ಮೊಬಿಲಿಟಿ ಕಾರ್ಡ್ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ ಕಾರ್ಡ್)ನ್ನು ನಮ್ಮ ಮೆಟ್ರೋದಲ್ಲಿ ಅನುಷ್ಠಾನಕ್ಕೆ ತರಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.
ಬೆಂಗಳೂರು [ಜ.30]: ದೆಹಲಿಯ ಮೆಟ್ರೋ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಬಳಕೆಯಲ್ಲಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ ಕಾರ್ಡ್)ನ್ನು ನಮ್ಮ ಮೆಟ್ರೋದಲ್ಲೂ ಅನುಷ್ಠಾನಕ್ಕೆ ತರಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.
ಎನ್‌ಸಿಎಂಸಿ ಕಾರ್ಡ್ ಬಳಕೆಗೆ ಅನುಕೂಲವಾಗುವಂತೆ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮುಂದಿನ ಎರಡು ತಿಂಗಳಲ್ಲಿ ನಮ್ಮ ಮೆಟ್ರೋದಲ್ಲಿ ಎನ್‌ಸಿಎಂಸಿ ಕಾರ್ಡ್ ಬಳಕೆ ಆರಂಭಿಸುವ ಮುನ್ಸೂಚನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ನೀಡಿದೆ.
ಎನ್‌ಸಿಎಂಸಿ ಕಾರ್ಡ್ ಒಮ್ಮೆ ಬಳಕೆಗೆ ಬಂದರೆ ಪ್ರಯಾಣಿಕರು ದೆಹಲಿ, ಚೆನ್ನೈ ಸೇರಿದಂತೆ ದೇಶದ ಯಾವುದೇ ಮೆಟ್ರೋದಲ್ಲಿ ಈ ಕಾರ್ಡ್ ಬಳಸಬಹುದಾಗಿದೆ. ಒಂದು ವೇಳೆ ಬಿಎಂಟಿಸಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಬಿಎಂಟಿಸಿ ಪ್ರಯಾಣಿಕರು ಕೂಡ ಎನ್‌ಸಿಎಂಸಿ ಕಾರ್ಡ್ ಮೂಲಕ ಪ್ರಯಾಣಿಸಬಹುದಾಗಿದೆ.
ದಾಬಸ್‌ಪೇಟೆವರೆಗೆ ಮೆಟ್ರೋ ಯೋಜನೆ ವಿಸ್ತರಣೆ?...
ಒನ್-ನೇಷನ್ ಒನ್ ಕಾರ್ಡ್ ಘೋಷಣೆಯೊಂದಿಗೆ ಕೇಂದ್ರ ಸರ್ಕಾರ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್(ಎನ್‌ಸಿಎಂಸಿ ಕಾರ್ಡ್) ಬಿಡುಗಡೆಗೊಳಿಸಿತ್ತು. ಹೊಸದಿಲ್ಲಿಯಲ್ಲಿ ಮೆಟ್ರೋ ಮತ್ತು ಸರ್ಕಾರಿ ಬಸ್‌ಗಳಲ್ಲಿ ಈ ಕಾರ್ಡ್‌ಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿತ್ತು. ಇದೀಗ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸ್ವಾಗತ್ ಹೆಸರಿನ ‘ಏಕೀಕೃತ ದರ ಸಂಗ್ರಹ ದ್ವಾರ’ಗಳನ್ನು ಅಳವಡಿಸಿದೆ. ಈ ದ್ವಾರದಲ್ಲಿ ಮೊಬಿಲಿಟಿ ಕಾರ್ಡನ್ನು ಬಳಸಬಹುದಾಗಿದ್ದು, ಇನ್ನೆರಡು ದಿನಗಳಲ್ಲಿ ಮೊಬಿಲಿಟಿ ಕಾರ್ಡ್ ಕುರಿತು ಬಿಎಂಆರ್‌ಸಿಎಲ್ ಅಧಿಕೃತ ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆ ಇದೆ.
ಸ್ವಯಂ ಚಾಲಿತ ಶುಲ್ಕ ಸಂಗ್ರಹ(ಎಎಫ್‌ಸಿ) ಗೇಟ್ ಸಮೀಪದಲ್ಲೇ ‘ಸ್ವಾಗತ್ ಗೇಟ್’ಗಳನ್ನು ಅಳವಡಿಸಲಾಗಿದೆ. ತಾಂತ್ರಿಕ ಜೋಡಣೆ ಕಾರ್ಯ ಬಾಕಿ ಇದ್ದು, ಏಪ್ರಿಲ್ ಮೊದಲ ವಾರದೊಳಗೆ ಪ್ರಾಯೋಗಿಕ ಸೇವೆ ಆರಂಭಿಸಲು ಯೋಜಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.