ಅಂತ್ಯಕ್ರಿಯೆಯಿಂದ 2 ಕುಟುಂಬದ 17 ಮಂದಿಗೆ ಕೊರೋನಾ ಸೋಂಕು? ಆತಂಕದಲ್ಲಿ ಜನತೆ..!
ವಿಜಯಪುರದ ಒಂದು ಕುಟುಂಬದ 11 ಮಂದಿಗೆ ಸೋಂಕು| ಮತ್ತೊಂದು ಕುಟುಂಬದ 6 ಮಂದಿಗೆ ಕೊರೋನಾ ದೃಢ| ನಗರದ ಚಪ್ಪರಬಂದ್ ಬಡಾವಣೆಯ ಮಹಿಳೆ ಮತ್ತು ಕುಟುಂಬ (ರೋಗಿ ಸಂಖ್ಯೆ 221)ವು ಕೆಲ ಸಮಯದ ಹಿಂದೆ ಮಹಾರಾಷ್ಟ್ರದ ಇಚಲಕರಂಜಿಗೆ ಅಂತ್ಯಕ್ರಿಯೆಗೆ ಹೋಗಿಬಂದಿತ್ತು|
ವಿಜಯಪುರ(ಏ.17): ಜಿಲ್ಲೆಯ ಎರಡು ಕುಟುಂಬಗಳ 17 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸೋಂಕಿತರ ಮೂಲಕ ಈ ಎರಡೂ ಕುಟುಂಬಗಳ ಸದಸ್ಯರಿಗೆ ಕೊರೋನಾ ತಗುಲಿದೆ ಎಂದು ಶಂಕಿಸಲಾಗಿದೆ.
ನಗರದ ಚಪ್ಪರಬಂದ್ ಬಡಾವಣೆಯ ಮಹಿಳೆ ಮತ್ತು ಕುಟುಂಬ (ರೋಗಿ ಸಂಖ್ಯೆ 221)ವು ಕೆಲ ಸಮಯದ ಹಿಂದೆ ಮಹಾರಾಷ್ಟ್ರದ ಇಚಲಕರಂಜಿಗೆ ಅಂತ್ಯಕ್ರಿಯೆಗೆ ಹೋಗಿಬಂದಿತ್ತು. ಈ ವೇಳೆ ಅವರಿಗೆ ಸೋಂಕು ತಗುಲಿದೆ. ಈ ಮಹಿಳೆ ಕುಟುಂಬದಲ್ಲಿ 24 ಮಂದಿ ಇದ್ದಾರೆ.
ರಾಜ್ಯಕ್ಕೆ ಕೊರೋನಾಘಾತ; ಒಂದೇ ದಿನ 35 ಪ್ರಕರಣಗಳು! ಎಲ್ಲೆಲ್ಲಿ?
ಈ ಪೈಕಿ ಈಗಾಗಲೇ ನಾಲ್ವರು ಪುರುಷರು, ಇಬ್ಬರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಕುಟುಂಬದಲ್ಲಿರುವ ಇನ್ನುಳಿದ ಸದಸ್ಯರ ಗಂಟಲ ದ್ರವವನ್ನ ಈಗಾಗಲೇ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈಗಾಗಲೇ ಈ ಮಹಿಳೆಯ ಪತಿ ಕೊರೋನಾದಿಂದಲೇ ಮೃತಪಟ್ಟಿದ್ದಾರೆ.
2ನೇ ಪ್ರಕರಣದಲ್ಲೂ ‘ಮಹಾ’ ಲಿಂಕ್:
ಇನ್ನು ಇದೇ ಬಡಾವಣೆಯ ಮತ್ತೊಂದು ಕುಟುಂಬಕ್ಕೂ ಸೋಂಕು ಮಹಾರಾಷ್ಟ್ರ ಮೂಲದ ಕುಟುಂಬ ಸದಸ್ಯರಿಂದಲೇ ತಗುಲಿದೆ. ಪುಣೆ ಮೂಲದ ಮಹಿಳೆಯೊಬ್ಬರು (ರೋಗಿ ನಂ.2 ಚಪ್ಪರಬಂದ್ 28) ಮಕ್ಕಳ ಸಮೇತ ವಿಜಯಪುರಕ್ಕೆ ಆಗಮಿಸಿ ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಂಡು ಇಲ್ಲೇ ಉಳಿದುಕೊಂಡಿದ್ದರು. ಈಕೆಗೆ ಸೋಂಕು ತಗುಲಿರುವುದು ದೃಢವಾಗಿದೆ. ಈಕೆಯ ಕುಟುಂಬದಲ್ಲಿ ಒಟ್ಟು 25 ಜನರಿದ್ದು, ಸದ್ಯ ಒಂದೂವರೆ ವರ್ಷದ ಹೆಣ್ಣು ಮಗು ಸೇರಿ ಒಟ್ಟು 5ಮಂದಿಗೆ ಸೋಂಕು ದೃಢಪಟ್ಟಿದೆ.