ಮೊದ್ಲು ಬಡಿದಾಡೋದು ನಿಲ್ಸಿ: ಸಿಎಎ ವಿಚಾರಣೆ ಆಮೇಲೆ ಎಂದ ಸುಪ್ರೀಂ!
ಸಿಎಎ ತುರ್ತು ಜಾರಿಗೆ ಬ್ರೇಕ್ ಹಾಕಿದ ಸುಪ್ರೀಂಕೋರ್ಟ್| ಸಿಎಎ ಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸರ್ಜಿ| ಹಿಂಸಾಚಾರ ನಿಂತ ಮೇಲೆ ಸಿಎಎ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದ ಸುಪ್ರೀಂಕೋರ್ಟ್| ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ದೆ ನೇತೃತ್ವದ ನ್ಯಾಯಪೀಠ|'ಕಾಯ್ದೆಗೆ ಸಾಂವಿಧಾನಿಕ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಿದ್ದು ಇದೇ ಮೊದಲು'| ಎಲ್ಲಾ ರಾಜ್ಯಗಳಿಗೂ ಜಾರಿಯ ಆದೇಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ| ನಮ್ಮ ಕೆಲಸ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸುವುದಷ್ಟೇ ಎಂದ ಸುಪ್ರೀಂ|
ನವದೆಹಲಿ(ಜ.09): ಸಿಎಎ ಜಾರಿ ಕುರಿತಂತೆ ಕಾಯ್ದೆಯ ಪರ ಹೋರಾಟಗಾರರಿಗೆ ಹಿನ್ನಡೆಯಾಗಿದ್ದು , ಶೀಘ್ರ ಜಾರಿಗೆ ನ್ಯಾಯಾಲಯದ ಅನುಮೋದನೆ ಪಡೆಯಬೇಕೆಂಬ ಇರಾದೆಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಸಾಂವಿಧಾನಿಕ ಎಂದು ಘೋಷಿಸಿ ಅದನ್ನು ಎಲ್ಲಾ ರಾಜ್ಯಗಳು ಜಾರಿಗೆ ತರುವಂತೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇದು ಮಮತೆಯ ತಿರುವು: ಸಿಎಎ ವಿರೋಧಿಗಳಿಂದ ದೂರದ ಕುರುಹು!
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್. ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸುವಂತೆ ಆಗ್ರಹಿಸಿ ಅರ್ಜಿ ಸಲ್ಲಿಸಿರುವುದು ಅಚ್ಚರಿ ತಂದಿದೆ ಎಂದು ಹೇಳಿದೆ.
ಕಾನೂನಿನ ಸಿಂಧುತ್ವವನ್ನು ನಿರ್ಧರಿಸುವುದು ಮಾತ್ರ ನಮ್ಮ ಕೆಲಸವೇ ಹೊರತು, ಅದನ್ನು ಸಾಂವಿಧಾನಿಕ ಎಂದು ಘೋಷಿಸುವುದಲ್ಲ ಎಂದು ನ್ಯಾಯಮೂರ್ತಿ ಬಿ.ಆರ್. ಗವೈ ಮತ್ತು ಸೂರ್ಯಕಾಂತ್ ಅವರನ್ನು ಸಹ ಒಳಗೊಂಡ ನ್ಯಾಯಪೀಠ ಹೇಳಿದೆ.
ದೇಶದಲ್ಲಿ ಹಿಂಸಾಚಾರ ನಿಂತ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಿಎಎ ಸಾಂವಿಧಾನಿಕ ಎಂದು ಘೋಷಣೆ ಮಾಡಿ ಅದನ್ನು ಎಲ್ಲಾ ರಾಜ್ಯಗಳು ಜಾರಿಗೆ ತರಬೇಕೆಂದು ಆದೇಶ ನೀಡಬೇಕೆಂದು ಕೋರಿ ವಕೀಲ ವಿನೀತ್ ದಂಡ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.