ಗೋಡ್ಸೆಗೂ ಭಾರತರತ್ನ ಕೊಡಿ: ಸಿದ್ದರಾಮಯ್ಯ ವಿವಾದ

ವಿ.ಡಿ.ಸಾವರ್ಕರ್‌ಗೆ ಭಾರತ ರತ್ನ ನೀಡುತ್ತಾರೆ. ಹಾಗಾದ್ರೆ ಗಾಂಧಿ ಕೊಲೆ ಮಾಡಿರುವ ನಾಥೂರಾಮ್‌ ಗೋಡ್ಸೆಗೂ ಭಾರತ ರತ್ನ ಕೊಡಲಿ ಎಂದ ಸಿದ್ದರಾಮಯ್ಯ ಹೇಳಿಕೆಗೆ ಭಾರಿ ವಿವಾದ ಸೃಷ್ಟಿ ಮಾಡಿದೆ. 

Congress Leader Siddaramaiah Controversy Statement On VD savarkar

ಮಂಗಳೂರು/ ಬೆಂಗಳೂರು [ಅ.19]:  ಮಹಾತ್ಮ ಗಾಂಧಿ ಹತ್ಯೆಗೆ ಸ್ಕೆಚ್‌ (ರೂಪರೇಷೆ) ಸಿದ್ಧಪಡಿಸಿದವರಲ್ಲಿ ಒಬ್ಬರಾದ ವಿ.ಡಿ.ಸಾವರ್ಕರ್‌ಗೆ ಭಾರತ ರತ್ನ ನೀಡುತ್ತಾರೆ. ಹಾಗಾದ್ರೆ ಗಾಂಧಿ ಕೊಲೆ ಮಾಡಿರುವ ನಾಥೂರಾಮ್‌ ಗೋಡ್ಸೆಗೂ ಭಾರತ ರತ್ನ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸಾವರ್ಕರ್‌ ಒಬ್ಬ ವಿವಾದಾತ್ಮಕ ವ್ಯಕ್ತಿ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿಲ್ಲ. ಅಲ್ಲದೆ, ಮಹಾತ್ಮ ಗಾಂಧೀಜಿ ಹತ್ಯೆಯ ಸಂಚಿನಲ್ಲಿ ಇವರೂ ಕೂಡ ಬಹಳ ಹತ್ತಿರದಲ್ಲಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಆಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವೀರ ಸಾವರ್ಕರ್‌ ಅವರನ್ನು ನಾಥೂರಾಮ್‌ ಗೋಡ್ಸೆಗೆ ಹೋಲಿಸಿ ಹೇಳಿಕೆ ನೀಡಿರುವುದು ಕೀಳು ಅಭಿರುಚಿಯ ಪ್ರತೀಕವಾಗಿರುವುದರಿಂದ ಕೂಡಲೇ ರಾಜ್ಯದ ಜನತೆಯನ್ನು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ವೀರ್‌ ಸಾವರ್ಕರ್‌ ಅವರು ಮಹಾತ್ಮಾ ಗಾಂಧಿ ಹತ್ಯೆಗೆ ಸ್ಕೆಚ್‌ ಹಾಕಿದವರಲ್ಲಿ ಒಬ್ಬರು. ಆರೋಪಿಯಾಗಿದ್ದ ಅವರ ವಿರುದ್ಧ ಸಾಕಷ್ಟುಸಾಕ್ಷ್ಯಗಳಿಲ್ಲ ಎಂಬ ಕಾರಣಕ್ಕೆ ಖುಲಾಸೆಯಾಗಿದ್ದರು. ಆದರೆ ಗಾಂಧಿ ಕೊಲೆ ಪಿತೂರಿಯಲ್ಲಿ ಅವರ ಪಾತ್ರವಿದೆ. ಅವರಿಗೆ ಭಾರತರತ್ನ ನೀಡಲು ಹೊರಟಿದ್ದಾರೆ. ಹೀಗಾದರೆ ಈ ದೇಶದ ಕತೆ ಏನಾಗಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಆರೆಸ್ಸೆಸ್‌ ಆಗಲಿ, ಹಿಂದೂ ಮಹಾಸಭಾ ಆಗಲಿ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಅವರು ಬ್ರಿಟಿಷರೊಂದಿಗೆ ಸೇರಿದ್ದರು. ಇಂಥವರು ದೇಶದಲ್ಲಿ ಅಧಿಕಾರ ನಡೆಸಲು ಯಾವುದೇ ಕಾರಣಕ್ಕೂ ಬಿಡಬಾರದು. ಕೋಮುವಾದಿಗಳು ಡೇಂಜರ್‌, ಅವರ ಬಗ್ಗೆ ಹುಷಾರಾಗಿರಬೇಕು. ಸಂವಿಧಾನದ ಮೇಲೆ ಅವರಿಗೆ ಮೂರು ಕಾಸಿನ ಗೌರವ ಇಲ್ಲ. ಜನರನ್ನು ಬ್ರೈನ್‌ವಾಶ್‌ ಮಾಡ್ತಿದ್ದಾರೆ. ನಮ್ಮನ್ನೇ ಧರ್ಮ ವಿರೋಧಿಗಳು ಎಂದು ಸುಳ್ಳೇ ಬಿಂಬಿಸುತ್ತಿದ್ದಾರೆ. ನಮಗೆ ರಾಮನ ಬಗ್ಗೆ, ಪೈಗಂಬರ್‌ ಬಗ್ಗೆ, ಏಸುಕ್ರಿಸ್ತನ ಬಗ್ಗೆ ಗೌರವ ಇದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಬೆಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾವರ್ಕರ್‌ಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿರುವ ಚುನಾವಣಾ ಪ್ರಣಾಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬ್ರಿಟಿಷರ ವಿರುದ್ಧ ಸಾವರ್ಕರ್‌ ಹೋರಾಟ ಮಾಡಿಲ್ಲ. ಹೀಗಾಗಿ ಅವರು ಪ್ರಶ್ನಾತೀತ ವ್ಯಕ್ತಿ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿಯವರ ಹತ್ಯೆಯ ಸಂಚಿಗೂ ಹತ್ತಿರ ಇದ್ದವರಿಗೆ ಭಾರತರತ್ನ ನೀಡುವುದು ಸರಿಯಲ್ಲ. ಅವರೊಬ್ಬ ವಿವಾದಾತ್ಮಕ ವ್ಯಕ್ತಿ ಎಂದು ಹೇಳಿದರು.

ಸಿದ್ದು ಕ್ಷಮೆಯಾಚಿಸಬೇಕು- ಬಿಎಸ್‌ವೈ:

ಸ್ವಾತಂತ್ರ್ಯ ಹೋರಾಟಗಾರರ ಕುರಿತು ಇಂತಹ ಲಘು ಹೇಳಿಕೆ ನೀಡುವ ಮೂಲಕ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವಂತಹದ್ದಲ್ಲ. ಬದಲಾಗಿ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುವುದು ಸೂಕ್ತ. ಈ ರೀತಿ ಅಸಂಬದ್ಧವಾಗಿ ಹೇಳಿಕೆ ನೀಡುವುದರಿಂದ ತಾನೊಬ್ಬ ಉತ್ತಮ ವಾಗ್ಮಿ, ಬುದ್ಧಿವಂತ ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಹೇಳಿಕೆ ಮೂಲಕ ಕುಟುಕಿದ್ದಾರೆ.

ಈ ಹೇಳಿಕೆಯನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇನೆ. ವೀರ ಸಾವರ್ಕರ್‌ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ದೇಶಪ್ರೇಮಿ. ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಕೆಲವು ಕಾಂಗ್ರೆಸ್‌ ಮುಖಂಡರೇ ಬೆಂಬಲ ಸೂಚಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ಮಾತ್ರ ಸಾವರ್ಕರ್‌ ಅವರನ್ನು ಗೋಡ್ಸೆಗೆ ಹೋಲಿಸಿರುವುದು ಕೀಳುಮಟ್ಟದ ಅಭಿರುಚಿಯಾಗಿದೆ ಎಂದು ಕಿಡಿಕಾರಿದ್ದಾರೆ.

Latest Videos
Follow Us:
Download App:
  • android
  • ios