ಭಾರತದ ರಸ್ತೆ ಕಾಮಗಾರಿಗೆ ಆಕ್ಷೇಪ: ಮತ್ತೆ ಚೀನಾ ಗಡಿ ಕ್ಯಾತೆ!
ಮತ್ತೆ ಚೀನಾ ಗಡಿ ಕ್ಯಾತೆ| ಭಾರತದ ರಸ್ತೆ ಕಾಮಗಾರಿಗೆ ಆಕ್ಷೇಪ| ಕಠಿಣ ಕ್ರಮದ ಎಚ್ಚರಿಕೆ| ಗಡಿಯಲ್ಲಿ ಯೋಧರ ಜಮಾವಣೆ| ದೈತ್ಯ ಯಂತ್ರಗಳ ರವಾನೆ
ನವದೆಹಲಿ(ಮೇ.22): 2 ವಾರದ ಹಿಂದೆ ಲಡಾಖ್‌ನ ಪ್ಯಾಂಗ್ಯಾಂಗ್ ಮತ್ತು ಸಿಕ್ಕಿಂನ ಗಡಿ ಪ್ರದೇಶದಲ್ಲಿ ಭಾರತದ ಯೋಧರ ಜೊತೆ ಗುದ್ದಾಟ ಮತ್ತು ಕಲ್ಲು ತೂರಾಟ ನಡೆಸಿದ್ದ ಚೀನಾ ಯೋಧರು, ಇದೀಗ ಭಾರತ ತನ್ನ ಗಡಿಯೊಳಗೆ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಬಗ್ಗೆ ಕ್ಯಾತೆ ತೆಗೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಭಾರತ ಗಡಿಯಲ್ಲಿ ಟೆಂಟ್ ಹಾಕಿದ ಚೀನಾ ಯೋಧರು!
ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಬರುವ ಪ್ಯಾಂಗ್ಯಾಂಗ್ ಸರೋವರದಿಂದ 255 ಕಿ.ಮೀ. ದೂರದ ಗಲ್ವಾನ್‌ನಲ್ಲಿ ಭಾರತ ಹೊಸ ರಸ್ತೆ ನಿರ್ಮಿಸುತ್ತಿದೆ. ಈ ಪ್ರದೇಶ ಸಂಪೂರ್ಣವಾಗಿ ಭಾರತಕ್ಕೆ ಸೇರಿದೆ. ಆದರೆ ಈ ಕಾಮಗಾರಿಗೆ ಚೀನಾ ಆಕ್ಷೇಪ ಎತ್ತಿದೆ. ಆದರೆ ನೇರವಾಗಿ ಅದನ್ನು ಹೇಳುತ್ತಿಲ್ಲ. ಚೀನಾ ಯೋಧರ ಪಹರೆಗೆ ಭಾರತೀಯ ಯೋಧರು ಅಡ್ಡಿಪಡಿಸುತ್ತಿದ್ದಾರೆ. ತನ್ನ ನೆಲದೊಳಗೆ ಪ್ರವೇಶಿಸಿದ್ದಾರೆ. ಗಡಿಯಲ್ಲಿನ ಯಥಾಸ್ಥಿತಿಯನ್ನೇ ಬದಲಿಸುತ್ತಿದ್ದಾರೆ ಎಂದು ದೂರಿದೆ. ಅಲ್ಲದೆ ಭಾರತೀಯರು ತಕ್ಷಣವೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಅಗತ್ಯ ಪ್ರತಿ ಕ್ರಮಗಳನ್ನು ಎದುರಿಸಬೇಕು ಎಂದು ಎಚ್ಚರಿಸಿದೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತಿರುವ ಭಾರತ, ಯೋಧರನ್ನು ಕರೆಸಿದೆಯಾದರೂ ಗಡಿಯಿಂದ ದೂರದಲ್ಲೇ ನಿಯೋಜನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಗಡಿಯಲ್ಲಿ ಚೀನಾದಿಂದ ಇನ್ನಷ್ಟು ಸೈನಿಕರ ಜಮಾವಣೆ!
ಅಲ್ಲದೆ ಇತ್ತೀಚೆಗೆ ಪರಸ್ಪರ ಕೈ ಕೈ ಮಿಲಾಯಿಸಿದ ಪ್ಯಾಂಗ್ಯಾಂಗ್ ಮತ್ತು ಸಿಕ್ಕಿಂ ಗಡಿ ಪ್ರದೇಶದಲ್ಲಿ ಚೀನಾ ಹೆಚ್ಚುವರಿ ಸೇನೆ ಜಮಾವಣೆ ಮಾಡಿದೆ. ಭಾರತದ ಗಡಿ ಸಮೀಪದಲ್ಲೇ 70ರಿಂದ 80 ಟೆಂಟ್‌ಗಳನ್ನು ನಿರ್ಮಿಸಿ, ದೈತ್ಯ ಯಂತ್ರಗಳನ್ನು ತಂದು ನಿಲ್ಲಿಸಿದೆ. ಈ ಬಿಕ್ಕಟ್ಟು ಇತ್ಯರ್ಥಕ್ಕೆ ಉಭಯ ದೇಶಗಳ ನಡುವೆ ನಡೆದ ಎರಡು ಸುತ್ತಿನ ಸಂಧಾನ ಮಾತುಕತೆ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.