Asianet Suvarna News Asianet Suvarna News

ಗುಡ್ ನ್ಯೂಸ್ : ಸರ್ಕಾರಿ ಜಮೀನಿನಲ್ಲಿರುವ ಮನೆಗಳಿಗೆ ಹಕ್ಕು ಪತ್ರ

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಅಂತವರಿಗೆ ಸರ್ಕಾರ  ಶುಭ ಸುದ್ದಿಯೊಂದನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರ ಅಂತಹ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡುತ್ತಿದೆ. 

If Your House Is In Govt Land Karnataka Govt Give Ownership Letter
Author
Bengaluru, First Published Jan 24, 2020, 8:27 AM IST

ಬೆಂಗಳೂರು [ಜ.24]:  ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ನೆಲೆಸಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಬಡ ಜನತೆಗೆ ರಾಜ್ಯ ಸರ್ಕಾರವು ಸಂತಸದ ಸುದ್ದಿಯನ್ನು ನೀಡಿದ್ದು, ಅಕ್ರಮ-ಸಕ್ರಮ ಯೋಜನೆಯಡಿ ಇಂತಹ 10 ಸಾವಿರ ಫಲಾನುಭವಿಗಳಿಗೆ ತಾವು ನೆಲೆಸಿರುವ ನಿವೇಶನದ ಹಕ್ಕು ಪತ್ರ ನೀಡಲು ತೀರ್ಮಾನಿಸಿದೆ.

ಜ.28ರಂದು ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಕ್ಕು ಪತ್ರವನ್ನು ವಿತರಣೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿನ ಬಡವರು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲಾಗುತ್ತದೆ. 20/30 ಮತ್ತು 30/40 ಅಳತೆಯಲ್ಲಿ ನಿರ್ಮಿಸಿಕೊಂಡಿರುವ ಮನೆ ಮಾಲಿಕರಿಗೆ ಮಾತ್ರ ಕ್ರಯಪತ್ರ ಮಾಡಿಕೊಡಲಾಗುತ್ತದೆ. 30 ವರ್ಷದಿಂದ ನೆಲೆಸಿರುವ ಬಡವರಿಗೆ ಮಾತ್ರ ಈ ಅಕ್ರಮ-ಸಕ್ರಮ ಯೋಜನೆ ಅನ್ವಯವಾಗಲಿದೆ. 2012ರ ಜ.1ಕ್ಕಿಂತ ಮೊದಲು ಮನೆ ನಿರ್ಮಿಸಿಕೊಂಡಿರುವವರಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಭಾಗಶಃ ಕುಸಿದ ಮನೆ ದುರಸ್ತಿಗೂ ಸರ್ಕಾರ ನೆರವು..

ಬಸವಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಜ.28ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಕ್ಕುಪತ್ರ ವಿತರಿಸಲಿದ್ದಾರೆ. 94ಸಿ, 94ಸಿಸಿ ಕಾಯ್ದೆಯಡಿ ಬಡವರಿಗೆ ವಿತರಣೆ ಮಾಡಲಾಗುತ್ತಿದ್ದು, ವಾರ್ಷಿಕ ಆದಾಯವನ್ನು ಪರಿಗಣಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 20/30 ಅಳತೆಯ ನಿವೇಶನ ಹೊಂದಿರುವ ಎಸ್‌ಸಿ/ಎಸ್‌ಟಿ ವರ್ಗದವರು .2,500 ನೋಂದಣಿ ಶುಲ್ಕ, ಸಾಮಾನ್ಯ ವರ್ಗದವರು .5 ಸಾವಿರ ಶುಲ್ಕ ಪಾವತಿಸಿ ಹಕ್ಕುಪತ್ರ ಪಡೆದುಕೊಳ್ಳಬಹುದು. 30/40 ನಿವೇಶನಗಳ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್‌ಸಿ, ಎಸ್‌ಟಿ ವರ್ಗದವರು .5 ಸಾವಿರ, ಸಾಮಾನ್ಯ ವರ್ಗದವರು .10 ಸಾವಿರ ಶುಲ್ಕ ಪಾವತಿಸಬೇಕು. ಹಕ್ಕು ಪತ್ರಗಳನ್ನು ಪಡೆಯಲು ತಾಲೂಕುವಾರು ಪ್ರತ್ಯೇಕ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಸರ್ಕಾರದಿಂದ ಬಡವರಿಗೆ ಮನೆ : ಶೀಘ್ರ ಚಾಲನೆ..

ಅಕ್ರಮ ಸಕ್ರಮ ಯೋಜನೆಯಡಿ ರಾಜ್ಯಾದ್ಯಂತ 2.53 ಲಕ್ಷ ಅರ್ಜಿಗಳು ಬಂದಿದ್ದವು. ಈ ಪೈಕಿ 1,47,465 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತು 45,456 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ರಾಜ್ಯದಲ್ಲಿ ಹಂತಹಂತವಾಗಿ ಹಕ್ಕುಪತ್ರಗಳನ್ನು ನೀಡಲಾಗುತ್ತದೆ ಎಂದರು.

Follow Us:
Download App:
  • android
  • ios