ಸೋಂಕಿತನ ಜತೆ ಉಸಿರಾಡಿದ್ರೂ ಕೊರೋನಾ ವೈರಸ್ ಬರುತ್ತೆ: ಅಮೆರಿಕ!
ಸೋಂಕಿತನ ಜತೆ ಉಸಿರಾಡಿದ್ರೂಕೊರೋನಾ ವೈರಸ್ ಬರುತ್ತೆ!| ಕೆಮ್ಮು, ಸೀನಿದರಷ್ಟೇ ವೈರಸ್ ಸೋಂಕು ಬರಲ್ಲ| ಅಮೆರಿಕ ಉನ್ನತ ವಿಜ್ಞಾನಿ ವಾದ: ತೀವ್ರ ತಲ್ಲಣ
ವಾಷಿಂಗ್ಟನ್(ಏ.05): ಕೊರೋನಾ ವೈರಸ್ ಸೋಂಕು ಹೊಂದಿರುವ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಮಾತ್ರ ಆತನಿಂದ ಸೋಂಕು ಹಬ್ಬುತ್ತದೆ ಎಂಬ ನಂಬಿಕೆ ಇರುವಾಗಲೇ, ಇದಕ್ಕೆ ವ್ಯತಿರಿಕ್ತ ವಾದವೊಂದನ್ನು ಅಮೆರಿಕದ ಉನ್ನತ ವಿಜ್ಞಾನಿಯೊಬ್ಬರು ಮುಂದಿಟ್ಟಿದ್ದಾರೆ. ಸೋಂಕಿತ ವ್ಯಕ್ತಿ ಜತೆ ಉಸಿರಾಡಿದರೆ ಅಥವಾ ಮಾತನಾಡಿದರೂ ಕೊರೋನಾ ಹಬ್ಬುತ್ತದೆ ಎಂಬ ಆತಂಕಕಾರಿ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಲಭಿಸಿರುವ ಕೆಲವು ಮಾಹಿತಿಗಳ ಪ್ರಕಾರ, ಕೆಮ್ಮು ಅಥವಾ ಸೀನು ಮಾತ್ರವೇ ಅಲ್ಲದೇ ಸೋಂಕಿತ ವ್ಯಕ್ತಿ ಜತೆ ಮಾತನಾಡಿದರೂ, ಆತನ ಬಳಿ ಉಸಿರಾಡಿದರೂ ಸೋಂಕು ತಗುಲುತ್ತದೆ. ಹೀಗಾಗಿ ಮಾಸ್ಕ್ ಧರಿಸುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬದಲಿಸಬೇಕಾದ ಅಗತ್ಯವಿದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಆಂಥೋಣಿ ಫೌಸಿ ತಿಳಿಸಿದ್ದಾರೆ.
ಗಾಳಿಯಿಂದ್ಲೂ ಹರಡುತ್ತೆ ಕೊರೋನಾ: ಅಮೆರಿಕಾದ ವಿಜ್ಞಾನಿಗಳಿಂದ ಶಾಕಿಂಗ್ ವರದಿ!
ಸೋಂಕಿತ ವ್ಯಕ್ತಿ ಸೀನಿದರೆ ಅಥವಾ ಕೆಮ್ಮಿದರೆ ಆತನಿಂದ ಸೋಂಕು ಹೊಂದಿದ ದ್ರವದ ಕಣಗಳು ಒಂದು ಮೀಟರ್ ಆಸುಪಾಸಿನಲ್ಲಿ ಬೀಳುತ್ತವೆ. ಅವರು 3 ತಾಸು ಸಕ್ರಿಯವಾಗಿರುತ್ತವೆ ಎಂದು ವಿಶ್ವಾದ್ಯಂತ ತಜ್ಞರು ತಿಳಿಸಿದ್ದರು.