ಸುಂಕ ಏರಿಕೆ: ಕಚ್ಚಾ ತೈಲ ಅಗ್ಗವಾದರೂ, ಪೆಟ್ರೋಲ್, ಡೀಸೆಲ್ ಬೆಲೆ ತುಟ್ಟಿ!
ಇನ್ನೂ 8 ರು.ವರೆಗೆ ಪೆಟ್ರೋಲ್, ಡೀಸೆಲ್ ದರ ಇಳಿಕೆ ತಡೆವ ಮಸೂದೆಗೆ ಲೋಕ ಅಂಗೀಕಾರ| ವಿಶೇಷ ಅಬಕಾರಿ ಸುಂಕ ವಿಧಿಸುವ ಮಸೂದೆಯನ್ನು ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ(ಮಾ.24): ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಪ್ರತೀ ಲೀಟರ್‌ಗೆ 8 ರು. ಅಬಕಾರಿ ಸುಂಕ ವಿಧಿಸಲು ಅನುಮತಿ ಕಲ್ಪಿಸುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ. ಸೋಮವಾರ ನಡೆದ ಸಂಸತ್ತಿನ ಕಲಾಪದಲ್ಲಿ ಲೀಟರ್ ಪೆಟ್ರೋಲ್‌ಗೆ 18 ರು.ವರೆಗೆ ಹಾಗೂ ಡೀಸೆಲ್‌ಗೆ 12 ರು.ವರೆಗೆ ವಿಶೇಷ ಅಬಕಾರಿ ಸುಂಕ ವಿಧಿಸುವ ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಶೇಷ ಅಬಕಾರಿ ಸುಂಕ ವಿಧಿಸುವ ಅಂಶವನ್ನೊಳಗೊಂಡ ಹಣಕಾಸು ಮಸೂದೆಗೆ ಯಾವುದೇ ಚರ್ಚೆಯಿಲ್ಲದೆ, ಲೋಕಸಭೆ ಅಂಗೀಕಾರ ನೀಡಿತು. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾದಾಗ ಅದನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು ಅಷ್ಟೇ ಮೊತ್ತದ ಸುಂಕ ವಿಧಿಸುವ ಮೂಲಕ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ.
ಇದುವರೆಗೂ ಪ್ರತೀ ಲೀ. ಪೆಟ್ರೋಲ್‌ಗೆ 10 ರು. ಹಾಗೂ ಡೀಸೆಲ್‌ಗೆ 4 ರು. ಅಬಕಾರಿ ಸುಂಕ ವಿಧಿಸಲು ಅವಕಾಶವಿತ್ತು. ಮಾ.14ರಂದು ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 3 ರು. ಏರಿಸಿದ ಕಾರಣ, ವಿಧಿಸಬಹುದಾದ ಸುಂಕದ ಗರಿಷ್ಠ ಮಿತಿ ಮುಟ್ಟಿತ್ತು. ಹೀಗಾಗಿ ಅದನ್ನು ಮತ್ತಷ್ಟುಏರಿಸಲು ಅವಕಾಶ ಮಾಡಿಕೊಡುವ ಮಸೂದೆಯನ್ನು ಮಂಡಿಸಲಾಗಿತ್ತು.