Asianet Suvarna News Asianet Suvarna News

ಇಬ್ಬರು ಭಾರತೀಯರಿಗೆ ಉಗ್ರ ಪಟ್ಟ ಕಟ್ಟಲು ಪಾಕಿಸ್ತಾನ ಯತ್ನ!

ಇಬ್ಬರು ಭಾರತೀಯರಿಗೆ ಉಗ್ರ ಪಟ್ಟಕಟ್ಟಲು ಪಾಕಿಸ್ತಾನ ಯತ್ನ| ಮೌಲಾನಾ ಮಸೂದ್‌ ಅಜರ್‌ ಉಗ್ರ ಎಂದು ಘೋಷಿಸಿದ್ದಕ್ಕೆ ಪ್ರತೀಕಾರ| ಚೀನಾ ಸಹಾಯದಿಂದ ಭಾರತೀಯರ ವಿರುದ್ಧ ವಿಶ್ವಸಂಸ್ಥೆಗೆ ದೂರು

Pakistan tries to put 2 Indians on UN terror list
Author
Bangalore, First Published Nov 22, 2019, 10:55 AM IST

ನವದೆಹಲಿ[ನ.22]: ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯಿಂದ ಘೋಷಣೆ ಮಾಡಿಸುವಲ್ಲಿ ಸಫಲವಾಗಿರುವ ಭಾರತದ ವಿರುದ್ಧ ಪಾಕಿಸ್ತಾನದ ಹಗೆತನ ಮುಂದುವರಿದಿದೆ. ಆಷ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಸೇರಿ ಇಬ್ಬರನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ದೂರು ನೀಡುವ ಮೂಲಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ದುಷ್ಟಪ್ರಯತ್ನ ಮುಂದುವರಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಅಪ್ಪಾಜಿ ಅಂಗಾರಾ ಅವರು ಆಷ್ಘಾನಿಸ್ತಾನದ ಕಾಬೂಲ್‌ನ ಬ್ಯಾಂಕ್‌ವೊಂದರಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಲಾಹೋರ್‌ನಲ್ಲಿ 2017ರಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ಪಾಕಿಸ್ತಾನ ವಾದಿಸುತ್ತಿದೆ. ಅಲ್ಲದೆ 2014ರ ಡಿ.16ರಂದು ಪಾಕಿಸ್ತಾನದ ಪೇಶಾವರದ ಸೇನಾ ಶಾಲೆಯಲ್ಲಿ ನಡೆದ ಮಕ್ಕಳ ನರಮೇಧ ಪ್ರಕರಣದಲ್ಲೂ ಅಂಗಾರಾ ಅವರನ್ನು ಆರೋಪಿ ಮಾಡಿದೆ.

ಉಗ್ರ ದಾಳಿಯ ಆತಂಕ : ಅಯ್ಯಪ್ಪನ ಸನ್ನಿಧಾನಕ್ಕೆ ಟೈಟ್ ಸೆಕ್ಯೂರಿಟಿ

ಮತ್ತೊಂದೆಡೆ ಒಡಿಶಾ ಮೂಲದ ಗೋವಿಂದ ಪಟ್ನಾಯಕ್‌ ದುಗ್ಗಿವಲಸ ಕಾಬೂಲ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಅವರು 2018ರ ಜು.13ರಂದು ಬಲೂಚಿಸ್ತಾನದಲ್ಲಿ 160 ಮಂದಿಯನ್ನು ಬಲಿ ಪಡೆದ ಭಯೋತ್ಪಾದಕ ಸ್ಫೋಟ ಪ್ರಕರಣದಲ್ಲಿ ಆರೋಪಿ ಎಂದು ಪಾಕಿಸ್ತಾನ ಪ್ರಕರಣ ದಾಖಲಿಸಿದೆ. ಇದು ಅರಿವಿಗೆ ಬರುತ್ತಿದ್ದಂತೆ ಅಂಗಾರಾ ಹಾಗೂ ಗೋವಿಂದ ಪಟ್ನಾಯಕ್‌ ಅವರನ್ನು ಭಾರತ ಸರ್ಕಾರ ನ.18ರಂದೇ ತವರಿಗೆ ಕರೆಸಿಕೊಂಡಿದೆ. ಆದಾಗ್ಯೂ ತನ್ನ ಪರಮಾಪ್ತ ದೇಶ ಚೀನಾ ಸಹಾಯದಿಂದ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನ, ಈ ಇಬ್ಬರನ್ನೂ ಜಾಗತಿಕ ಉಗ್ರರು ಎಂದು ಘೋಷಿಸಬೇಕು ಎಂದು ಕೋರಿಕೊಂಡಿದೆ.

ಈ ಹಿಂದೆ ಆಷ್ಘಾನಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ಅಜಯ್‌ ಮಿಸ್ತ್ರಿ ಹಾಗೂ ವೇಣು ಮಾಧವ ಡೊಂಗಾರಾ ಅವರ ವಿರುದ್ಧವೂ ಇದೇ ರೀತಿಯ ಭಯೋತ್ಪಾದನೆ ಆರೋಪ ಹೊರಿಸಿ ವಿಶ್ವಸಂಸ್ಥೆಗೆ ಪಾಕಿಸ್ತಾನ ದೂರು ನೀಡಿತ್ತು.

ಒಸಾಮಾ ಪಾಕಿಸ್ತಾನದ ಹೀರೋ: ಮುಶ್ರಫ್ ಬಿಲ ಬಿಟ್ಟು ಬಾರೋ!

ನವೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios