ಮಾನವರ ಮೇಲೆ 6 ಲಸಿಕೆ ಪ್ರಯೋಗ!
ಮನುಷ್ಯನ ಮೇಲೆ ಪ್ರಯೋಗದ ಹಂತದಲ್ಲಿ 6 ಕೊರೋನಾ ಲಸಿಕೆ| ಯಶಸ್ವಿಯಾದರೆ ಸೆಪ್ಟೆಂಬರ್/ಅಕ್ಟೋಬರ್‌ಗೆ ಲಭ್ಯ| ಆಕ್ಸ್‌ಫರ್ಡ್ ಯಶಸ್ಸಿಗೂ ಮುನ್ನ ಪುಣೆಯಲ್ಲಿ ಸಿದ್ಧತೆ
ನವದೆಹಲಿ(ಏ.25): ಜಗತ್ತಿನಾದ್ಯಂತ ಕೊರೋನಾ ವೈರಸ್ ಪ್ರತಿದಿನ ಸಾವಿರಾರು ಜನರನ್ನು ಬಲಿ ಪಡೆಯುತ್ತಿರುವ ಹಂತದಲ್ಲೇ ವಿವಿಧ ದೇಶಗಳಲ್ಲಿ ಈ ವೈರಸ್ ತಗಲದಂತೆ ತಡೆಯುವ 6 ಲಸಿಕೆಗಳ ಪ್ರಯೋಗ ಮನುಷ್ಯನ ಮೇಲೆ ಆರಂಭಗೊಂಡಿದೆ. ಇವುಗಳಲ್ಲಿ ಯಾವುದಾದರೂ ಯಶಸ್ವಿಯಾದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಲಸಿಕೆ ಮಾರುಕಟ್ಟೆಗೆ ಬರುವ ಆಶಾಭಾವನೆ ಮೂಡಿದೆ.
ಲಂಡನ್ನಿನ ಆಕ್ಸ್‌ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಸಿಎಚ್‌ಎಡಿಒಎಕ್ಸ್1 ಎಂಬ ಲಸಿಕೆ ಈ ದಿಸೆಯಲ್ಲಿ ಮುಂಚೂಣಿಯಲ್ಲಿದ್ದು, ಇದರ ಜೊತೆಗೆ ಇನ್ನೂ 5 ಕಡೆ ಕೊರೋನಾ ವೈರಸ್ಸಿಗೆ ಬೇರೆ ಬೇರೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವು ಈಗ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದ್ದು, ಮನುಷ್ಯರಿಗೆ ಇಂಜೆಕ್ಟ್ ಮಾಡಿ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತಿದೆ. ಆಕ್ಸ್‌ಫರ್ಡ್ ಲಸಿಕೆ ಪ್ರಯೋಗಿಸಲು 800 ಸ್ವಯಂಸೇವಕರನ್ನು ಗುರುತಿಸಲಾಗಿದ್ದು, ಇಬ್ಬರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ.
ಆಕ್ಸ್‌ಫರ್ಡ್ ಯುನಿವರ್ಸಿಟಿ ಜೊತೆಗೆ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಲಸಿಕೆ ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಈಗಲೇ ದೊಡ್ಡ ಪ್ರಮಾಣದಲ್ಲಿ ಅದರ ತಯಾರಿಕೆ ಆರಂಭಿಸಲು ಸೆರಮ್ ಸಂಸ್ಥೆ ನಿರ್ಧರಿಸಿದೆ. ಲಸಿಕೆ ಯಶಸ್ವಿಯಾಗುವ ಸಾಧ್ಯತೆ ಶೇ.80ರಷ್ಟಿದ್ದು, ಅದು ಯಶಸ್ವಿಯಾದರೆ ಕೂಡಲೇ ಭಾರತದಲ್ಲಿ ಮಾರಾಟ ಆರಂಭವಾಗಲಿದೆ.
ಸಾಮಾನ್ಯವಾಗಿ ಯಾವುದೇ ಲಸಿಕೆಯನ್ನು ಕಂಡುಹಿಡಿದು, ಎಲ್ಲಾ ಪರೀಕ್ಷೆಗಳನ್ನು ಮುಗಿಸಿ, ಅದನ್ನು ಮಾರಾಟಕ್ಕೆ ಬಿಡುಗಡೆ ಮಾಡಲು ಕನಿಷ್ಠ 10 ವರ್ಷ ಹಿಡಿಯುತ್ತದೆ. ಆದರೆ, ಕೊರೋನಾ ಲಸಿಕೆಯ ಶೋಧ ಶರವೇಗದಲ್ಲಿ ನಡೆಯುತ್ತಿದ್ದು, ಹಲವು ಹಂತಗಳನ್ನು ಬೈಪಾಸ್ ಮಾಡಿ ಆದಷ್ಟುಬೇಗ ಅದನ್ನು ಮಾರುಕಟ್ಟೆಗೆ ತರಲು ಎಲ್ಲ ದೇಶಗಳೂ ತಮ್ಮ ನಿಯಮಗಳನ್ನು ಸಡಿಲಿಸಿವೆ.