ಐತಿಹಾಸಿಕ ಏರ್‌ಲಿಫ್ಟ್ ಆರಂಭ; ಕೇರಳಕ್ಕೆ ಬಂದಿಳಿದ 2 ವಿಮಾನಗಳು
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ದೇಶದ ಇತಿಹಾಸದ ಅತಿದೊಡ್ಡ ಏರ್‌ಲಿಫ್ಟ್ ಕಾರ್ಯಾಚರಣೆ ‘ವಂದೇ ಭಾರತ್ ಮಿಷನ್’ ಗುರುವಾರ ಆರಂಭವಾಗಿದೆ.ಈಗಾಗಲೇ 2 ವಿಮಾನಗಳನ್ನು ಯುಎಇನಲ್ಲಿರುವ ಭಾರತೀಯರನ್ನು ಹೊತ್ತು ಕೇರಳಕ್ಕೆ ಬಂದಿಳಿದಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.08): ಕೊರೋನಾ ವೈರಸ್ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್‌ಡೌನ್‌ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ ‘ವಂದೇ ಭಾರತ್ ಮಿಷನ್’ ಗುರುವಾರ ಆರಂಭವಾಗಿದೆ. ಅಬುಧಾಬಿ ಹಾಗೂ ದುಬೈನಿಂದ 354 ಪ್ರಯಾಣಿಕರನ್ನು ಹೊತ್ತ ಎರಡು ವಿಮಾನಗಳು ಕೇರಳದಲ್ಲಿ ರಾತ್ರಿ ಬಂದಿಳಿದಿವೆ.
ಇನ್ನೂ 8 ವಿಮಾನಗಳು ಅಮೆರಿಕ, ಸಿಂಗಾಪುರ, ಲಂಡನ್ ಮತ್ತಿತರೆಡೆಯಿಂದ ಬೇರೆ ಬೇರೆ ಸಮಯದಲ್ಲಿ ಭಾರತ ಸೇರುವ ನಿರೀಕ್ಷೆ ಇದೆ. ಭಾರತಕ್ಕೆ ಬರುವವರನ್ನು ವಿಮಾನ ಹತ್ತುವ ಮುನ್ನವೇ ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗಿದ್ದು, ಸೋಂಕು ರಹಿತರನ್ನು ಮಾತ್ರವೇ ಕರೆತರಲಾಗಿದೆ. ವಿಮಾನ ಪ್ರಯಾಣ ಆರಂಭವಾಗುವ 5 ತಾಸು ಮೊದಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಭಾರತದಲ್ಲಿ ಬಂದಿಳಿಯುತ್ತಿದ್ದಂತೆ ಬಸ್‌ಗಳಲ್ಲಿ ಕರೆದೊಯ್ದು ಕ್ವಾರಂಟೈನ್ ಕೇಂದ್ರಗಳಿಗೆ ಬಿಡಲಾಗಿದೆ.
ಕನ್ನಡಿಗರ ಏರ್‌ಲಿಫ್ಟ್: 11ಕ್ಕೆ ಬೆಂಗ್ಳೂರು, 12ಕ್ಕೆ ಮಂಗ್ಳೂರಿಗೆ ವಿಮಾನ
ಮೊದಲ ಹಂತದ ಏರ್‌ಲಿಫ್ಟ್‌ನಡಿ 7 ದಿನಗಳಲ್ಲಿ 14,800 ಭಾರತೀಯರನ್ನು ತವರಿಗೆ ಕರೆತರುವ ಗುರಿಯನ್ನು ಭಾರತ ಹಾಕಿಕೊಂಡಿದೆ. ಇದೇ ವೇಳೆ, ನೌಕಾಪಡೆಗೆ ಸೇರಿದ 3 ಹಡಗುಗಳನ್ನು ಕೂಡ ಕಾರ್ಯಾಚರಣೆ ಬಳಸಿಕೊಳ್ಳಲಾಗಿದೆ. ಆ ಪೈಕಿ ಮೊದಲ ಹಡಗು ಗುರುವಾರ ಮಾಲ್ಡೀವ್‌್ಸ ತಲುಪಿದ್ದು, 750 ಮಂದಿಯನ್ನು ಹೊತ್ತು ಭಾನುವಾರ ಕೊಚ್ಚಿ ಬಂದರಿಗೆ ಆಗಮಿಸಲಿದೆ. ಹಲವು ಹಂತಗಳಲ್ಲಿ ಭಾರತ ಏರ್‌ಲಿಫ್ಟ್ ನಡೆಸಲು ಉದ್ದೇಶಿಸಿದ್ದು 2ರಿಂದ 4 ಲಕ್ಷ ಜನರನ್ನು ಕರೆತರುವ ಉದ್ದೇಶ ಹೊಂದಿದೆ.