Asianet Suvarna News Asianet Suvarna News

ಮಂತ್ರಿಗಿರಿ, ವಿಜಯನಗರ ಜಿಲ್ಲೆ ಎರಡನ್ನೂ ಪಡೆಯುತ್ತೇನೆ: ಆನಂದ ಸಿಂಗ್‌

ಮೈಸೂರು ದಸರಾ ಉತ್ಸವದಂತೆ ಹಂಪಿ ಉತ್ಸವ ಆಚರಣೆಗೆ ಮನ್ನಣೆ ನೀಡಬೇಕಿದೆ| ಮುಂದಿನ ದಿನಗಳಲ್ಲಿ ಹಂಪಿ ಉತ್ಸವಕ್ಕೆ ನಿಗದಿತ ದಿನಾಂಕದಲ್ಲಿ ನಡೆಯುವಂತೆ ರಾಜ್ಯಪತ್ರ ಹೊರಡಿಸಲಾಗುವುದು| ಯಾವುದೇ ಸರ್ಕಾರ ಬಂದರೂ ಹಂಪಿ ಉತ್ಸವ ಮೈಸೂರು ದಸರಾ ಉತ್ಸವದಂತೆ ವೈಭವವಾಗಿ ನಡೆಯಬೇಕು|

MLA Anand Singh Talks Over Vijayanagara District
Author
Bengaluru, First Published Dec 26, 2019, 9:08 AM IST

ಹೊಸಪೇಟೆ(ಡಿ.26): ಮಂತ್ರಿಗಿರಿ ಜೊತೆಯಲ್ಲಿಯೇ ವಿಜಯನಗರ ಜಿಲ್ಲೆ ರಚನೆ ಕನಸು ನನಸಾಗಲಿದೆ ಎಂದು ಶಾಸಕ ಆನಂದ ಸಿಂಗ್‌ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಬುಧವಾರ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ಪ್ರಮುಖ ಬೇಡಿಕೆಯಾಗಿದ್ದರೂ ಸಚಿವ ಸ್ಥಾನ ಕೂಡ ನನಗೆ ಸಿಗಲಿದೆ. ರಾಜಕೀಯ ಪಟ್ಟುಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದ ಅವರು, ಜಿಲ್ಲೆ-ಮಂತ್ರಿ ಎರಡೂ ಸಿಗುವುದು ಖಚಿತ ಎಂಬ ಸಂದೇಶ ನೀಡಿದರು.

ವಿಜಯನಗರ ಪ್ರಖಾತ ಅರಸ ಶ್ರೀ ಕೃಷ್ಣದೇವರಾಯ ಅವರ ಪಟ್ಟಾಭಿಷೇಕ ದಿನವಾದ ಜನವರಿ 10ರಂದು ವಿಜಯನಗರ ಜಿಲ್ಲೆ ರಚನೆ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದು, ಜನವರಿ 10ರಂದು ಜಿಲ್ಲೆ ಘೋಷಣೆಯಾದರೂ ಆಗಬಹುದು ಎಂದು ಸುಳಿವು ನೀಡಿದರು.

ದಸರಾ ಮನ್ನಣೆ ಅಗ​ತ್ಯ:

ಮೈಸೂರು ದಸರಾ ಉತ್ಸವದಂತೆ ಹಂಪಿ ಉತ್ಸವ ಆಚರಣೆಗೆ ಮನ್ನಣೆ ನೀಡಬೇಕಿದೆ. ಈ ಹಿಂದೆ ಹಂಪಿ ಉತ್ಸವ ನವಂಬರ್‌ 3, 4 ಮತ್ತು 5 ರಂದು ನಡೆಯುತ್ತಿತ್ತು. ಆದರೆ ಸ್ಥಿರ ಸರ್ಕಾರಗಳ ಇಲ್ಲದೇ ಕಾರಣ ಉತ್ಸವ ಆಚರಣೆ ದಿನಾಂಕ ಸೇರಿದಂತೆ ಕೆಲವ ಅಡೆತಡೆಗಳಿಂದ ಹಂಪಿ ಉತ್ಸವ ಕಡೆಗಣನೆ ಆಗಿದೆ. ಮುಂದಿನ ದಿನಗಳಲ್ಲಿ ಹಂಪಿ ಉತ್ಸವಕ್ಕೆ ನಿಗದಿತ ದಿನಾಂಕದಲ್ಲಿ ನಡೆಯುವಂತೆ ರಾಜ್ಯಪತ್ರ ಹೊರಡಿಸಲಾಗುವುದು. ಯಾವುದೇ ಸರ್ಕಾರ ಬಂದರೂ ಹಂಪಿ ಉತ್ಸವ ಮೈಸೂರು ದಸರಾ ಉತ್ಸವದಂತೆ ವೈಭವವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಉತ್ಸವಕ್ಕೆ ಅಗತ್ಯಅನುದಾನ ಮೀಸಲಿಡಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಂಪಿ ಉತ್ಸವ ಆಚರಣೆ ಆಸಕ್ತಿ ಕಡಿಮೆ ಇರುವುದಾಗಿ ಒಪ್ಪಿಕೊಂಡ ಅವರು, ಬೇರೆ ಜಿಲ್ಲೆಯವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ಹಂಪಿ ಉತ್ಸವ ಸಿದ್ಧತೆ ಮಂದಗತಿಯಲ್ಲಿದೆ. ಅಧಿಕಾರಿಗಳಿಗೆ ಜವಬ್ದಾರಿ ನೀಡಲಾಗಿದೆ ಅವರು ಈಗಾಗಲೇ ಸಿದ್ಧತೆ ನಡೆಸಿದ್ದಾರೆ ಎಂದರು.

ನಗರಸಭೆ ಚುನಾವಣೆ:

ಮುಂದಿನ ದಿನಗಳಲ್ಲಿ ನಡೆಯುವ ನಗರಸಭೆ ಚುನಾವಣೆಯಲ್ಲಿ ಹೊಸಪೇಟೆ ನಗರಸಭೆ 35 ಸ್ಥಾನಗಳಲ್ಲಿ 25ರಿಂದ 27 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಪಕ್ಷದ ಸದಸ್ಯರೇ ಮುಂದಿನ ಅಧ್ಯಕ್ಷರಾಗುವುದು ಖಚಿತ ಎಂದು ಭವಿಷ್ಯ ನುಡಿದರು. ಆರಂಭದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಮಂಡಲ ನೂತನ ಅಧ್ಯಕ್ಷ ಬಸವಾರ ನಾಲತ್ವಾಡ, ಮಾಜಿ ಅಧ್ಯಕ್ಷ ಅನಂತ ಪದ್ಮನಾಭ, ಸಾಲಿ ಸಿದ್ದಯ್ಯ ಸ್ವಾಮಿ, ಅಶೋಕ್‌ ಜೀರೆ, ಶಶಿಧರಯ್ಯ ಇನ್ನಿತರರಿದ್ದರು.
 

Follow Us:
Download App:
  • android
  • ios