿದೆ.ಇನ್ನು ಕಿಟಕಿಗಳಿಗೂ ಸ್ಲೈಡಿಂಗ್ ಡೋರ್ ಬಳಸಬಹುದು. ಇದರಿಂದ ಕಿಟಕಿ ಇರುವ ಸ್ಥಳದಲ್ಲಿ ಫರ್ನಿಚರ್ ಅಥವಾ ಇನ್ಯಾವುದೇ ವಸ್ತುಗಳನ್ನಿಟ್ಟರು ಕಿಟಕಿ ಬಾಗಿಲು ಅಡ್ಡಿಯುಂಟು ಮಾಡುತ್ತದೆ ಎಂಬ ತಲೆಬಿಸಿ ಇರುವುದಿಲ್ಲ.
ಸಿಂಪಲಾಗಿರುವ, ಹೆವೀ ಲುಕ್ ನೀಡದ ಫರ್ನಿಚರ್ ಆರಿಸಿ
ನೀವು ಹಾಲ್ ಅಥವಾ ಇನ್ಯಾವುದೇ ಸ್ಥಳಗಳಲ್ಲಿಡುವ ಫರ್ನಿಚರ್ ನಿಮ್ಮನೆಯಲ್ಲಿರುವ ಸ್ಥಳಾವಕಾಶವನ್ನು ನಿರ್ಧರಿಸಬಲ್ಲದು. ಹೌದು, ಪುಟ್ಟದಾದ ಹಾಲ್‍ನಲ್ಲಿ ದೊಡ್ಡ ಫರ್ನಿಚರ್‍ಯಿಟ್ಟರೆ, ಸ್ಥಳಾವಕಾಶದ ಕೊರತೆಯಿಂದ ಹಾಲ್ ಮತ್ತಷ್ಟು ಚಿಕ್ಕದಾಗಿ ಕಾಣಿಸುತ್ತದೆ. ಆದಕಾರಣ ಜಾಗ ಕಡಿಮೆಯಿರುವಾಗ ಸಿಂಪಲಾಗಿ ಆಕರ್ಷಕವಾಗಿರುವ ಲೈಟ್‍ವೈಟ್ ಸೋಫಾ ಹಾಗೂ ಕುರ್ಚಿಗಳನ್ನೇ ಆರಿಸಿ. ಇನ್ನು ಸ್ಥಳಾವಕಾಶ ಕಡಿಮೆ ಇರುವ ರೂಮ್, ಹಾಲ್ ಅಥವಾ ಬಾಲ್ಕನಿಗಳಲ್ಲಿ ಪೋಲ್ಡ್ ಮಾಡಲು ಸಾಧ್ಯವಾಗುವಂತಹ ಫರ್ನಿಚರ್‍ಗಳನ್ನು ಬಳಸುವುದರಿಂದ ಅಗತ್ಯವಿದ್ದಾಗ ಮಾತ್ರ ಅವುಗಳನ್ನು ಉಪಯೋಗಿಸಿ, ಉಳಿದ ಸಮಯದಲ್ಲಿ ಮಡಚಿ ಬೇರೆ ಕಡೆ ಇಡಬಹುದು. ಇನ್ನು ಮಲ್ಟಿ ಪರ್ಪಸ್ ಫರ್ನಿಚರ್‍ಗಳನ್ನು ಬಳಸಿ. ಕುಳಿತುಕೊಳ್ಳಲು ಹಾಗೂ ಮಲಗಲು ಎರಡಕ್ಕೂ ಅನುಕೂಲವಾಗುವ 2 ಇನ್ 1 ಸೋಫಾ, ಬೌನ್ಸ್ ಸೀಟ್ ಹಾಗೂ ಕಾಫಿ ಟೇಬಲ್ ಎರಡೂ ಕೆಲಸಕ್ಕೆ ಬಳಸಬಹುದಾದ ಕ್ಯೂಬ್‍ಗಳನ್ನು ಹಾಲ್‍ನಲ್ಲಿಡಬಹುದು.
ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್!
ಬಣ್ಣಗಳ ಆಯ್ಕೆಯಲ್ಲಿರಲಿ ಎಚ್ಚರ
ಬಣ್ಣ ಕಣ್ಣುಗಳೊಂದಿಗೆ ಆಟವಾಡುವ ಸಾಮಥ್ರ್ಯ ಹೊಂದಿದೆ. ಗೋಡೆಗಳು ಲೈಟ್ ಕಲರ್ ಪೇಯಿಂಟ್ ಹೊಂದಿದ್ರೆ ರೂಮ್‍ನಲ್ಲಿ ಹೆಚ್ಚು ಸ್ಥಳಾವಕಾಶವಿರುವ ಭಾವನೆ ಮೂಡುತ್ತದೆ. ತಿಳಿ ಬಣ್ಣಗಳು ಬೆಳಕನ್ನು ಪ್ರತಿಫಲಿಸುವ ಕಾರಣ ಇಂಥ ಅನುಭವವಾಗುತ್ತದೆ.ಅದೇ ಡಾರ್ಕ್ ಕಲರ್ ಬಳಸಿದಾಗ ಗೋಡೆ ಮತ್ತು ನಮ್ಮ ನಡುವಿನ ಅಂತರ ತಗ್ಗಿದ ಅನುಭವವಾಗುತ್ತದೆ. ಆದಕಾರಣ ಸ್ಥಳಾವಕಾಶ ಕಡಿಮೆಯಿರುವ ರೂಮ್‍ಗಳಿಗೆ ತಿಳಿ ಬಣ್ಣದ ಪೇಯಿಂಟ್‍ಗಳನ್ನೇ ಹಚ್ಚಿ. ಇದರಿಂದ ರೂಮ್ ವಿಶಾಲವಾಗಿದ್ದು, ಗಾಳಿ ಮತ್ತು ಬೆಳಕು ಹೆಚ್ಚಿರುವ ಅನುಭವವಾಗುತ್ತದೆ.
ಕನ್ನಡಿ ಬಳಸಿ ಯಾಮಾರಿಸಿ
ಕನ್ನಡಿಗೆ ಕಣ್ಣುಗಳನ್ನು ಯಾಮಾರಿಸುವ ಸಾಮಥ್ರ್ಯವಿದೆ. ಇದು ಹಳೆಯ ಟ್ರಿಕ್ಕಾದರೂ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಸ್ಥಳಾವಕಾಶ ಕಡಿಮೆಯಿರುವ ರೂಮ್ ಅಥವಾ ಪ್ಯಾಸೇಜ್‍ನಲ್ಲಿ ಕನ್ನಡಿ ಅಳವಡಿಸುವುದರಿಂದ ಜಾಗ ಹೆಚ್ಚಿರುವಂತೆ ಕಾಣಿಸುವ ಜೊತೆಗೆ ಬೆಳಕು ಚೆನ್ನಾಗಿರುವ ಅನುಭವ ನೀಡುತ್ತದೆ.
ಮನೆಯ ಅಂದ ಹೆಚ್ಚಿಸೋ ಅಕ್ವೇರಿಯಂಗೆ ವಾಸ್ತು ಟಿಪ್ಸ್
ಲೈಟಿಂಗ್ ಬಳಸಿ ಜಾಗ ಹೆಚ್ಚಿಸಿ
ಇತ್ತೀಚಿನ ದಿನಗಳಲ್ಲಿ ಮನೆಯ ಒಳಾಂಗಣ ವಿನ್ಯಾಸದಲ್ಲಿ ಲೈಟಿಂಗ್ ಭಾರಿ ಸದ್ದು ಮಾಡುತ್ತಿದೆ. ಹ್ಯಾಂಗಿಂಗ್, ವೃತ್ತಾಕಾರದ ಹಾಗೂ ಪೆಂಡಲ್ಯೂಮ್ ಲೈಟ್‍ಗಳನ್ನು ಬಳಸುವ ಮೂಲಕ ರೂಮ್ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಇವುಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ರೂಮ್ ದೊಡ್ಡದಾಗಿ ಕಾಣುವಂತೆ ಮಾಡಬಹುದು.