ಒಸಾಮಾ ಪಾಕಿಸ್ತಾನದ ಹೀರೋ: ಮುಶ್ರಫ್ ಬಿಲ ಬಿಟ್ಟು ಬಾರೋ!
ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಹೀರೋ ಅಂತೆ| ಪಾಕಿಸ್ತಾನ ಮಾಜಿ ಅಧ್ಯಕ್ಷ ಜ. ಪರ್ವೇಜ್ ಮುಶ್ರಪ್ ವಿವಾದಾತ್ಮನಕ ಹೇಳಿಕೆ| ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು ಎಂದ ಮುಶ್ರಫ್| ಕಾಶ್ಮೀರಿ ಭಯೋತ್ಪಾದಕರಿಗೆ ಪಾಕಿಸ್ತಾನ ತರಬೇತಿ ನೀಡುತ್ತದೆ ಎಂದ ಮುಶ್ರಫ್| ಭಾರತೀಯ ಸೇನೆಯ ವಿರುದ್ಧ ಹೋರಾಡುವವರು ಮುಜಾಹಿದೀನ್‌ಗಳು ಎಂದ ಮುಶ್ರಫ್| ಲಾಡೆನ್ ಬೆಳವಣಿಗೆಯಲ್ಲಿ ಸಿಐಎ ಪಾತ್ರ ಇದೆ ಎಂದು ಒಪ್ಪಿಕೊಂಡ ಮುಶ್ರಫ್|
ಇಸ್ಲಾಮಾಬಾದ್(ನ.14): ಹತ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಹೀರೋ ಎಂದು ಮಾಜಿ ಅಧ್ಯಕ್ಷ ಜ. ಪರ್ವೇಜ್ ಮುಶ್ರಫ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಮುಶ್ರಫ್, ಭಯೋತ್ಪಾದಕರಾದ ಒಸಾಮಾ ಬಿನ್ ಲಾಡೆನ್, ಅಯಮಾನ್ ಅಲ್ ಜವಾಹರಿ, ಜಲಾಲದ್ದೀನ್ ಹಕ್ಖಾನಿ ಪಾಕಿಸ್ತಾನದ ಪಾಲಿಗೆ ಹೀರೋ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಶ್ಮೀರದ ಭಯೋತ್ಪಾದಕರಿಗೆ ಪಾಕಿಸ್ತಾನ ತರಬೇತಿ ನೀಡುತ್ತದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಮುಶ್ರಫ್, ಭಾರತೀಯ ಸೇನೆಯ ವಿರುದ್ಧ ಹೋರಾಡುವ ಮುಜಾಹದೀನ್‌ಗಳಿಗೆ ಪಾಕಿಸ್ತಾನದಲ್ಲಿ ಭವ್ಯ ಸ್ವಾಗತವಿದೆ ಎಂದು ಹೇಳಿದ್ದಾರೆ.
ಪಾಕ್ ಮಾಜಿ ಸರ್ವಾಧಿಕಾರಿ ಮತ್ತೆ ಸಕ್ರಿಯ ರಾಜಕೀಯಕ್ಕೆ!
ಪಾಕಿಸ್ತಾನ ನಿರಂತರವಾಗಿ ಕಾಶ್ಮೀರಿ ಭಯೋತ್ಪಾದಕರಿಗೆ ತರಬೇತಿ, ಧನಸಹಾಯ ಮಾಡುತ್ತಿದ್ದು, ಕಾಶ್ಮೀರ ಭಾರತದಿಂದ ಬೇರ್ಪಡುವವರೆಗೂ ಇದು ಮುಂದುವರೆಯಲಿದೆ ಎಂದು ಮುಶ್ರಫ್ ಸ್ಪಷ್ಟಪಡಿಸಿದ್ದಾರೆ.
1979ರಲ್ಲಿ ಸೋವಿಯತ್ ಯೂನಿಯನ್ ಸೇನೆಯನ್ನು ಹೊರದಬ್ಬಲು ನಾವು ಅಫ್ಘಾನಿಸ್ತಾನ್‌ದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಹುಟ್ಟು ಹಾಕಿದ್ದಾಗಿ ಮುಶ್ರಫ್ ಒಪ್ಪಿಕೊಂಡಿದ್ದಾರೆ. ಇದು ಪಾಕಿಸ್ತಾನಕ್ಕೆ ಪೂರಕವಾಗಿ ಕೆಲಸ ಮಾಡಿದ್ದು, ನಮ್ಮ ಉದ್ದೇಶ ಈಡೇರಿದೆ ಎಂದು ಅವರು ನುಡಿದಿದ್ದಾರೆ.
ಇದೇ ವೇಳೆ ಒಸಾಮಾ ಬಿನ್ ಲಾಡೆನ್ ಬೆಳವಣಿಗೆಯಲ್ಲಿ ಅಮೆರಿಕದ ಸಿಐಎ ಪಾತ್ರದ ಕುರಿತೂ ಮುಶ್ರಫ್ ಮಾತನಾಡಿದ್ದು, ಇದರಿಂದ ಅಮೆರಿಕ ಕೂಡ ಮುಶ್ರಫ್ ಕಣ್ಣು ಕೆಂಪಾಗಿಸಿದೆ.
ಮುಶ್ರಫ್ ಅವರ ಸಂದರ್ಶನದ ವಿಡಿಯೋವನ್ನು ಪಾಕ್ ರಾಜಕೀಯ ನಾಯಕ ಫರ್ಹಾತುಲ್ಲಾ ಬಾಬರ್, ಪಾಕ್ ರಾಜಕೀಯದ ಅಸಲಿ ಚಹರೆಯನ್ನು ಖುದ್ದು ಬಯಲು ಮಾಡಿದ್ದಾರೆ.
ಭಾರತದ ಮೇಲೆ ಅಣ್ವಸ್ತ್ರ ಬಳಸಲು ಚಿಂತಿಸಿದ್ದೆ, ಹೆದರಿ ಸುಮ್ಮನಾದೆ!
ಅಧಿಕಾರವಿಲ್ಲದೇ ತಮ್ಮ ಅಸ್ತಿತ್ವಕ್ಕಾಗಿ ಹೆಣಗುತ್ತಿರುವ ಮುಶ್ರಫ್ ಪಾಕಿಸ್ತಾನದಲ್ಲಿ ಮತ್ತೆ ತಮ್ಮ ರಾಜಕೀಯ ಶಕ್ತಿ ವೃದ್ಧಿಸಲು ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿ ಕಾಶ್ಮೀರ ಮತ್ತು ಭಯೋತ್ಪಾದಕರನ್ನು ಸಮರ್ಥಿಸುವ ಮಾತನಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.