ದೆಹಲಿ ‘ಕಮಲ’ ಮುಡಿಯದಿರಲು ಕಾರಣ: ಬೆರೆಸಲೇ ಇಲ್ಲ ಅಭಿವೃದ್ಧಿಯ ಹೂರಣ!
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಅಂತ್ಯ| ಮತ್ತೆ ಅಧಿಕಾರ ಪಡೆದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್| ಒಟ್ಟು 67 ಕ್ಷೇತ್ರಗಳಲ್ಲಿ ಜಯಗಳಿಸಿದ ಆಮ್ ಆದ್ಮಿ ಪಕ್ಷ| ಕೇವಲ 07 ಕ್ಷೇತ್ರಗಳಿಗೆ ತೃಪ್ತಿ ಪಡೆದುಕೊಂಡ ಬಿಜೆಪಿ| ದೆಹಲಿಯಲ್ಲಿ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್| ದೆಹಲಿ ಸೋಲಿನ ಆಘಾತದಲ್ಲಿ ಬಿಜೆಪಿ| ಬಿಜೆಪಿ ದೆಹಲಿ ಸೋಲಿಗೆ ಕಾರಣಗಳೇನು?| ಅಭಿವೃದ್ಧಿ ಅಜೆಂಡಾ ಮರೆತ ಬಿಜೆಪಿಗೆ ಮತದಾರನಿಂದ ತಕ್ಕ ಶಾಸ್ತಿ|
ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.
ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 63 , ಬಿಜೆಪಿ 07 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.
‘ಆಪ್’ ಕಾ ದಿಲ್ಲಿ: ಕೇಜ್ರಿ ಕುಳಿತರು ಮತ್ತೆ ಗದ್ದುಗೆಯಲ್ಲಿ!
ಈ ಮೂಲಕ ಆಪ್ ಮತ್ತೆ ಅಧಿಕಾರ ಪಡೆದಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಕಾಂಗ್ರೆಸ್ ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆಯಲು ವಿಫಲವಾಗಿದ್ದರೂ, ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2015ರಲ್ಲಿ ಕೇವಲ 3 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ 07 ಸೀಟುಗಳಿಸಿರುವುದು ಗಮನಾರ್ಹ.
ಆದರೂ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲೇ ಮುನ್ನಡೆದ ಬಿಜೆಪಿ, ದೆಹಲಿಯಲ್ಲಿ ಅಧಿಕಾರ ಪಡೆಯದಿರುವುದು ಪಕ್ಷಕ್ಕೆ ಆಘಾತ ತಂದಿರುವುದು ಸುಳ್ಳಲ್ಲ.
ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳನ್ನು ನೋಡುವುದಾದರೆ....
1. ಅಭಿವೃದ್ಧಿ ಬಿಟ್ಟು ರಾಷ್ಟ್ರೀಯತೆ ಅಜೆಂಡಾದಡಿ ಬಿಜೆಪಿ ನಾಯಕರ ಪ್ರಚಾರ: ಪ್ರತಿ ಚುನಾವಣೆಯನ್ನೂ ಅಭಿವೃದ್ಧಿ ಹೆಸರಲ್ಲಿ ಎದುರಿಸುತ್ತಿದ್ದ ಬಿಜೆಪಿ ಈ ಬಾರಿ ಅಭಿವೃದ್ಧಿಯನ್ನು ಕಡೆಗಣಿಸಿ ಕೇವಲ ರಾಷ್ಟ್ರೀಯತೆ ಅಜೆಂಡಾವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದು ಮುಳುವಾಗಿ ಪರಿಣಮಿಸಿತು.
2. ಪೌರತ್ವ ವಿವಾದವನ್ನೇ ಪ್ರಚಾರದ ಪ್ರಮುಖ ವಿಷಯ ಮಾಡಿಕೊಂಡಿದ್ದು: ಪ್ರಧಾನಿ ಮೋದಿ, ಗೃಹ ಅಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರೂ ತಮ್ಮ ಚುನಾವಣಾ ಪ್ರಚಾರಗಳಲ್ಲಿ ಕೇವಲ ಸಿಎಎ ವಿಷಯವನ್ನಷ್ಟೇ ಮಾತನಾಡಿದರು. ಸ್ಥಳೀಯ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕುರಿತು ಬಿಜೆಪಿಯ ಯಾವ ನಾಯಕರೂ ತುಟಿ ಬಿಚ್ಚಲಿಲ್ಲ ಎಂಬುದು ಸತ್ಯ.
3. ‘ಸಿಎಎ ವಿರೋಧಿಸುವ ದೇಶ ದ್ರೋಹಿಗಳಿಗೆ ಗುಂಡಿಕ್ಕಿ’ ಎಂಬ ಸಂಸದರ ಹೇಳಿಕೆ: ಈ ಮಧ್ಯೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಮ್ಮ ಚುನಾವಣೆ ಪ್ರಚಾರದಲ್ಲಿ ‘ಸಿಎಎ ವಿರೋಧಿಸುವ ದೇಶ ದ್ರೋಹಿಗಳಿಗೆ ಗುಂಡಿಕ್ಕಿ’..ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ಆಯೋಗದ ಕೆಂಗೆಣ್ಣಿಗೆ ಗುರಿಯಾದರು. ಕೇಂದ್ರ ಸಚಿವರಿಂದಲೇ ಇಂತಹ ಆಘಾತಕಾರಿ ಹೇಳಿಕೆ ಕೇಳಿ ದೆಹಲಿ ಮತದಾರ ದಂಗಾಗಿದ್ದು ಸುಳ್ಳಲ್ಲ.
4. ಬಿಜೆಪಿಗೆ ಮುಳುವಾದ ಜಾಮಿಯಾ, ಜೆಎನ್’ಯು ಪ್ರತಿಭಟನೆ: ಸಿಎಎ ವಿರೋಧಿಸಿ ದೆಹಲಿಯ ಜಾಮಿಯಾ ವಿವಿ ಹಾಗೂ ಜೆಎನ್’ಯುನಲ್ಲಿ ನಿರಂತರ ಪ್ರತಿಭಟನೆಗಳಾಗುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಪ್ರಹಾರ, ದಿನ ನಿತ್ಯದ ಹಿಂಸಾತ್ಮಕ ಪ್ರತಿಭಟನೆಗಳು ಬಿಜೆಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು ಎಂದರೆ ತಪ್ಪಾಗುವುದಿಲ್ಲ.
ಕುಂಠಿತಗೊಳ್ಳುತ್ತಿದೆ ಮೋದಿ ಹವಾ? 2 ವರ್ಷದಲ್ಲಿ 7 ರಾಜ್ಯ ಕಳೆದುಕೊಂಡ ಬಿಜೆಪಿ!
5. ದೆಹಲಿ ಬಿಜೆಪಿ ಮುನ್ನಡೆಸುವ ಸಮರ್ಥ ನಾಯಕರೇ ಇರಲಿಲ್ಲ: ಇನ್ನು ಪ್ರತಿ ವಿಧಾನಸಭೆ ಚುನಾವಣೆಯನ್ನು ಸ್ಥಳೀಯ ನಾಯಕತ್ವದಡಿ ಎದುರಿಸುವ ಬಿಜೆಪಿ, ದೆಹಲಿಯಲ್ಲಿ ಮಾತ್ರ ಸಮರ್ಥ ನಾಯಕನನ್ನು ಮುಂದೆ ಮಾಡುವಲ್ಲಿ ವಿಫಲವಾಯಿತು. ಪ್ರಧಾನಿ ಮೋದಿ ಹೆಸರು ಹೇಳಿಕೊಂಡೇ ಮತ ಕೇಳಿದ ಬಿಜೆಪಿ, ಸ್ಥಳಿಯ ನಾಯಕನನ್ನು ಬೆಳೆಸುವಲ್ಲಿ ವಿಫಲವಾಗಿದ್ದಕ್ಕೆ ತಕ್ಕ ಫಲವನ್ನೇ ಉಂಡಿದೆ ಎಂದು ಹೇಳಬಹುದು.
6. ಮೋದಿ- ಅಮಿತ್ ಶಾ ಪ್ರಚಾರ ಭಾಷಣದಲ್ಲಿ ಪಾಕಿಸ್ತಾನವೇ ಟಾರ್ಗೆಟ್: ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಕೇವಲ ಪಾಕಿಸ್ತಾನವನ್ನೇ ಉಲ್ಲೇಖಿಸಿದ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ, ದೆಹಲಿಯ ಕುರಿತು ಏನನ್ನೂ ಮಾತನಾಡದಿರುವುದು ಅಚ್ಚರಿಗೆ ಕಾರಣವಾಗಿದೆ. ಪಾಕಿಸ್ತಾನ, ಸರ್ಜಿಕಲ್ ಸ್ಟ್ರೈಕ್, ಸಿಎಎ ಕೇವಲ ಇವುಗಳನ್ನಷ್ಟೇ ಉಲ್ಲೇಖಿಸಿದ ಮೋದಿ ಹಾಗೂ ಶಾ, ಜನರ ನೖಜ ಸಮಸ್ಯೆಗಳಿಂದ ಮುಖ ತಿರುಗಿಸಿದ್ದು ಬಿಜೆಪಿಗೆ ಮುಳುವಾಯಿತು ಎಂಬುದರಲ್ಲಿ ಸಂಶಯವಿಲ್ಲ.
7. ಕೇಜ್ರಿವಾಲ್ ಅಭಿವೃದ್ಧಿ ಕೆಲಸಗಳು ಪೊಳ್ಳು ಎಂದು ಟೀಕೆ: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆದ ಬಿಜೆಪಿ ನಾಯಕರು, ಕೇಜ್ರಿವಾಲ್ ಅಭಿವೃದ್ಧಿ ಕಾರ್ಯಗಳನ್ನು ವ್ಯಂಗ್ಯವಾಡಿದ್ದು ಕೂಡ ಸೋಲಿಗೆ ಪ್ರಮುಖ ಕಾರಣ.
8 . ಶಾಹಿನ್ ಭಾಗ್ ಹೋರಾಟಕ್ಕೆ ಕೋಮು ಬಣ್ಣ ಹಚ್ಚಿದ್ದು: ಸಿಎಎ ವಿರೋಧಿಸಿ ಶಾಹೀನ್ ಬಾಗ್’ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕೋಮು ಬಣ್ಣ ಹಚ್ಚಲು ಬಿಜೆಪಿ ಪ್ರಯತ್ನಿಸಿತು. ಒಂದು ನಿರ್ದಿಷ್ಟ ಕೋಮಿನವರು ಮಾತ್ರ ಶಾಹೀನ್ ಬಾಗ್’ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಬಿಜೆಪಿ ವಾದವನ್ನು ದೆಹಲಿ ಮತದಾರ ಪುರಸ್ಕರಿಸಿಲ್ಲ.