Asianet Suvarna News Asianet Suvarna News

ಭಾರ​ತದ ಆರ್ಥಿಕತೆ ಮೇಲೆ ಕೊರೋನಾ ಎಫೆಕ್ಟ್ ಏನು?

ಭಾರತ ಸೇರಿ​ದಂತೆ 93 ದೇಶ​ಗ​ಳಿಗೆ ಮಾರ​ಣಾಂತಿಕ ಕೊರೋನಾ ವೈರಸ್‌ ಸೋಂಕು ತಗು​ಲಿದೆ. ಕೊ​ರೋ​ನಾ ವೈರಾ​ಣು ಜೀವ​ಹಾನಿ ಮಾತ್ರವ​ಲ್ಲದೆ ಆರ್ಥಿ​ಕ-ವಾಣಿಜ್ಯ ಕ್ಷೇತ್ರದ ಮೇಲೂ ದುಷ್ಪ​ರಿ​ಣಾಮ ಬೀರು​ತ್ತಿದೆ. 

Trade Impact of coronavirus for India estimated at Rs 2575 crore UN report
Author
Bengaluru, First Published Mar 7, 2020, 4:44 PM IST

ಭಾರತ ಸೇರಿ​ದಂತೆ 93 ದೇಶ​ಗ​ಳಿಗೆ ಮಾರ​ಣಾಂತಿಕ ಕೊರೋನಾ ವೈರಸ್‌ ಸೋಂಕು ತಗು​ಲಿದೆ. ಕೊ​ರೋ​ನಾ ವೈರಾ​ಣು ಜೀವ​ಹಾನಿ ಮಾತ್ರವ​ಲ್ಲದೆ ಆರ್ಥಿ​ಕ-ವಾಣಿಜ್ಯ ಕ್ಷೇತ್ರದ ಮೇಲೂ ದುಷ್ಪ​ರಿ​ಣಾಮ ಬೀರು​ತ್ತಿದೆ. ಚೀನಾ ಮೂಲದ ಈ ವೈರ​ಸ್‌​ನಿಂದ ಜಾಗ​ತಿಕ ಆರ್ಥಿ​ಕ​ತೆಯೇ ತಲ್ಲ​ಣ​ಗೊ​ಳ್ಳುವ ಅಪಾಯ ಎದು​ರಾ​ಗಿದೆ.

ಚೀನಾದ ವಸ್ತು​ಗಳ ಮೇಲೆ ಅವ​ಲಂಬ​ನೆ​ಯಾ​ಗಿದ್ದ ಉದ್ಯ​ಮ​ಗಳು ತತ್ತ​ರಿ​ಸುವ ಭೀತಿ ಎದು​ರಿ​ಸು​ತ್ತಿ​ವೆ.​ ಈ ಹಿನ್ನೆ​ಲೆ​ಯಲ್ಲಿ ಕೊರೋನಾ ವೈರಸ್‌ ಭಾರ​ತದ ಆರ್ಥಿ​ಕತೆ ಹಾಗೂ ವಿವಿಧ ಉದ್ದಿ​ಮೆ​ಗಳ ಮೇಲೆ ಹೇಗೆ ಪ್ರಭಾವ ಬೀರು​ತ್ತಿದೆ ಎಂಬ ವಿವರ ಇಲ್ಲಿ​ದೆ.

ದೇಶದ 6000 ಮಂದಿ ಬಳಿ 215 ಕೋಟಿ ರೂ. ಗಿಂತ ಅಧಿಕ ಆಸ್ತಿ!

ಔಷಧ ಕ್ಷೇತ್ರ

ಭಾರ​ತ ಔಷಧ ಮಾರು​ಕ​ಟ್ಟೆ​ಯಲ್ಲಿ ಪ್ರಮುಖ ರಫ್ತು​ದಾರ ದೇಶ​ವಾ​ಗಿ​ದ್ದರೂ ಕೆಲ​ವೊಂದು ಔಷ​ಧ​ಗ​ಳಿ​ಗಾಗಿ ಇತರ ದೇಶ​ಗಳ ಮೇಲೆ ಅವ​ಲಂಬಿ​ತ​ವಾ​ಗಿದೆ. ಭಾರತ, ಚೀನಾ​ದಿಂದ 68% ಡ್ರಗ್‌​ (ಔ​ಷ​ಧ​)ಗ​ಳನ್ನು ಆಮದು ಮಾಡಿ​ಕೊ​ಳ್ಳುತ್ತಿದೆ. ಚೀನಾದಲ್ಲಿ ಈಗಾ​ಗಲೇ ಕೊರೋನಾ ಭೀತಿ ಹೆಚ್ಚಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಪೂರೈಕೆ ಕಡಿ​ಮೆ​ಯಾ​ಗಿದೆ. ಪರಿ​ಣಾ​ಮ ಭಾರ​ತ​ದ​ಲ್ಲಿ ಔಷ​ಧ​ಗಳ ಕೊರತೆ ಉಂಟಾ​ಗುವ ಸಾಧ್ಯತೆ ಇದೆ.

ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಭಾರ​ತ​ದ​ಲ್ಲಿ ಕೆಲ ಔಷ​ಧ​ಗಳ ರಫ್ತಿಗೆ ನಿಷೇಧ ಹೇರ​ಲಾ​ಗಿದೆ. ಅಲ್ಲದೆ ನ್ಯಾಷ​ನಲ್‌ ಫಾರ್ಮಾ​ಸಿ​ಟಿ​ಕಲ್‌ ಅಥಾ​ರಿ​ಟಿ​(​ಎ​ನ್‌​ಪಿ​ಪಿ​ಎ) ರಾಜ್ಯ ಮತ್ತು ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳಿಗೆ ಔಷ​ಧ​ಗಳ ಲಭ್ಯ​ತೆ ಬಗ್ಗೆ ಸೂಕ್ಷ್ಮ ದೃಷ್ಟಿಇಟ್ಟಿ​ರು​ವಂತೆ ಸೂಚಿ​ಸಿದೆ.

ಕಾಳ​ಸಂತೆ​ಕೋ​ರರು ಪರಿ​ಸ್ಥಿ​ತಿಯ ಲಾಭ ಪಡೆ​ಯಲು ಯತ್ನಿ​ಸ​ದಂತೆ ಕ್ರಮ ಜರು​ಗಿ​ಸಲು ಎಚ್ಚ​ರಿಕೆ ನೀಡಿದೆ. ಜ್ವರಕ್ಕೆ ಮದ್ದಾಗಿ ಬಳ​ಸುವ ಪ್ಯಾರಾ ಸಿಟ​ಮಲ್‌ ಮಾತ್ರೆ ಬೆಲೆ ಚೀನಾ​ದಲ್ಲಿ ಈಗಾ​ಗ​ಲೇ 40% ಏರಿ​ಕೆ​ಯಾ​ಗಿದ್ದು, ಭಾರ​ತ​ದ​ಲ್ಲೂ 20% ಏರಿ​ಕೆ​ಯಾ​ಗಿ​ದೆ.

ಆಟೋ ಮೊ​ಬೈ​ಲ್‌

ಚೀನಾದ ಆಟೋ​ಮೊ​ಬೈಲ್‌ ವಲ​ಯ ಕೊರೋ​ನಾ​ದಿಂದ ತತ್ತ​ರಿ​ಸಿದೆ. ಅಲ್ಲಿ ವಾಹ​ನ​ಗಳ ಮಾರಾಟ 18% ಕುಸಿ​ದಿದೆ. ಆಟೋ​ಮೊ​ಬೈಲ್‌ ಬಿಡಿ​ಭಾಗ ರಫ್ತು ಕೂಡಾ ನಿಂತಿ​ದೆ. ಆದರೆ ಕೊರೋನಾ ಮಹಾ​ಮಾ​ರಿ​ ಭಾರ​ತ​ದ ಆಟೋ​ಮೊ​ಬೈಲ್‌ ಕ್ಷೇತ್ರದ ಮೇಲೆ ಕಡಿಮೆ ಪ್ರಮಾ​ಣ​ದಲ್ಲಿ ಪ್ರಭಾವ ಬೀರ​ಬ​ಹುದು ಎಂದು ಅಂದಾ​ಜಿ​ಸ​ಲಾ​ಗು​ತ್ತಿದೆ. ಆದಾಗ್ಯೂ ಮುಂದಿನ ದಿನ​ಗ​ಳಲ್ಲಿ ಆಟೋ​ಮೊ​ಬೈಲ್‌ ಕ್ಷೇತ್ರ​ದಲ್ಲಿ ವಾಹ​ನ​ ಬೇಡಿಕೆ ನೀರ​ಸ​ವಾ​ಗಿ​ರ​ಬ​ಹುದು.

YES ಬ್ಯಾಂಕ್ ಬಿಕ್ಕಟ್ಟು ಬೆನ್ನಲ್ಲೇ ಸಂಸ್ಥಾಪಕ ರಾಣಾಗೆ ED ಶಾಕ್!

ಪ್ರತಿ ವರ್ಷ ಚೀನಾ​ದಿಂದ 27% ಆಟೋ​ಮೊ​ಬೈಲ್‌ ಸಾಧ​ನ​ಗ​ಳನ್ನು ಆಮದು ಭಾರ​ತ ಮಾಡಿ​ಕೊ​ಳ್ಳುತ್ತಿ​ದೆ. ಆದರೆ ಪ್ರಸಕ್ತ ವರ್ಷ ದೇಶ​ದ​ಲ್ಲಿ ​ವಾ​ಹನ ಬೇಡಿಕೆ ಪ್ರಮಾಣ 8.3%ಗೆ ಕುಸಿ​ಯಬ​ಹುದು ಎಂದು ಅಂದಾ​ಜಿ​ಸ​ಲಾ​ಗು​ತ್ತಿ​ದೆ. ಚೀನಾ​ದಲ್ಲಿ ಆಟೋ​ಮೊ​ಬೈಲ್‌ ಕ್ಷೇತ್ರ ಸಂಪೂರ್ಣ ಮುಳು​ಗಿ​ದರೆ ಭಾರ​ತ​ದ​ಲ್ಲಿಯೂ ಅಲ್ಪ ಮಟ್ಟಿಗೆ ಪ್ರಬಾವ ಬೀರು​ತ್ತ​ದೆ.

ಮಾಹಿತಿ ತಂತ್ರ​ಜ್ಞಾ​ನ

ತಜ್ಞರ ಪ್ರಕಾರ ಕೊರೋ​ನಾ​ದಿಂದ ಭಾರ​ತದ ಮಾಹಿತಿ ತಂತ್ರ​ಜ್ಞಾನ ವಲಕ್ಕೆ ಅಷ್ಟೇನೂ ಅಪಾಯ ಇಲ್ಲ. ಆರ್‌​ಬಿಐ ಮಾಹಿತಿ ಪ್ರಕಾರ ಭಾರತ ಸುಮಾರು 900 ಕೋಟಿ ಡಾಲರ್‌ ಮೌಲ್ಯದ ಸಾಫ್ಟ್‌​ವೇ​ರನ್ನು ಈಸ್ಟ್‌ ಏಷ್ಯಾಗೆ ರಫ್ತು ಮಾಡು​ತ್ತ​ದೆ. ಇದ​ರಲ್ಲಿ ಚೀನಾದ ಕೊಡುಗೆ 20-30% ಇರುತ್ತಿತ್ತು. ಹಾಗಾಗಿ ಈ ಬಾರಿ ಸಾಫ್ಟ್‌​ವೇರ್‌ ವಲ​ಯಕ್ಕೆ 200-300 ಕೋಟಿ ಡಾಲರ್‌ ಕಳೆ​ದು​ಕೊ​ಳ್ಳ​ಬ​ಹುದು ಎಂದು ಅಂದಾ​ಜಿ​ಸ​ಲಾ​ಗು​ತ್ತಿ​ದೆ.

ಜವಳಿ ಕ್ಷೇತ್ರ

ಭಾರತ ಪ್ರತಿ ತಿಂಗಳು 2ರಿಂದ 2.5 ಕೋಟಿ ಕೆ.ಜಿ. ಹತ್ತಿ​ಯನ್ನು ಚೀನಾ​ಗೆ ರಫ್ತು ಮಾಡು​ತ್ತದೆ. ಚೀನಾ​ದಲ್ಲಿ ಕೊರೋನಾ ಭೀತಿ ಹೆಚ್ಚಾ​ಗಿ​ರುವ ಹಿನ್ನೆ​ಲೆ​ಯಲ್ಲಿ ದೇಶೀಯ ಮಾರು​ಕ​ಟ್ಟೆ​ಯಲ್ಲಿಯೂ ಹತ್ತಿ ಬೆಲೆ 3-4% ಇಳಿ​ಕೆ​ಯಾ​ಗಿದೆ. ಅಲ್ಲದೆ ಚೀನಾದ ಜವಳಿ ಉದ್ಯ​ಮ​ಗಳು ಚೀನಾ ಹೊಸ ವರ್ಷ​ದಿಂದ ಮುಚ್ಚಿವೆ.

ಹಾಗೆ​ಯೇ ಚೀನಾ​ದಿಂದ ಭಾರತ ಪ್ರತಿ ವರ್ಷ 46 ಕೋಟಿ ಡಾಲರ್‌ ಮೌಲ್ಯದ ಸಿಂಥೆ​ಟಿಕ್‌ ನೂಲು ಮತ್ತು 36 ಕೋಟಿ ಡಾಲರ್‌ ಮೌಲ್ಯದ ಸಿಂಥೆ​ಟಿಕ್‌ ಫ್ಯಾಬ್ರಿಕ್ಕನ್ನು ಆಮದು ಮಾಡಿ​ಕೊ​ಳ್ಳುತ್ತಿದೆ. ಇದೇ ರೀತಿ ಭೀತಿ ಮುಂದು​ವ​ರೆ​ದರೆ ಭಾರ​ತದ ಗಾರ್ಮೆಂಟ್ಸ್‌​ಗಳು ಸಿಂಥೆ​ಟಿಕ್‌ ನೂಲು ಮತ್ತು ಫ್ಯಾಬ್ರಿ​ಕ್‌​ಗಾಗಿ ಬೇರೆ ದಾರಿ ಹುಡು​ಕಿ​ಕೊ​ಳ್ಳ​ಬೇ​ಕಾ​ಗು​ತ್ತದೆ.

ಕೆಮಿ​ಕಲ್‌ ಇಂಡ​ಸ್ಟ್ರಿ

ಚೀನಾ​ದಲ್ಲಿ ಈಗಾ​ಗಲೇ ಕೆಲ ಕೆಮಿ​ಕಲ್‌ ಪ್ಲಾಂಟ್‌​ಗ​ಳನ್ನು ಮುಚ್ಚ​ಲಾ​ಗಿದೆ. ಹಾಗಾಗಿ ಕೆಮಿ​ಕ​ಲ್‌​ಗಳ ಬೆಲೆ ಸದ್ಯ​ದಲ್ಲೇ 5-10% ಏರಿ​ಕೆ​ಯಾ​ಗುವ ಸಾಧ್ಯತೆ ಇದೆ. ಚೀನಾ, ಡೇನಿ​ಮೋಗೆ (ಬೃಹತ್‌ ಜವ​ಳಿ ಉದ್ಯ​ಮ​) ಬೇಕಾದ ನೀಲಿ ಬಣ್ಣ​ವನ್ನು ಒದ​ಗಿ​ಸುವ ಪ್ರಮುಖ ಪೂರೈ​ಕೆ​ದಾರ ರಾಷ್ಟ್ರ. ಈಗಾ​ಗಲೇ ಚೀನಾದ ಕೆಮಿ​ಕಲ್‌ ಉತ್ಪಾ​ದನೆ 20% ಕಡಿ​ತ​ಗೊಂಡಿದ್ದು, ಭಾರ​ತದ ಉದ್ಯ​ಮಿ​ಗಳು ಮುಂಜಾ​ಗ್ರ​ತೆ​ಗಾಗಿ ಈಗಾ​ಗಲೇ ಸಂಗ್ರ​ಹ​ದಲ್ಲಿ ತೊಡ​ಗಿ​ದ್ದಾರೆ. ಇದೇ ವೇಳೆ ಅಮೆ​ರಿಕ ಮತ್ತು ಯುರೋ​ಪಿ​ಯನ್‌ ಒಕ್ಕೂ​ಟ ಇದೇ ಅವ​ಕಾ​ಶ​ವನ್ನು ಬಳ​ಸಿ​​ಕೊಳ್ಳಲು ಯತ್ನಿ​ಸು​ತ್ತಿವೆ.

ಎಲೆ​ಕ್ಟ್ರಾ​ನಿಕ್‌ ಉದ್ಯ​ಮ

ಬಹು​ತೇಕ ರಾಷ್ಟ್ರ​ಗ​ಳ ಎಲೆ​ಕ್ಟ್ರಾ​ನಿಕ್‌ ಉದ್ಯ​ಮ​ಗ​ಳಿಗೆ ಕಚ್ಚಾ ವಸ್ತು​ಗ​ಳನ್ನು ಪೂರೈ​ಸುವ ಪ್ರಮುಖ ಪೂರೈ​ಕೆ​ದಾರ ರಾಷ್ಟ್ರ ಚೀನಾ. ಭಾರ​ತ​ದಲ್ಲಿ ಸ್ಮಾರ್ಟ್‌ ಫೋನ್‌, ರೆಫ್ರಿ​ಜ​ರೇ​ಟರ್‌, ಟೀವಿ​ಗ​ಳನ್ನು ತಯಾ​ರಿ​ಸು​ವ​ವರು 85% ಬಿಡಿ​ಭಾ​ಗ​ಗ​ಳನ್ನು ಚೀನಾ​ದಿಂದಲೇ ಆಮದು ಮಾಡಿ​ಕೊ​ಳ್ಳು​ತ್ತಾರೆ. ಆದರೆ ಕಳೆದ ಒಂದೂವರೆ ತಿಂಗ​ಳಿಂದ ಈ ಸಾಮ​ಗ್ರಿ​ಗಳ ಕಂಟೈ​ನ​ರ್‌​ಗಳು ಚೀನಾದ ಬಂದ​ರು​ಗ​ಳಿಂದ ಹೊರಟೇ ಇಲ್ಲ. ಇದೇ ಪರಿ​ಸ್ಥಿತಿ ಮುಂದು​ವ​ರೆ​ದರೆ ಭಾರ​ತ​ದಲ್ಲಿ ಎಲೆ​ಕ್ಟ್ರಾ​ನಿಕ್‌ ಬಿಡಿ​ಭಾ​ಗ​ಗಳ ಬೆಲೆ ಏರಿ​ಕೆ​ಯಾ​ಗ​ಬ​ಹುದು.

ವಜ್ರೋ​ದ್ಯ​ಮ

ಭಾರತ ಪಾಲಿಶ್‌ ಮಾಡಿದ ವಜ್ರ​ಗಳ ದೊಡ್ಡ ಮಾರು​ಕ​ಟ್ಟೆ​ಯಾ​ಗಿದೆ. ಇಲ್ಲಿಂದ ಚೀನಾ, ಸಿಂಗಾ​ಪುರ ಸೇರಿ​ದಂತೆ ಅನೇಕ ದೇಶ​ಗ​ಳಿಗೆ ಪಾಲಿಶ್‌ ವಜ್ರ​ಗಳು ರಫ್ತಾ​ಗು​ತ್ತವೆ. ಆದರೆ ಕೊರೋನಾ ಪ್ರಭಾ​ವ​ದಿಂದ ಸದ್ಯ ಪಾಲಿಶ್‌ ವಜ್ರ​ಗ​ಳಿಗೆ ಬೇಡಿಕೆ ಕಡಿ​ಮೆ​ಯಾ​ಗಿದೆ. ಕಳೆದ ವರ್ಷ ಇದೇ ಸಮ​ಯಕ್ಕೆ ಹೋಲಿ​ಸಿ​ದರೆ ಈ ಉದ್ಯ​ಮ​ದ​ದಲ್ಲಿ 17% ವ್ಯಾಪಾರ ಕುಸಿತ ಕಂಡಿ​ದೆ.

YES’ಬ್ಯಾಂಕ್ ಆಯ್ತು ‘NO’ಬ್ಯಾಂಕ್: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

ಪ್ರವಾ​ಸೋ​ದ್ಯಮ ಮತ್ತು ವಾಯು​ಯಾ​ನ

ಕೊರೋನಾ ವೈರಸ್‌ ಭೀತಿ​ಯಿಂದಾಗಿ ಚೀನಾ​ದಿಂದ ಭಾರ​ತಕ್ಕೆ ಅಥವಾ ಭಾರ​ತ​ದಿಂದ ಚೀನಾಗೆ ಪ್ರವಾಸ ಹೋಗು​ವ​ವರ ಸಂಖ್ಯೆ ತೀರಾ ಕಡಿ​ಮೆ​ಯಾ​ಗಿದೆ. ತೀರಾ ಅಗತ್ಯ ಕಾರ​ಣ​ಗ​ಳನ್ನು ಹೊರ​ತು​ಪ​ಡಿಸಿ ಪ್ರವಾ​ಸಕ್ಕೆ ಹೋಗು​ವ​ವರೇ ಇಲ್ಲ ಎನ್ನು​ವಂತಾ​ಗಿದೆ.

ಚೀನಾ ಪ್ರವಾ​ಸಿ​ಗ​ರಿಂದ ಭಾರತ ಪ್ರತಿ ವರ್ಷ ಅಂದಾಜು 2,800 ಡಾಲರ್‌ ಲಾಭ ಗಳಿ​ಸು​ತ್ತಿತ್ತು. ಆದರೆ ಸೋಂಕು ಭೀತಿ​ಯಿಂದ ಭಾರತ ಸೇರಿ​ದಂತೆ ಬಹು​ತೇಕ ರಾಷ್ಟ್ರ​ಗಳು ಚೀನಾ ವೀಸಾ​ವನ್ನು ರದ್ದು​ಮಾ​ಡಿವೆ. ಬರೀ ಚೀನಾ ಮಾತ್ರ​ವ​ಲ್ಲದೆ ಭಾರತ 8 ರಾಷ್ಟ್ರ​ಗಳ ವೀಸಾ​ವನ್ನು ರದ್ದು ಮಾಡಿದೆ. ಇದು ಪ್ರವಾ​ಸೋ​ದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿ​ಣಾಮ ಬೀರು​ತ್ತದೆ. ಇದ​ರಿಂದ ವಿಮಾ​ನ​ಯಾನ ಸಂಸ್ಥೆ​ಗಳು ತೀವ್ರ ನಷ್ಟಅನು​ಭ​ವಿ​ಸು​ತ್ತಿವೆ.

ಕುಕ್ಕು​ಟೋ​ದ್ಯ​ಮ

ಕೋಳಿ ಮಾಂಸ ಸೇವ​ನೆ​ಯಿಂದ ಕೊರೋನಾ ಸೋಂಕು ತಗು​ಲು​ತ್ತದೆ ಎಂಬ ವದಂತಿ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹಬ್ಬು​ತ್ತಿ​ದ್ದಂತೆಯೇ ಭಾರ​ತದ ಕುಕ್ಕು​ಟೋದ್ಯಮ ದೊಡ್ಡ ನಷ್ಟಅನು​ಭ​ವಿ​ಸು​ತ್ತಿದೆ. ಕೋಳಿ ಮಾಂಸ ಬೆಲೆಯೂ ದಾಖಲೆ ಮಟ್ಟದಲ್ಲಿ ಇಳಿ​ದಿದ್ದು, ಕೋಟ್ಯಂತರ ರುಪಾಯಿ ನಷ್ಟಉಂಟಾ​ಗಿದೆ. ಕುಕ್ಕು​ಟೋ​ದ್ಯಮ ಕ್ಷೇತ್ರ​ದಲ್ಲಿ ದೇಶಾ​ದ್ಯಂತ ಬ್ರಾಯ್ಲರ್‌ ಕೋಳಿ ಮಾಂಸ ಮಾರಾ​ಟ​ದಲ್ಲಿ ಪ್ರತಿ ​ದಿನ 66 ಕೋಟಿ ರು. ನಷ್ಟ​ವಾ​ಗಿ​ದ್ದರೆ, ಕರ್ನಾ​ಟಕ ರಾಜ್ಯ​ದಲ್ಲಿ ದಿನಕ್ಕೆ 8 ಕೋಟಿ ರು. ಆರ್ಥಿಕ ನಷ್ಟವಾಗು​ತ್ತಿದೆ. ಹಾಗೇ ಮೊಟ್ಟೆಕೋಳಿ ಉತ್ಪಾ​ದನೆ ಹಾಗೂ ಮಾರಾ​ಟ​ದಲ್ಲಿ ದೇಶಾ​ದ್ಯಂತ ಪ್ರತಿ ​ದಿನ 28 ಕೋಟಿ ರು. ನಷ್ಟ​ವುಂಟಾ​ಗು​ತ್ತಿದೆ.

ಭಾರ​ತದ 90% ಉದ್ದಿ​ಮೆ​ಗಳು ಚೀನಾ ಸೋಂಕಿತ ಪ್ರದೇ​ಶ​ದ​ಲ್ಲಿ!

ನೆರೆಯ ಚೀನಾ​ದ​ಲ್ಲಿ​ ಭಾರ​ತದ ಬಹು​ತೇಕ ಕಂಪ​ನಿ​ಗ​ಳಿ​ರು​ವುದು ಪೂರ್ವ ಚೀನಾ​ದಲ್ಲಿ. ಭಾರ​ತದ 72% ಕಂಪ​ನಿ​ಗಳು ಶಾಂ​ಘೈ, ಬೀಜಿಂಗ್‌ ಮುಂತಾ​ದೆಡೆ ಇವೆ. ಅಂದರೆ ಭಾರತ 2.2 ಕೋಟಿ ಸಕ್ರಿಯ ಉದ್ಯ​ಮ​ಗ​ಳು ಕೊರೋನಾ ಸೋಂಕಿತ ಪ್ರದೇ​ಶ​ದ​ಲ್ಲಿಯೇ ಇವೆ. ಚೀನಾ​ದಲ್ಲಿ ಕೊರೋನಾ ಭೀಕ​ರತೆ ಹೆಚ್ಚಾ​ಗು​ತ್ತಿ​ದ್ದಂತೆಯೇ ಅಲ್ಲಿರುವ ಭಾರ​ತೀ​ಯ ಉದ್ಯ​ಮ​ಗಳೂ ತೀವ್ರ ನಷ್ಟಅನು​ಭ​ವಿ​ಸು​ತ್ತಿವೆ.

ಜಾಗ​ತಿಕ ಆರ್ಥಿ​ಕ​ತೆ ಮೇಲೇನು ಪರಿಣಾಮ?

ಮಾರ​ಣಾಂತಿಕ ಕೊರೋನಾ ವೈರಸ್‌ ಈಗಾ​ಗಲೇ 93 ದೇಶ​ಗ​ಳಿಗೆ ಹಬ್ಬಿದೆ. 90,000ಕ್ಕೂ ಹೆಚ್ಚು ಜನ​ರು ಸೋಂಕಿತ​ರಾ​ಗಿ​ದ್ದಾರೆ. ಈ ವಿದ್ಯ​ಮಾ​ನ​ವು ಅಂತಾ​ರಾ​ಷ್ಟ್ರೀಯ ಪ್ರವಾ​ಸ, ಪೂರೈ​ಕೆ ಚೈನ್‌ ಮೇಲೆ ಗಂಭೀರ ಪರಿ​ಣಾಮ ಬೀರು​ತ್ತ​ದೆ. ಶಾಲೆ​ಗಳು ಮುಚ್ಚು​ತ್ತಿವೆ, ಪ್ರಮುಖ ಕಾರ‍್ಯ​ಕ್ರ​ಮ​ಗಳು ರದ್ದಾ​ಗು​ತ್ತಿವೆ. ಈಗಾ​ಗಲೇ ಅಮೆ​ರಿ​ಕ-ಚೀನಾ ವ್ಯಾಪಾರ ಯುದ್ಧ​ ಜಾಗ​ತಿಕ ಆರ್ಥಿ​ಕತೆ ಮೇಲೆ ಪ್ರಭಾವ ಬೀರಿದ್ದು, ಕೊರೋನಾದಿಂದ ಮತ್ತಷ್ಟುಹೊಡೆ​ತ ಬೀಳುವ ಸಾಧ್ಯತೆ ಇದೆ.

ಕೊರೋನಾ ವೈರಸ್‌ ಜಾಗ​ತಿಕ ಬೆಳ​ವ​ಣಿಗೆ ಮೇಲೆ ನಕಾ​ರಾ​ತ್ಮಕ ಪರಿ​ಣಾಮ ಬೀರ​ಬ​ಹುದು ಎಂದು ಅಂತಾ​ರಾ​ಷ್ಟ್ರೀಯ ಹಣ​ಕಾಸು ನಿಧಿ ಕೂಡ ಅಭಿ​ಪ್ರಾ​ಯ​ಪ​ಟ್ಟಿದೆ. ಇನ್ನೊಂದು ಆತಂಕ​ಕಾರಿ ವಿಷಯ ಎಂದ​ರೆ ಕೊರೋನಾ ವೈರ​ಸ್‌ ಪರಿ​ಣಾಮ ಭಾರತ ಈಗಾ​ಗಲೇ 34.8 ಕೋಟಿ ಡಾಲರ್‌ ನಷ್ಟಅನು​ಭ​ವಿ​ಸಿದೆ. ಹಾಗೆಯೇ ಕೊರೋ​ನಾ​ದಿಂದ ತೊಂದ​ರೆ​ಗೊ​ಳ​ಗಾ​ಗು​ತ್ತಿ​ರುವ ಪ್ರಮುಖ ಆರ್ಥಿ​ಕ​ತೆ​ಗ​ಳ ಸಾಲಿ​ನಲ್ಲಿ ಭಾರ​ತ 15ನೇ ಸ್ಥಾನ​ದ​ಲ್ಲಿ​ದೆ.

 

Follow Us:
Download App:
  • android
  • ios