ಹೆರಿಗೆ ರಜೆ ಕ್ಯಾನ್ಸಲ್, ಕಂದನನ್ನೆತ್ತಿ ಕರ್ತವ್ಯಕ್ಕೆ ಹಾಜರಾದ IAS ಆಫೀಸರ್!
ಕೊರೋನಾ ತಾಂಡವ, ಜನರ ಸೇವೆಗಾಗಿ ಹೆರಿಗೆ ರಜೆ ಮೊಟಕುಗೊಳಿಸಿದ ಐಎಎಸ್ ಆಫೀಸರ್| ಪುಟ್ಟ ಕಂದನನ್ನೆತ್ತಿಕೊಮಡೇ ಕೆಲಸಕ್ಕೆ ಹಾಜರ್| ತಾಯ್ತನದ ಜವಾಬ್ದಾರಿಯೊಂದಿಗೆ ತನ್ನ ಕರ್ತವ್ಯ ನಿಭಾಯಿಸುತ್ತಿರುವ ಗಟ್ಟಿಗಿತ್ತಿ
ಅಮರಾವತಿ(ಏ.12): ಕೊರೋನಾ ತಾಂಡವದ ನಡುವೆ ಈ ಸಮರ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯ ಸಿಬ್ಬಂದಿ, ಪೊಲಿಸ್ ಹಾಗೂ ಅಧಿಕಾರಿಗಳ ಮಾನವೀಯ ನಡೆ ಒಂದಾದ ಬಳಿಕ ಮತ್ತೊಂದರಂತೆ ನಮ್ಮೆದುರು ತೆರೆದುಕೊಳ್ಳುತ್ತಿವೆ. ಜನರ ಸೇವೆಗಾಗಿ ಅಧಿಕಾರಿಗಳು ತಮ್ಮ ಮನೆ ಹಾಗೂ ಕುಟುಂಬದಿಂದ ದೂರ ಉಳಿಯುತ್ತಿದ್ದಾರೆ. ಸದ್ಯ ಇದೀಗ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಪುಟ್ಟ ಕಂದನಿಗೆ ಜನ್ಮ ನೀಡಿದ ಬಾಣಂತಿ, ಐಎಎಸ್ ಅಧಿಕಾರಿ ಸೃಜನಾ ತನ್ನ ಇಪ್ಪತ್ತೆರಡು ದಿನದ ಹಸುಗೂಸನ್ನೆತ್ತಿ ಜನರ ಸೇವೆಗೆ ಹಾಜರಾಗಿದ್ದಾರೆ.
ಹೌದು ಐಎಎಸ್ ಅಧಿಕಾರಿ ಸೃಜನಾ ಗುಮ್ಮಾಲ ಆಂಧ್ರ ಪ್ರದೇಶದ ಗ್ರೇಟರ್ ವಿಶಾಖಪಟ್ಟಣಂನಲ್ಲಿ ಮುಸ್ನಿಪಲ್ ಕಮಿಷನರ್ ಆಗಿದ್ದಾರೆ. ಗರ್ಭಿಣಿಯಾಗಿದ್ದ ಅವರಿಗೆ ಆರು ತಿಂಗಳ ಹೆರಿಗೆ ರಜೆ ಸಿಕ್ಕಿತ್ತು. ಆದರೀಗ ಅವರು ರಜೆ ಪಡೆಯಲು ನಿರಾಕರಿಸಿದ್ದಾರೆ. ಅಲ್ಲದೇ ಕೇವಲ 22 ದಿನದ ಪುಟ್ಟ ಕಂದನನ್ನೆತ್ತಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೊರೋನಾ ತಾಂಡವ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿರುವಾಗ ಇಂತಹ ಪರಿಸ್ಥಿತಿಯಲ್ಲಿ ಕೆಲ ವಿಭಾಗಗಳು ದಿನದ ಇಪ್ಪತ್ನಾಲ್ಕು ಗಂಟೆ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ವಿಭಾಗ ಕೂಡಾ ಒಂದು. ಹೀಗಿರುವಾಗ ಡೆಲಿವರಿಗೆಂದು ಆರು ತಿಂಗಳ ರಜೆಯಲ್ಲಿ ತೆರಳಿದ್ದ ಸೃಜನಾಗೆ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತದೆ ಎಂಬ ಅಂದಾಜಿರಲಿಲ್ಲ. ಹೀಗಾಗಿ ಕರ್ತವ್ಯಕ್ಕೆ ಆದ್ಯತೆ ನೀಡಿ, ಮರಳಿದ್ದಾರೆ. ಈ ವೇಳೆ ತಾಯಿಯ ಮಮತೆಯನ್ನೂ ಮರೆಯದ ಈ ಗಟ್ಟಿಗಿತ್ತಿ ಅಧಿಕಾರಿ ಮಗುವನ್ನೂ ತನ್ನೊಂದಿಗೆ ಕರೆ ತಂದಿದ್ದಾರೆ.
ಸಿಂಗಾಪುರ್‌ನಿಂದ ಬಂದು ಕ್ವಾರೆಂಟೈನ್‌ನಿಂದ ತಪ್ಪಿಸಿಕೊಂಡ IAS ಅಧಿಕಾರಿ..!
ಅಧಿಕಾರಿಯಾಗಿಯೂ ಜವಾಬ್ದಾರಿ ಇದೆ
ತಮ್ಮ ಈ ನಡೆ ಕುರಿತು ಪ್ರತಿಕ್ರಿಯಿಸಿರುವ ಸೃಜನಾ ನಾನು ಹೆರಿಗೆಗೆಂದು ರಜೆಯಲ್ಲಿ ತೆರಳಿದ್ದೆ. ಆದರೆ ಪರಿಸ್ಥಿತಿ ಗಮನಿಸಿ ಮನೆಯಲ್ಲಿರಲು ಸಾಧ್ಯವಾಗಲಿಲ್ಲ. ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿ ಮನೆಯಲ್ಲಿರುವುದು ಸರಿಯಲ್ಲ ಎಂಬುವುದು ನನ್ನ ಅಭಿಪ್ರಾಯ ಎಂದಿದ್ದಾರೆ. ಹೀಗಾಗಿ ತಾಯ್ತನದೊಂದಿಗೆ ತನ್ನ ಕರ್ತವ್ಯಕ್ಕೂ ಮಹತ್ವ ನೀಡಿದ್ದಾರೆ. ಆರು ತಿಂಗಳ ರಜೆಯನ್ನು ಮೊಟಕುಗೊಳಿಸಿದ ಸೃಜನಾ ಕೆಲಸಕ್ಕೆ ಮರಳಿದ್ದಾರೆ. 22 ದಿನದ ಮಗುವನ್ನು ಮನೆಯಲ್ಲಿ ಬಿಡಲು ಆಗುವುದಿಲ್ಲ. ಹೀಗಾಗಿ ಕಚೇರಿಗೆ ಕರೆ ತಂದೆ ಎಂದಿದ್ದಾರೆ.
ಕೆಲಸದ ನಡುವೆ ಮಗುವಿನ ನಿಗಾ
ಮಗುವನ್ನು ಮಡಿಲಲ್ಲಿಟ್ಟುಕೊಂಡೇ ಸೃಜನಾ ಆಫೀಸ್ ಕೆಲಸ ಮಾಡುತ್ತಾರೆ. ಓರ್ವ ಅಧಿಕಾರಿಯಾಗಿ ನಾನು ಖಡಕ್ ಆಗಿರಬಹುದು ಆದರೆ ತಾಯೊಯ ಮಮತೆಯೂ ನನ್ನಲ್ಲಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ನೀರಿನ ವ್ಯವಸ್ಥೆ ಮಾಡುವುದು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವುದು ಕೂಡಾ ನನ್ನ ಕರ್ತವ್ಯ ಎಂದಿದ್ದಾರೆ ಸೃಜನಾ.
ತಾಯಿ ಮರಣಹೊಂದಿದರೂ ಕೊರೋನಾ ಚಿಕಿತ್ಸೆ ಕರ್ತವ್ಯ ಮುಂದುವರಿಸಿದ ಡಾಕ್ಟರ್
ಅದೇನಿದ್ದರೂ ಇಂತಹ ಪರಿಸ್ಥಿತಿಯಲ್ಲಿ ಸಮಾಜಕ್ಕಾಗಿ, ಜನರಿಗಾಗಿ ತನ್ನ ಹಸುಗೂಸನ್ನೆತ್ತಿ ಕರ್ತವ್ಯಕ್ಕೆ ಹಾಜರಾದ ಈ ತಾಯಿಗೆ ಸೆಲ್ಯೂಟ್ ಸಲ್ಲಲೇಬೇಕು.