ಕೊರೆವ ಚಳಿಗೆ ಮಾಡಿ ಮ್ಯಾನ್ ಚೋ ಸೂಪ್,ಕ್ಯಾರೆಟ್ ಸೂಪ್,ಪಾಲಕ್ ಸೂಪ್!
ಮಳೆಗಾಲ, ಚಳಿಗಾಲಗಳಲ್ಲಿ ಹಾಯೆನಿಸುವ ಅನುಭವ ನೀಡುವುದು ಟೀ, ಕಾಫಿ ಬಿಟ್ಟರೆ ರುಚಿಕರವಾದ ಸೂಪ್. ಇದು ಟೀ ಕಾಫಿಗಿಂತ ಆರೋಗ್ಯಕಾರಿ ಕೂಡಾ.
ಚಳಿ ಕೊರೆಯಲಾರಂಭಿಸಿದೆ. ತಣ್ಣಗಿನ ನೀರು ಕಣ್ಣಿನಲ್ಲಿ ನೋಡಲೂ ಬೇಡವಾಗಿದೆ. ಈಗೇನಿದ್ದರೂ ಬಿಸಿಬಿಸಿ ತಿನಿಸುಗಳ ಬಯಕೆ. ಹಾಗಂಥ ಬಜ್ಜಿ ಬೋಂಡ ಎಂದರೆ ಆರೋಗ್ಯದ ಪಾಡನ್ನೂ ನೋಡಬೇಕಲ್ಲ... ಅದಕ್ಕಾಗಿಯೇ ದಿನಕ್ಕೊಂದು ಸೂಪ್ ಮಾಡಿ ಸವಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇವು ದೇಹವನ್ನು ಬೆಚ್ಚಗಿರಿಸುವ ಜೊತೆಗೆ ನಾಲಿಗೆಯ ಬಯಕೆಯನ್ನೂ ಈಡೇರಿಸುತ್ತವೆ.
ರೆಸಿಪಿ: ನಾಲಿಗೆ ಚಪ್ಪರಿಸುವಂತೆ ಮಾಡುವ ಹುಣಸೆಹುಳಿ ಗೊಜ್ಜು
ಪಾಲಕ್ ಸೂಪ್
ಪಾಲಕ್ ಕಬ್ಬಿಣ, ವಿಟಮಿನ್‌ಗಳು ಮತ್ತು ಖನಿಜಗಳ ಕಣಜ. ದೊಡ್ಡವರಿಗೆ ಮಾತ್ರವಲ್ಲ ಶಿಶುವಿಗೆ ಕೂಡಾ ಇದು ಅತ್ಯುತ್ತಮ ಆಹಾರವಾಗಿದೆ. ಹಲವಾರು ಆರೋಗ್ಯ ಲಾಭಗಳನ್ನು ತರುವ ಪಾಲಕ್‌ನಿಂದ ಸೂಪ್ ಮಾಡುವುದು ಕೂಡಾ ಸುಲಭ. ಮತ್ತಿನ್ನೇಕೆ ತಡ? ಶುರು ಹಚ್ಕಳಿ.
ಬೇಕಾಗುವ ಸಾಮಗ್ರಿಗಳು:
ಪಾಲಕ್- ಚೆನ್ನಾಗಿ ತೊಳೆದು ಕತ್ತರಿಸಿದ್ದು 1 ಕಪ್, ಆಲೂಗಡ್ಡೆ ಅರ್ಧ, ಬೆಳ್ಳುಳ್ಳಿ 4 ಎಸಳು, ಬೆಣ್ಣೆ 1 ಚಮಚ, ತುಪ್ಪ 1 ಚಮಚ, ಈರುಳ್ಳಿ ಸಣ್ಣದಾಗಿ ಹೆಚ್ಚಿಕೊಂಡಿದ್ದು- ಅರ್ಧ, ನೀರು 1 ಕಪ್(ತರಕಾರಿ ಬೇಯಿಸಿದ ನೀರಿದ್ದರೆ ಅದನ್ನೇ ಬಳಸಬಹುದು), ಕಾಳುಮೆಣಸು 1 ಸಣ್ಣ ಚಮಚ, ಅರಿಶಿನ 1 ಚಿಟಿಕೆ, ಮಸಾಲೆ ಪದಾರ್ಥಗಳು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಚಕ್ಕೆ, ದಾಲ್ಚೀನಿ ಹಾಕಿ ಘಮ ಬರುವವರೆಗೆ ಹುರಿಯಿರಿ. ಇದಕ್ಕೆ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ಸಣ್ಣಗೆ ಕತ್ತರಿಸಿಟ್ಟುಕೊಂಡ ಬೆಳ್ಳುಳ್ಳಿ ಹಾಕಿ ಮತ್ತೊಂದು ನಿಮಿಷ ಹುರಿಯಿರಿ. ಇದಕ್ಕೆ ಪಾಲಕ್ ಸೊಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಕಾಳುಮೆಣಸು, ಅರಿಶಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಇವೆಲ್ಲವನ್ನು ಬ್ಲೆಂಡರ್‌ಗೆ ಹಾಕಿ. ಜೊತೆಗೆ ಬೇಯಿಸಿದ ಆಲೂಗಡ್ಡೆ ಸೇರಿಸಿ. ಚೆನ್ನಾಗಿ ಬ್ಲೆಂಡ್ ಮಾಡಿ. ಮಿಶ್ರಣವನ್ನು ಮತ್ತೆ ಬಾಣಲೆಗೆ ಹಾಕಿ ಬಿಸಿ ಮಾಡಿ ಸ್ವಲ್ಪ ನೀರು, ಅಗತ್ಯ ಬಿದ್ದಷ್ಟು ಉಪ್ಪು ಸೇರಿಸಿ. ಮೇಲಿನಿಂದ ಬೆಣ್ಣೆ ಹಾಕಿ. ಸೂಪನ್ನು ಬಿಸಿಬಿಸಿಯಾಗಿ ಸೇವಿಸಿ.
---------
ಕ್ಯಾರೆಟ್ ಸೂಪ್
ಕ್ಯಾರೆಟ್‌ನಲ್ಲಿರುವ ವಿಟಮಿನ್ ಎನಿಂದಾಗಿ ದೃಷ್ಟಿ ಹಾಗೂ ಚರ್ಮದ ಕಾಂತಿಗೆ ಒಳ್ಳೆಯದು. ಇದನ್ನು ಹಸಿಯಾಗಿ ಸೇವಿಸುವ ಅಭ್ಯಾಸವಿರಬಹುದು. ಈಗ ಚಳಿಗಾಲದಲ್ಲಿ ಸೂಪ್ ರೂಪದಲ್ಲಿ ಸೇರಿಸಿದರೆ ಮೈ ಕೂಡಾ ಬೆಚ್ಚಗಾಗುತ್ತದೆ. ನಾಲಿಗೆಗೂ ಸೇರುತ್ತದೆ.
ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ 4, ಈರುಳ್ಳಿ 1, ಹಸಿಮೆಣಸು 1, ಶುಂಠಿ ಅರ್ಧ ಇಂಚು, ಬೆಣ್ಣೆ 2 ಚಮಚ, ನೀರು 4 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಕರಿಮೆಣಸಿನ ಪುಡಿ 1 ಚಮಚ, ಪುದೀನಾ ಎಲೆಗಳು 5-6.
ಬೀಟ್ರೂಟ್ ರೆಸಿಪಿ: ಹಲ್ವಾ, ಸೂಪ್ ಹಾಗೂ ಸಾಸಿವೆ ಮಾಡೋದ್ಹೀಗೆ!
ಮಾಡುವ ವಿಧಾನ: ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಸಣ್ಣ ಹೋಳುಗಳನ್ನಾಗಿ ಕತ್ತರಿಸಿ.
ಸ್ವಲ್ಪ ಬೆಣ್ಣೆ ಬಿಸಿಗಿಟ್ಟು ಅದರಲ್ಲಿ ಉದ್ದುದ್ದಗೆ ಹೆಚ್ಚಿಕೊಂಡ ಈರುಳ್ಳಿ ಹುರಿದುಕೊಳ್ಳಿ. ಪ್ರೆಷರ್ ಕುಕ್ಕರಿನಲ್ಲಿ ಕ್ಯಾರೆಟ್ ಹೋಳು, ಈರುಳ್ಳಿ, 3 ಕಪ್ ನೀರು, ಶುಂಠಿ ಹಾಗೂ ಹಸಿಮೆಣಸನ್ನು ಹಾಕಿ ವಿಶಲ್ ಬರಿಸಿ. ಇದು ತಣಿದ ಬಳಿಕ ಮಿಕ್ಸಿ ಮಾಡಿಕೊಂಡು ಸೋಸಿಕೊಳ್ಳಿ. ಇದನ್ನು ಬಾಣಲೆಗೆ ಹಾಕಿ ಉಪ್ಪು, ಬೇಕಿದ್ದಲ್ಲಿ ನೀರು ಸೇರಿಸಿ ಕುದಿಸಿ. ಮೇಲಿನಿಂದ ಪೆಪ್ಪರ್ ಪೌಡರ್ ಹಾಗೂ ಬೆಣ್ಣೆ ಹಾಕಿ. ಪುದೀನಾ ಎಲೆಗಳನ್ನು ಅಲಂಕಾರಕ್ಕೆ ಬಳಸಿ.
--------------
ಮ್ಯಾನ್ ಚೋ ಸೂಪ್
ಇದರಲ್ಲಿ ತರಕಾರಿಗಳು ಮಾತ್ರವಲ್ಲ, ನೂಡಲ್ಸ್ ಕೂಡಾ ಇರುವುದರಿಂದ ಮಕ್ಕಳಿಗೆ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ನೂಡಲ್ಸ್ ಅರ್ಧ ಕಪ್, ಕ್ಯಾರೆಟ್ 1, ದೊಣ್ಣೆಮೆಣಸು 1, 8-10 ಎಳೆ ಬೀನ್ಸ್, ಸ್ವಲ್ಪ ಕೋಸು, ಬೆಳ್ಳುಳ್ಳಿ 6 ಎಸಳು, ಶುಂಠಿ ಅರ್ಧ ಇಂಚು, ನೀರು 3 ಕಪ್, ಎಣ್ಣೆ 1ಚಮಚ, ವಿನೆಗರ್ 1 ಚಮಚ, ಸೋಯಾಸಾಸ್ ಅರ್ಧ ಚಮಚ, ಗ್ರೀನ್ ಚಿಲ್ಲಿ ಸಾಸ್ 1 ಚಮಚ, ಪೆಪ್ಪರ್ ಅರ್ಧ ಚಮಚ, ಜೋಳದ ಹಿಟ್ಟು 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಭಾನುವಾರದ ಬಾಯಿರುಚಿಗೆ ಬಸಂತಿ ಪುಲಾವ್, ಬ್ರಿಂಜಿ ರೈಸ್!
ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಇದು ಕಂದು ಬಣ್ಣಕ್ಕೆ ಬರುತ್ತಲೇ ಬಹಳ ಸಣ್ಣದಾಗಿ ಹೆಚ್ಚಿಕೊಂಡ ಬೀನ್ಸ್, ಕ್ಯಾರೆಟ್ ಹಾಕಿ. ಹುರಿಯುವುದನ್ನು ಮುಂದುವರಿಸುತ್ತಾ ಸಣ್ಣದಾಗಿ ತುರಿದುಕೊಂಡ ಕೋಸು ಹಾಗೂ ದೊಣ್ಣೆಮೆಣಸನ್ನು ಹಾಕಿ. 40 ಸೆಕೆಂಡ್‌ಗಳ ಬಳಿಕ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ಪೆಪ್ಪರ್ ಪೌಡರ್ ಸೇರಿಸಿ. ಜೋಳದ ಹಿಟ್ಟನ್ನು ನೀರಿಗೆ ಹಾಕಿ ಕಲೆಸಿ ಸೇರಿಸಿ. ನಂತರ 1 ಲೋಟ ನೀರು ಹಾಕಿ ತರಕಾರಿಗಳು ಸ್ವಲ್ಪ ಮಟ್ಟಿಗೆ ಬೇಯುವಂತೆ ಪಾತ್ರೆಯನ್ನು ಮುಚ್ಚಿಡಿ. ತರಕಾರಿ ಶೇ.65ರಷ್ಟು ಬೇಯುತ್ತಲೇ ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಉದುರಿಸಿ.
ಇದಕ್ಕೂ ಮುನ್ನ ಯಾವುದಾದರೂ ನೂಡಲ್ಸ್‌ನ್ನು ಬಿಸಿನೀರಿನಲ್ಲಿ ಅರೆಬೇಯಿಸಿ ನೀರು ಸೋಸಲು ಬಟ್ಟೆಯ ಮೇಲೆ ಹಾಕಿಡಿ. ನೀರು ಆರಿದ ಬಳಿಕ, ಬಾಣಲೆಯಲ್ಲಿ ಎಣ್ಣೆ ಕಾಯಲು ಬಿಟ್ಟು ಅದಕ್ಕೆ ನೂಡಲ್ಸ್ ಹಾಕಿ ಕರಿಯಿರಿ. ಇದನ್ನು ಸೂಪ್‌ಗೆ ಸೇರಿಸಿ ಸವಿಯಿರಿ.