ಅಪ್ಪನಂತಹ ಬಾಸ್ ಇದ್ರೆ ಉದ್ಯೋಗಿಗಳು ಫುಲ್ ಖುಷ್!

ಬಾಸ್ ಬಂದ್ರು ಅಂದ ತಕ್ಷಣ ಇಡೀ ಕಚೇರಿ ಜಾಗ್ರತವಾಗುತ್ತದೆ. ಬಾಸ್ ಅಂದ್ರೆ ಗೌರವ, ಭಯ. ಆದ್ರೆ ಬಾಸ್ ಭಯ ಹುಟ್ಟಿಸುವ ವ್ಯಕ್ತಿಯಾಗುವುದಕ್ಕಿಂತ ಒಳ್ಳೆಯ ಸ್ನೇಹಿತನಂತಾದ್ರೆ ಕೆಲಸಗಾರರು ಅತ್ಯುತ್ತಮ ನಿರ್ವಹಣೆ ತೋರುತ್ತಾರೆ ಎನ್ನುತ್ತದೆ ಒಂದು ಅಧ್ಯಯನ. 
 

Boss should show compassion towards his employees for better work

ಪ್ರತಿ ಕೆಲಸದಲ್ಲೂ ತಪ್ಪು ಹುಡುಕುವ, ಸದಾ ಸಿಡುಕುವ ಬಾಸ್ ಕೈಕೆಳಗೆ ಕಾರ್ಯನಿರ್ವಹಿಸುವುದು ಬಿಸಿ ತುಪ್ಪವನ್ನು ಬಾಯಿಯಲ್ಲಿಟ್ಟುಕೊಂಡಷ್ಟೇ ಕಷ್ಟ. ಅತ್ತ ಹೇಳುವಂಗೂ ಇಲ್ಲ, ಇತ್ತ ಕೆಲಸ ಮಾಡದೆ ಇರುವಂಗೂ ಇಲ್ಲ. ಪ್ರತಿ ಕೆಲಸ ಮಾಡುವಾಗಲೂ ಮನಸ್ಸು ಹೆಚ್ಚು ಜಾಗೃತವಾಗುತ್ತದೆ. ಪರಿಣಾಮ ತಪ್ಪಾಗುತ್ತದೆ ಎಂಬ ಭಯದಲ್ಲೇ ನಮ್ಮ ಅರಿವಿಗೇ ಬಾರದೆ ತಪ್ಪು ನಡೆದು ಬಿಡುತ್ತದೆ. ಪ್ರತಿದಿನ ಬೈಗುಳ, ಒತ್ತಡ, ಬೇಸರ ತಪ್ಪಿದ್ದಲ್ಲ.

ಟ್ರಾಫಿಕ್‌ನಲ್ಲಿ ಪೇಚಾಡೋ ಉದ್ಯೋಗಿಗಳಿಗೆ ಕೆಲಸದಲ್ಲಿ ತೃಪ್ತಿನೇ ಇರೋಲ್ವಂತೆ!

ಅದೇ ನಿಮ್ಮ ಯೋಗಕ್ಷೇಮಾ ವಿಚಾರಿಸುವ, ಸಲಹೆ ನೀಡುವ, ಚಿಕ್ಕಪುಟ್ಟ ತಪ್ಪು ನಡೆದಾಗ ಮುಂದೆ ಹಾಗಾದಂತೆ ಎಚ್ಚರ ವಹಿಸುವಂತೆ ತಿಳಿ ಹೇಳುವ ಬಾಸ್ ಇದ್ದರೆ ಕೆಲಸದ ಹೊರೆ ಎಷ್ಟಿದ್ದರೂ ಒತ್ತಡ ಕಾಡುವುದಿಲ್ಲ. ಆಫೀಸ್‍ನ ವಾತಾವರಣ ಉಸಿರುಗಟ್ಟಿಸುವುದಿಲ್ಲ. ‘ದಿ ಲೀಡರ್‍ಶಿಪ್ ಕ್ವಾರ್ಟಲಿ’ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನ ಕೂಡ ಈ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ‘ನಿಮ್ಮ ಕೈ ಕೆಳಗೆ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಉತ್ತಮ ನಿರ್ವಹಣೆ ತೋರಬೇಕೆಂದರೆ ಅವರ ಮೇಲೆ ಅಧಿಕಾರಯುತವಾಗಿ ಹಕ್ಕು ಚಲಾಯಿಸುವ ಬದಲು ಕರುಣೆ ಹಾಗೂ ಸಹಾನುಭೂತಿಯ ಮೂಲಕ ಶಿಸ್ತನ್ನು ಹೇರಲು ಪ್ರಯತ್ನಿಸಿ’ ಎಂಬ ಸಲಹೆಗಳನ್ನು ಬಾಸ್‍ಗಳಿಗೆ ಈ ಅಧ್ಯಯನ ನೀಡಿದೆ. 

ಅಧ್ಯಯನದ ಸುತ್ತ: ಅಮೆರಿಕದ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್‍ನ ಪ್ರಾಧ್ಯಾಪಕರ ತಂಡ ಬಾಸ್ ಹಾಗೂ ಅಧೀನ ಉದ್ಯೋಗಿಗಳ ನಡುವಿನ ಸಂಬಂಧದ ಕುರಿತು ಅಧ್ಯಯನ ನಡೆಸಿತ್ತು. ಇದಕ್ಕಾಗಿ ತೈವಾನೀಸ್ ಮಿಲಿಟರಿಯ 1000 ಸದಸ್ಯರು ಹಾಗೂ ಅಮೆರಿಕದಲ್ಲಿ ಪೂರ್ಣಕಾಲಿಕಾ ಉದ್ಯೋಗದಲ್ಲಿ ತೊಡಗಿರುವ 200 ವಯಸ್ಕರನ್ನು ಈ ಸಮೀಕ್ಷೆಗೆ ಒಳಪಡಿಸಿತ್ತು.

ಸ್ಟ್ರಿಕ್ಟ್ ಹೆಡ್‍ಮಾಸ್ಟರ್ ಆಗಬೇಡಿ: ಟಾರ್ಗೆಟ್ ರೀಚ್ ಆಗಬೇಕು, ಅಂದ್ಕೊಂಡ ಪ್ರಾಜೆಕ್ಟ್ ಅನ್ನು ಡೆಡ್‍ಲೈನ್‍ನೊಳಗೆ ಪೂರ್ಣಗೊಳಿಸಬೇಕು ಎಂಬ ಯೋಜನೆ ಹಾಕಿರುವ ಬಾಸ್ ಅದನ್ನು ಪೂರ್ಣಗೊಳಿಸಲು ತನ್ನ ಅಧೀನದಲ್ಲಿರುವ ಉದ್ಯೋಗಿಗಳೊಂದಿಗೆ ಸ್ಟ್ರಿಕ್ಟ್ ಹೆಡ್‍ಮಾಸ್ಟರ್ ರೀತಿಯಲ್ಲಿ ವರ್ತಿಸಿದರೆ ಕೆಲಸ ಕೆಡುವುದು ಗ್ಯಾರಂಟಿ ಎಂದಿದೆ ಈ ಅಧ್ಯಯನ. 

ಯಶಸ್ಸು ಸಿಕ್ಕಿತೆಂದು ಅಟ್ಟಹತ್ತಿ ಬೀಗುತ್ತ ಕುಳಿತರೆ ಕೆಳಗೆ ಬಿದ್ದೀರಿ, ಜೋಕೆ !

ಪೋಷಕರು-ಮಕ್ಕಳಂತಿರಲಿ ಬಾಸ್-ಉದ್ಯೋಗಿಗಳ ಸಂಬಂಧ: ಬಾಸ್ ತನ್ನ ಅಧೀನ ಕೆಲಸಗಾರರ ಮೇಲೆ ತಂದೆ-ತಾಯಿಯಂತಹ ಕಾಳಜಿ, ಅಕ್ಕರೆ ತೋರಿದಾಗ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ ಎಂದು ಈ ಅಧ್ಯಯನ ತಿಳಿಸಿದೆ. ಇಲ್ಲಿ ಬಾಸ್ ಪೋಷಕರಂತೆ ವರ್ತಿಸಬೇಕು ಎಂದಿರುವುದಕ್ಕೆ ಕಾರಣವಿದೆ. ಅದೇನೆಂದರೆ ಪೋಷಕರಿಗೆ ಸಹಜವಾಗಿಯೇ ತಮ್ಮ ಮಕ್ಕಳ ಮೇಲೆ ನಿರೀಕ್ಷೆಗಳಿರುತ್ತವೆ. ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಪೋಷಕರು ಮಗುವಿಗೆ ಅಗತ್ಯವಾದ ಅಕ್ಕರೆ, ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಮೂಲಕ ಅವರು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ. ಆಗ ಮಕ್ಕಳು ಕೂಡ ಪೋಷಕರ ಮೇಲಿನ ಪ್ರೀತಿ ಹಾಗೂ ಗೌರವದಿಂದ ಶ್ರಮ ವಹಿಸಿ ಓದಿ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರುತ್ತಾರೆ.

ಬಾಸ್ ಕೂಡ ತನ್ನ ಉದ್ಯೋಗಿಗಳ ಬಗ್ಗೆ ಹೆತ್ತವರು ಮಕ್ಕಳಿಗೆ ತೋರುವಂತಹ ಕಾಳಜಿ, ಬೆಂಬಲ ಹಾಗೂ ಪ್ರೋತ್ಸಾಹ ನೀಡಿದಾಗ ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಹಾಗೂ ಕೆಲಸ ಮುಗಿಯುವ ಕಡೆಗೆ ಒಟ್ಟಿಗೆ ಗಮನ ನೀಡಿದಾಗ ಉದ್ಯೋಗಿಗಳ ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬರುತ್ತದೆ.ಕೆಲಸಕ್ಕೆ ಸಂಬಂಧಿಸಿದಂತೆ ಬಾಸ್ ಆಗಿ ನಿಮ್ಮ ನಿರೀಕ್ಷೆಗಳು ಹಾಗೂ ಆದ್ಯತೆಗಳ ಬಗ್ಗೆ ಕಡ್ಡಿಮುರಿದಂತೆ ತಿಳಿಸುವ ಜೊತೆಗೆ ಅಗತ್ಯ ಸಂದರ್ಭಗಳಲ್ಲಿ ಅವರಿಗೆ ನೆರವು ನೀಡಲು ಮರೆಯಬೇಡಿ.

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು!

ಬಾಸಿಸ್‍ಂ ತೋರಿಸಿದ್ರೆ ಕೆಲಸ ಕೆಡುತ್ತೆ: ಕೆಲವರಿಗೆ ಉನ್ನತ ಸ್ಥಾನಕ್ಕೇರಿದ ತಕ್ಷಣ ಅಹಂ ಆವರಿಸಿಕೊಂಡು ಬಿಡುತ್ತದೆ. ಉದ್ಯೋಗಿಗಳ ಜೊತೆಗೆ ಚೆನ್ನಾಗಿ ಮಾತನಾಡಿದರೆ, ಬೆರೆತರೆ ಅವರು ತಲೆಮೇಲೆ ಹತ್ತಿ ಕುಳಿತುಕೊಳ್ಳಬಹುದು ಎಂಬ ಭಯ ಬೇರೆ ಕಾಡುತ್ತದೆ. ಇದೇ ಕಾರಣಕ್ಕೆ ಕೆಳಗಿನವರ ಮೇಲೆ ದರ್ಪ ತೋರುತ್ತಾರೆ. ಕಠಿಣ ನಿಲುವುಗಳನ್ನು ಪ್ರದರ್ಶಿಸಿದರೆ ಕೆಲಸ ಚೆನ್ನಾಗಿ ಆಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಬಾಸಿಸ್‍ಂ ಉದ್ಯೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಮೂಲಕ ಕೆಲಸ ಕೆಡಿಸುತ್ತದೆ. ಆದಕಾರಣ ನಿಮ್ಮ ಉದ್ಯೋಗಿಗಳಿಂದ ಉತ್ತಮ ಫಲಿತಾಂಶ ಪಡೆಯಲು ಅವರೊಂದಿಗೆ ಸ್ನೇಹ ಸಂಬಂಧ ಕಾಯ್ದುಕೊಳ್ಳಿ. ಆದರೆ, ಕೆಲಸದ ಗುಣಮಟ್ಟದ ವಿಷಯದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ರಾಜೀಯಾಗಬೇಡಿ.

Latest Videos
Follow Us:
Download App:
  • android
  • ios