ಕಿರಣ್‌ ಮಜುಂದಾರ್‌, ನಿರ್ಮಲಾ ಟ್ವೀಟಾಪತಿ! ಆರೋಗ್ಯ ಸಚಿವರ ಬದಲು ವಿತ್ತ ಸಚಿವರಿಂದೇಕೆ ಪ್ರಕಟಣೆ? ಆರ್ಥಿಕ ಸುಧಾರಣೆಗೆ ಏನು ಕ್ರಮ: ಉದ್ಯಮಿ ಟಾಂಗ್‌ | ಸಚಿವರು ಊರಲ್ಲಿಲ್ಲ, ಆರ್ಥಿಕತೆಗೆ ಕ್ರಮ ಕೈಗೊಂಡಿದ್ದೇನೆ: ಸಚಿವೆ

ನವದೆಹಲಿ (ಸೆ. 20): ದೇಶದಲ್ಲಿ ಇ-ಸಿಗರೆಟ್‌ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಬೆಂಗಳೂರು ಮೂಲದ ಉದ್ಯಮಿ ಕಿರಣ್‌ ಮಜುಂದಾರ್‌ ಶಾ ನಡುವಿನ ವಾಗ್ಬಾಣಕ್ಕೆ ಟ್ವೀಟರ್‌ ವೇದಿಕೆಯಾಗಿದೆ.

ಗುರುವಾರ ಬೆಳಗ್ಗೆ ಉದ್ಯಮಿ ಕಿರಣ್‌ ಅವರು, ದೇಶಾದ್ಯಂತ ಇ-ಸಿಗರೆಟ್‌ ನಿಷೇಧ ಮಾಡಿದ್ದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ಇ-ಸಿಗರೆಟ್‌ ನಿಷೇಧವನ್ನು ಆರೋಗ್ಯ ಇಲಾಖೆ ಪ್ರಕಟಿಸಬೇಕಿತ್ತಲ್ಲವೇ? ಹಾಗಾದರೆ, ಗುಟ್ಕಾ ಸಹ ಬ್ಯಾನ್‌ ಮಾಡುತ್ತೀರಾ? ಆರ್ಥಿಕ ಸುಧಾರಣೆಗೆ ವಿತ್ತ ಸಚಿವಾಲಯ ಹೇಗೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ತಿಳಿಸಬಹುದೇ ಎಂದೆಲ್ಲಾ ಟ್ವೀಟರ್‌ ಮೂಲಕ ಪ್ರಶ್ನಿಸಿದ್ದಾರೆ.

Scroll to load tweet…

ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಉತ್ತರ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್‌, ‘ಇ-ಸಿಗರೆಟ್‌ಗೆ ಸಂಬಂಧಿಸಿದ ಸಚಿವರ ಗುಂಪಿನ ಅಧ್ಯಕ್ಷೆಯಾಗಿದ್ದ ಕಾರಣಕ್ಕಾಗಿ ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದೇನೆ’ ಎಂಬ ಸ್ಪಷ್ಟನೆ ನೀಡಿದ್ದಾರೆ.

Scroll to load tweet…

ಕಿರಣ್‌ ಜೀ, ನಿಮಗೆ ಕೆಲವು ಸಂಗತಿಗಳನ್ನು ಮನದಟ್ಟು ಮಾಡಿಕೊಡಲು ಬಯಸುತ್ತೇನೆ. ಕ್ಯಾಬಿನೆಟ್‌ ನಿರ್ಧಾರಗಳನ್ನು ತಿಳಿಸುವ ಸಲುವಾಗಿ ಈ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಆರೋಗ್ಯ ಸಚಿವ ಕಾರ್ಯನಿಮಿತ್ತ ಅಂತಾರಾಷ್ಟ್ರೀಯ ಸಭೆಯಲ್ಲಿದ್ದಿದ್ದರಿಂದ, ಸಚಿವರ ತಂಡದ ನೇತೃತ್ವವನ್ನು ವಹಿಸಿದ್ದೆ. ಜೊತೆಗೆ, ಆರ್ಥಿಕ ಸಚಿವೆಯಾಗಿ ನಾನು ದೇಶದ ಆರ್ಥಿಕತೆಯ ಸುಧಾರಣೆಗಾಗಿ ಆಗಾಗ್ಗೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇನೆ. ಅಲ್ಲದೆ, ಅವುಗಳ ಬಗ್ಗೆ ಸುದ್ದಿಗೋಷ್ಠಿ ಮೂಲಕ ಪ್ರಚುರ ಪಡಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ಕೊನೆಗೆ, ತಮ್ಮ ಉತ್ತರಿಂದ ನನ್ನ ಗೊಂದಲ ನಿವಾರಣೆಯಾಗಿದೆ. ನಿಮ್ಮ ಉತ್ತರಕ್ಕೆ ಧನ್ಯವಾದಗಳು ಎಂದು ನಿರ್ಮಲಾ ಅವರಿಗೆ ಮಜೂಂದಾರ್‌ ಶಾ ಹೇಳಿದ್ದಾರೆ.