ಶಾಸಕ ಯತ್ನಾಳಗೆ ಬಿಜೆಪಿ ವರಿಷ್ಠರಿಂದ ತಕ್ಕ ಪಾಠ ಎಂದ ಕೇಂದ್ರ ಸಚಿವ
ಕೇಂದ್ರ ಸರ್ಕಾರ ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ ಎಂದು ಟೀಕಿಸಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ವರಿಷ್ಠರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಕೇಂದ್ರ ಸಚಿವ ಸದಾನಂದಗೌಡ| ಪಕ್ಷದ ಹಿರಿಯ ನಾಯಕರಾಗಿ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದು ಸರಿಯಲ್ಲ| ತಾವು ಮತ್ತು ರಾಜ್ಯದ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರಿಂದ ರಾಜ್ಯಕ್ಕೆ 1200 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆಂದು ತಿಳಿಸಿದರು|
ಗಂಗಾವತಿ(ಅ.5): ಕೇಂದ್ರ ಸರ್ಕಾರ ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ ಎಂದು ಟೀಕಿಸಿ ಹೇಳಿಕೆ ನೀಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ವರಿಷ್ಠರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ಮುನಿರಾಬಾದ್‌ನಿಂದ ರಾಯಚೂರಿಗೆ ತೆರುಳುವ ಮಾರ್ಗದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರಾಗಿ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದು ಸರಿಯಲ್ಲ. ತಾವು ಮತ್ತು ರಾಜ್ಯದ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರಿಂದ ರಾಜ್ಯಕ್ಕೆ 1200 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪರಿಹಾರ ನೀಡುವ ಬಗ್ಗೆ ವಿಳಂಬವಾಗಿರಬಹುದು. ಆದರೆ, ರಾಜ್ಯಕ್ಕೆ 1200 ಕೋಟಿ ಪರಿಹಾರ ನೀಡುವುದರ ಮೂಲಕ ರಾಜ್ಯದ ಬರ ಪೀಡಿತ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಇಲ್ಲಿ ಯಾರೇ ತಪ್ಪು ಮಾಡಿರಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಯತ್ನಾಳ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತರಾಗಿರಬಹುದು. ಆದರೆ, ಬಿಜೆಪಿಯಲ್ಲಿದ್ದುಕೊಂಡು ಇಂತಹ ಹೇಳಿಕೆ ನೀಡಿದ್ದರಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗುತ್ತದೆ. ವಿನಾಕಾರಣ ವಿರೋಧ ಪಕ್ಷದವರು ಇಲ್ಲ ಸಲ್ಲದ ಅರೋಪ ಮಾಡುತ್ತಿದ್ದು, ಅವರಂತೆ ಇವರೂ ಮಾಡುವುದು ಸರಿಯಲ್ಲ ಎಂದು ಯತ್ನಾಳ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಚಕ್ರವರ್ತಿ ದೇಶದ್ರೋಹಿ ಎಂದಿಲ್ಲ:
ಚಕ್ರವರ್ತಿ ಸೂಲಿಬೆಲೆ ಬಗ್ಗೆ ತಾವು ಏನೂ ಮಾತನಾಡಿಲ್ಲ ಎಂದು ಹೇಳಿದ ಸದಾನಂದಗೌಡರು, ರಾಜ್ಯದಲ್ಲಿ 25 ಸಂಸದರು ಇದ್ದರೂ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂಬ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದ್ದಲ್ಲದೆ, ಪ್ರಧಾನಿ ವಿರುದ್ಧ ಮಾತನಾಡಿರುವುದು ದೊಡ್ಡ ದುರಂತವಾಗಿದೆ. ಒಂದು ವೇಳೆ ಸೂಲಿಬೆಲೆ ಅವರಿಗೆ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ. ರಾಜ್ಯದ ಸಂಸದರು ಇಲ್ಲಿಯ ಸಮಸ್ಯೆಯನ್ನು ಅರಿತು ಕೇಂದ್ರದ ಗಮನಕ್ಕೆ ತರುತ್ತಿದ್ದಾರೆ. ಅವರು ನಮ್ಮವರೇ, ಪಕ್ಷದ ವಿರುದ್ಧ ಮತ್ತು ಪ್ರಧಾನಿ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದರು.
ಕೇಂದ್ರದಿಂದ ಮಧ್ಯಂತರ ಪರಿಹಾರ:
ಕೇಂದ್ರ ಸರ್ಕಾರ ಪ್ರವಾಹ ಪೀಡಿತರಿಗಾಗಿ 1200 ಕೋಟಿ ಮಧ್ಯಂತರ ಪರಿಹಾರ ನೀಡಿದ್ದು, ಇನ್ನೂ ಹೆಚ್ಚಿನ ಪರಿಹಾರ ನೀಡಲಿದೆ. ಈಗಾಗಲೇ ಕೇರಳ, ತೆಲಂಗಾಣ, ಬಿಹಾರ ರಾಜ್ಯಗಳಿಗೆ ಪರಿಹಾರ ನೀಡಿದ್ದರೂ, ಕರ್ನಾಟಕಕ್ಕೆ ದೊಡ್ಡ ಪ್ರಮಾಣದ ಪರಿಹಾರ ನೀಡಿದೆ. ಬಿಹಾರ ರಾಜ್ಯಕ್ಕೆ 400 ಕೋಟಿ ಅನುದಾನ ನೀಡಲಾಗಿದೆ. ಪ್ರವಾಹ ಪೀಡಿತರಿಗೆ ರಕ್ಷಣೆ, ಮನೆಗಳ ನಿರ್ಮಾಣ, ಸಾಂಕ್ರಾಮಿಕ ರೋಗ ನಿಯಂತ್ರಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಇದಕ್ಕೂ ಸಹ ಕೇಂದ್ರ ಅನುದಾನ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಸಗೊಬ್ಬರದ ಕೊರತೆ ಇಲ್ಲ:
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಜಿಲ್ಲಾವಾರು ಬೇಡಿಕೆ- ಪೂರೈಕೆ ಪಟ್ಟಿತೆಗೆದುಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ರೈತರಿಗೆ ಆರೋಗ್ಯ ಮತ್ತು ಶಿಕ್ಷಣದಲ್ಲಿ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗುತ್ತಿದೆ. ಈಗಾಗಲೇ 30 ಜಿಲ್ಲೆಗಳ ಪೈಕಿ 21 ಜಿಲ್ಲೆಯಗಳಿಗೆ ಭೇಟಿ ನೀಡಿದ್ದು ಇಏತರ ಜಿಲ್ಲೆಗಳಿಗೂ ಭೇಟಿ ನೀಡಲಾಗುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಈ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದ್ದು, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತದೆ ಎಂದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚೆ ಮಾಡಲಾಗಿದೆ ಎಂದರು.