'ಅಧಿಕಾರ ಇಲ್ಲದಾಗ ಕಂಠಪೂರ್ತಿ ಕುಡಿದು ಅಮಾಯಕರನ್ನು ಸಾಯಿಸ್ತಾರೆ'
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೀರಾ? ಎಂದ ಸಿ. ಟಿ. ರವಿ| ಅಧಿಕಾರ ಇಲ್ಲದಾಗ ಕಂಠಪೂರ್ತಿ ಕುಡಿದು ಅಮಾಯಕರನ್ನು ಸಾಯಿಸ್ತಾರೆ| ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ!
ಬೆಂಗಳೂರು[ಅ.19]: ವೀರ ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರ ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಸಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಜಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರವಸೋದ್ಯಮ ಸಚಿವ ಸಿ. ಟಿ. ರವಿ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.
"
'ಸಾವರ್ಕರ್‌ಗೆ ಆಮೇಲೆ ಕೊಡುವಿರಂತೆ, ಮೊದಲು ಸಿದ್ದಗಂಗಾ ಶ್ರೀಗೆ ಭಾರತರತ್ನ ನೀಡಿ'
ಹೌದು ಮಹಾತ್ಮ ಗಾಂಧಿ ಹತ್ಯೆಗೆ ಸ್ಕೆಚ್ (ರೂಪರೇಷೆ) ಸಿದ್ಧಪಡಿಸಿದವರಲ್ಲಿ ಒಬ್ಬರಾದ ವಿ.ಡಿ.ಸಾವರ್ಕರ್‌ಗೆ ಭಾರತ ರತ್ನ ನೀಡುತ್ತಾರೆ. ಹಾಗಾದ್ರೆ ಗಾಂಧಿ ಕೊಲೆ ಮಾಡಿರುವ ನಾಥೂರಾಮ್ ಗೋಡ್ಸೆಗೂ ಭಾರತ ರತ್ನ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಅದಕ್ಕೂ ಮೊದಲು ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಿ ಎಂದಿದ್ದರು.
ಗೋಡ್ಸೆಗೂ ಭಾರತರತ್ನ ಕೊಡಿ: ಸಿದ್ದರಾಮಯ್ಯ ವಿವಾದ
ಸಿದ್ದರಾಮಯ್ಯರ ಈ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಸಚಿವ ಸಿ. ಟಿ. ರವಿ ಟ್ವೀಟ್ ಒಂದನ್ನು ಮಾಡುತ್ತಾ 'ಪ್ರೀತಿಯ ಸಿದ್ದರಾಮಯ್ಯರವರೇ, ರಾಷ್ಟ್ರೀಯವಾದಿ ವೀರ ಸಾವರ್ಕರ್ ರನ್ನು ಗಾಂಧಿ ಹತ್ಯೆಗೆ ರೂಪರೇಷೆ ಕೊಟ್ಟವರೆಂದು ಹೇಳಿದ್ದೀರಿ. ನೀವು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೀರಾ? ಇತಿಹಾಸ ಏನೆಂದು ನಿಮಗೆ ಗೊತ್ತಾ? ನೀವ್ಯಾಕೆ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಬಾರದು? ನಾನೇ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇನೆ' ಎಂದಿದ್ದರು.
ಸಚಿವ ಸಿ. ಟಿ. ರವಿಯವರ ಈ ಟ್ವೀಟ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. 'ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ' ಎಂದು ಟಾಂಗ್ ನೀಡಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ!' ಎಂದು ವ್ಯಂಗ್ಯವಾಡಿದ್ದಾರೆ.