ಪುಣೆ ಕಂಪನಿಯಿಂದ 4 ಕೋಟಿ ಕೊರೋನಾ ಲಸಿಕೆ ತಯಾರಿ!
ಪುಣೆ ಕಂಪನಿಯಿಂದ 4 ಕೋಟಿ ಕೊರೋನಾ ಲಸಿಕೆ ತಯಾರಿ!| ಆಕ್ಸ್‌ಫರ್ಡ್ ಸಂಶೋಧನೆ| ಯಶಸ್ವಿಯಾದರೆ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ| 1 ಲಸಿಕೆಗೆ 1000 ರು.
ಮುಂಬೈ(ಏ.28): ಬ್ರಿಟನ್ನಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದ ಕೊರೋನಾ ವೈರಸ್ ಲಸಿಕೆಯಿನ್ನೂ ಮಾನವನ ಮೇಲಿನ ಪ್ರಯೋಗದ ಹಂತದಲ್ಲಿ ಇರುವಾಗಲೇ ಈ ಲಸಿಕೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿಂದ ಪುಣೆಯಲ್ಲಿರುವ ಔಷಧ ತಯಾರಿಕಾ ಕಂಪನಿಯೊಂದು ಇದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಿದೆ.
"
ಬಯೋಕಾನ್‌ನಲ್ಲಿ ರೆಡಿಯಾಗ್ತಿದೆ ಮಹಾಮಾರಿ ಕೊರೋನಾಗೆ ಲಸಿಕೆ!
ಕೈಗೆಟಕುವ ದರದಲ್ಲಿ ನ್ಯುಮೋನಿಯಾ, ಡೆಂಘೀ ಮುಂತಾದ ರೋಗಗಳಿಗೆ ಔಷಧ ಉತ್ಪಾದಿಸುತ್ತಿರುವ ಪುಣೆಯ ಪ್ರತಿಷ್ಠಿತ ಸೆರಮ್ ಇನ್‌ಸ್ಟಿಟ್ಯೂಟ್ ಇದೀಗ ಕೊರೋನಾ ಲಸಿಕೆಯನ್ನೂ ತಯಾರಿಸಲು ಮುಂದಾಗಿದೆ. ಇದಕ್ಕಾಗಿ ಬ್ರಿಟನ್ನಿನ ಆಕ್ಸ್‌ಫರ್ಡ್ ವಿವಿ ಜೊತೆ ಸೆರಮ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ ಈಗಾಗಲೇ ಲಂಡನ್ನಿನಲ್ಲಿ ಕ್ಲಿನಿಕಲ್ ಟ್ರಯಲ್ ಹಂತದಲ್ಲಿರುವ ಲಸಿಕೆಯನ್ನು ಸೆರಮ್ ಕಂಪನಿ ಭಾರತದಲ್ಲಿ ಮೇ ತಿಂಗಳಲ್ಲಿ ಮನುಷ್ಯರ ಮೇಲೆ ಪ್ರಯೋಗಿಸಲಿದೆ. ನಂತರ ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿದ್ದು, ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ 2ರಿಂದ 4 ಕೋಟಿ ಲಸಿಕೆ ತಯಾರಿಸುವ ಗುರಿ ಹೊಂದಿದೆ. ಅಂದಾಜಿನ ಪ್ರಕಾರ ಒಂದು ಲಸಿಕೆಗೆ 1000 ರು. ಬೆಲೆ ನಿಗದಿಪಡಿಸಲಿದೆ.
‘ಬ್ರಿಟನ್ನಿನಲ್ಲಿ ಪ್ರಯೋಗ ಮುಗಿಯುವವರೆಗೆ ನಾವು ಕಾಯುವುದಿಲ್ಲ. ಅದು ಯಶಸ್ವಿಯಾಗುತ್ತದೆ ಎಂದು ಭಾವಿಸಿ ಈಗಲೇ ನಮ್ಮ ಘಟಕದಲ್ಲಿ ಕೊರೋನಾ ಲಸಿಕೆಯ ಉತ್ಪಾದನೆ ಆರಂಭಿಸುತ್ತೇವೆ. ಘಟಕದಲ್ಲಿ ಬೇರೆಲ್ಲಾ ಲಸಿಕೆಗಳ ಉತ್ಪಾದನೆಯನ್ನು ಬಂದ್ ಮಾಡಿ ಕೆಲ ಸಮಯದವರೆಗೆ ಕೊರೋನಾ ಲಸಿಕೆಯನ್ನು ಮಾತ್ರ ಉತ್ಪಾದಿಸಲಿದ್ದೇವೆ’ ಎಂದು ಸೆರಮ್ ಇನ್‌ಸ್ಟಿಟ್ಯೂಟ್‌ನ ಸಿಇಒ ಅಡರ್ ಪೂನಾವಾಲಾ ಹೇಳಿದ್ದಾರೆ.
ಲಸಿಕೆಗೆ ಇನ್ನೂ 12 ತಿಂಗಳು ಬೇಕು: ಗೇಟ್ಸ್
ಕೊರೋನಾ ಲಸಿಕೆ ಮಾರುಕಟ್ಟೆಗೆ ಬರಲು ಇನ್ನೂ ಒಂದು ವರ್ಷವಾದರೂ ಬೇಕು ಅಥವಾ ಅದು ಎರಡು ವರ್ಷವೂ ಆಗಬಹುದು ಎಂದು ಜಗತ್ತಿನಾದ್ಯಂತ 7 ಸಂಸ್ಥೆಗಳಿಗೆ ಕೊರೋನಾ ಲಸಿಕೆ ಕಂಡುಹಿಡಿಯಲು ಹಣಕಾಸು ನೆರವು ನೀಡಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲೇ ಲಸಿಕೆ ಮಾರುಕಟ್ಟೆಗೆ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಷ್ಟುಬೇಗ ಬರಲು ಸಾಧ್ಯವಿಲ್ಲ. ನನ್ನ ಪ್ರಕಾರ ಸರಾಸರಿ 18 ತಿಂಗಳು ಬೇಕಾಗಬಹುದು ಎಂದು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.