Asianet Suvarna News Asianet Suvarna News

ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ ಸಮಸ್ಯೆ!

ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ ಸಮಸ್ಯೆ!| ಮಂತ್ರಿಮಾಲ್‌- ನಾಗಸಂದ್ರ ಮೆಟ್ರೋ ನಿಲ್ದಾಣದ ನಡುವಿನ 50ಕ್ಕೂ ಹೆಚ್ಚು ಪಿಲ್ಲರ್‌ಗಳಲ್ಲಿ ದುರಸ್ತಿ ಕಾರ‍್ಯ

Bearing issue Cracks Found in More Than 50 Pillers Of Namma Metro
Author
Bangalore, First Published May 11, 2020, 7:35 AM IST

ಬೆಂಗಳೂರು(ಮೇ.11): ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿನ ಮಂತ್ರಿಮಾಲ್‌ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಕೆಲವು ಪಿಲ್ಲರ್‌ಗಳಲ್ಲಿ ಬಿರುಕು ಬಿಟ್ಟಿದೆ ಹಾಗೂ ಬೇರಿಂಗ್‌ಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದು, ರಿಪೇರಿ ಕಾಮಗಾರಿ ನಡೆಯುತ್ತಿದೆ. ಆದರೆ ಇದನ್ನು ಮೆಟ್ರೋ ನಿಗಮವು ನಿರಾಕರಿಸಿದೆ.

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.23ರಿಂದ ಬೈಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮತ್ತು ಯಲಚೇನಹಳ್ಳಿ- ನಾಗಸಂದ್ರ (ಹಸಿರು ಮಾರ್ಗ)ದ ಮೆಟ್ರೋ ನಿಲ್ದಾಣಗಳ ನಡುವಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಮಂತ್ರಿ ಮಾಲ್‌ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಕೆಲವು ಪಿಲ್ಲರ್‌ಗಳನ್ನು ದುರಸ್ತಿಗೊಳಿಸುವ ಕಾರ್ಯ ಮತ್ತು ಹಾಳಾಗಿರುವ ಬೇರಿಂಗ್‌ ಬದಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ಗಂಭೀರವಾಗಿ ಆರೋಪಿಸಿದ್ದಾರೆ.

ಕೊರೋನಾ ಎಫೆಕ್ಟ್: ಬೆಂಗಳೂರಲ್ಲಿ ಮರುಕಳಿಸಿದ 30 ವರ್ಷಗಳ ಹಿಂದಿನ ಹವಾಗುಣ!

ನಿರ್ವಹಣಾ ಕಾಮಗಾರಿ ನೆಪದಲ್ಲಿ ಸುಮಾರು 50ಕ್ಕೂ ಹೆಚ್ಚು ಪಿಲ್ಲರ್‌ಗಳ ದುರಸ್ತಿ ಮಾಡಲಾಗಿದೆ. ಹಲವು ಪಿಲ್ಲರ್‌ಗಳ ಬೇರಿಂಗ್‌ ಬದಲಿಸಲಾಗುತ್ತಿದೆ. ಒಂದು ಬೇರಿಂಗ್‌ 5ರಿಂದ 10 ಲಕ್ಷ ಮೌಲ್ಯದ್ದಾಗಿದೆ. ಲಕ್ಷಾಂತರ ರುಪಾಯಿ ಮೌಲ್ಯದ ಕಾಮಗಾರಿಗೆ ಟೆಂಡರ್‌ ಕರೆದಿಲ್ಲ. ನಿಯಮ ಉಲ್ಲಂಘಿಘಿಸಿ ದುರಸ್ತಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.

ಬೇರಿಂಗ್‌ಗಳು ಕನಿಷ್ಠ 20 ವರ್ಷ ಬಾಳಿಕೆ ಬರಬೇಕು. ಪಿಲ್ಲರ್‌ಗಳು ಕೂಡ ಹತ್ತಾರು ವರ್ಷ ಹಾಳಾಗಬಾರದು. ಆದರೆ, ಮೂರ್ನಾಲ್ಕು ವರ್ಷದಿಂದ ಒಂದಿಲ್ಲೊಂದು ಪಿಲ್ಲರ್‌ ಬಿರುಕು ಬಿಡುತ್ತಲೇ ಇದೆ. 2018 ಡಿಸೆಂಬರ್‌ನಲ್ಲಿ ಟ್ರಿನಿಟಿ ವೃತ್ತದ ನಿಲ್ದಾಣ ಸಮೀಪದ ಪಿಲ್ಲರ್‌ ಸಂಖ್ಯೆ 156ರಲ್ಲಿ ಬಿರುಕು ಬಿಟ್ಟಿತ್ತು. ನಂತರ ಇಂದಿರಾ ನಗರದ ನಿಲ್ದಾಣದ ಪಿಲ್ಲರ್‌ ಸಂಖ್ಯೆ 8 ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದ ಪಿಲ್ಲರ್‌ ಸಂಖ್ಯೆ 2 ಮತ್ತು 3ರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ನಂತರ ಆರ್‌.ವಿ.ರಸ್ತೆಯ ಪಿಲ್ಲರ್‌ನಲ್ಲೂ ಬಿರುಕು ಕಾಣಿಸಿಕೊಂಡಿತ್ತಾದರೂ ರಾತ್ರೋರಾತ್ರಿ ದುರಸ್ತಿ ಮಾಡಲಾಗಿತ್ತು.

ಹೀಗೆ ಪದೇ ಪದೇ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಮೆಟ್ರೋ ಕಾಮಗಾರಿಯಲ್ಲಿ ಗುಣಮಟ್ಟದ ಕೆಲಸವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಬಿಎಂಆರ್‌ಸಿಎಲ್‌ ಈವರೆಗೂ ಗುತ್ತಿಗೆದಾರರ ಮೇಲೆ ಕ್ರಮ ಕೆæೖಗೊಂಡಿಲ್ಲ. ಸಂಬಂಧಪಟ್ಟಅಧಿಕಾರಿಗಳ ವಿರುದ್ಧವೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಭ್ರಷ್ಟಾಚಾರ ನಡೆಯುತ್ತಿದ್ದರೂ ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಸೂರ್ಯನಾರಾಯಣ್‌ ಆರೋಪಿಸಿದ್ದಾರೆ. ಕೂಡಲೇ ಭ್ರಷ್ಟಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು. ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮೊಬಿಲಿಟಿ ಕಾರ್ಡ್‌ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ

ಮೆಟ್ರೋ ಕಾಮಗಾರಿಯಲ್ಲಿ ಗುಣಮಟ್ಟಕಾಯ್ದುಕೊಂಡಿಲ್ಲ. ಪಿಲ್ಲರ್‌, ಬೇರಿಂಗ್‌ ದುರಸ್ತಿ ಕೆಲಸ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವರು ಮತ್ತು ಮೆಟ್ರೋ ಆಡಳಿತ ಮಂಡಳಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಮೆಟ್ರೋಗೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು.

-ಸೂರ್ಯನಾರಾಯಣಮೂರ್ತಿ, ಉಪಾಧ್ಯಕ್ಷ, ಬಿಎಂಆರ್‌ಸಿಎಲ್‌ ಎಂಪ್ಲಾಯೀಸ್‌ ಅಸೋಸಿಯೇಷನ್‌.

ನಾಂಗಸಂದ್ರದಿಂದ ಯಶವಂತಪುರ ಮಾರ್ಗದಲ್ಲಿ ಯಾವುದೇ ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿಲ್ಲ. ಎಂದಿನಂತೆ ನಿರ್ವಹಣಾ ಕಾರ್ಯ ನಡೆಯುತ್ತಿದ್ದು ಸಣ್ಣಪುಟ್ಟರಿಪೇರಿ ಕೆಲಸ ಮಾಡಲಾಗುತ್ತಿದೆ. ಮುಖ್ಯವಾಗಿ ರೈಲ್ವೆ ಹಳಿಗಳ ಅಕ್ಕ ಪಕ್ಕ ಮಳೆ ನೀರು ನಿಲುಗಡೆಯಾಗದಂತೆ ಸರಿಪಡಿಸಲಾಗುತ್ತಿದೆ.

-ಯಶವಂತ್‌ ಚವ್ಹಾಣ್‌, ಹಿರಿಯ ಅಧಿಕಾರಿ, ಬಿಎಂಆರ್‌ಸಿಎಲ್‌.

Follow Us:
Download App:
  • android
  • ios