Asianet Suvarna News Asianet Suvarna News

ಕನ್ನಡ ಕಲಿಸುವ 32 ವರ್ಷದ ಶಿಕ್ಷಕಗೆ ಒಲಿದ 7.5 ಕೋಟಿ ರು. : ಇಲ್ಲಿದೆ ಅವರ ಯಶೋಗಾಥೆ

ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಕಲಿಸುವ ಈ ಶಿಕ್ಷಕಗೆ  ಭಾರೀ ಮೊತ್ತದ ಪ್ರಶಸ್ತಿ ಒಲಿದು ಬಂದಿದೆ. ತಮಗೊಲಿದ ಆ ಪ್ರಶಸ್ತಿ ಮೊತ್ತವನ್ನು ಹೇಗೆ ಉಪ ಯೋಗಿಸಿದರು. 

Solapur teacher share his Rs 7 crore global award To Social Service snr
Author
Bengaluru, First Published Dec 5, 2020, 7:44 AM IST

 ಪುಣೆ (ಡಿ.05): ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರದ ಶಿಕ್ಷಕ ರಂಜಿತ್‌ಸಿಂಹ ದಿಸಾಳೆ ಅವರಿಗೆ ‘ಜಾಗತಿಕ ಶಿಕ್ಷಕ ಪ್ರಶಸ್ತಿ-2020’ ಸಂದಿದೆ. ಇವರ ಮಾತೃಭಾಷೆ ಮರಾಠಿಯಾದರೂ ಕನ್ನಡ ಕಲಿತು, ಕನ್ನಡ ಭಾಷಿಕ ವಿದ್ಯಾರ್ಥಿನಿಯರಿಗೆ ಕನ್ನಡ ಶಿಕ್ಷಣ ಕಲಿಸಿದ್ದು ಮಾತ್ರ ಒಂದು ಅದ್ಭುತ ಯಶೋಗಾಥೆ.

32 ವರ್ಷದ ದಿಸಾಳೆ ಅವರಿಗೆ 7.5 ಕೋಟಿ ರು. ಬಹುಮಾನ ಮೊತ್ತದ ಈ ಪ್ರಶಸ್ತಿ ಒಲಿದು ಬಂದಿದ್ದು ಅವರು ಸೊಲ್ಲಾಪುರದ ಪರಿಟೇವಾಡಿಯ ಜಿಲ್ಲಾ ಪರಿಷತ್‌ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಒದಗಿಸಿದ್ದಕ್ಕಾಗಿ. ಮಾತೃಭಾಷೆ ಮರಾಠಿಯಾದರೂ ದಿಸಾಳೆ ಅವರು ಕನ್ನಡ ಕಲಿತು ಬೋಧಿಸಿದ್ದರ ಹಿಂದೆ ಒಂದು ರೋಚಕ ಕತೆಯೇ ಇದೆ.

7.5 ಕೋಟಿ ರೂ. ಗೆದ್ದ ಹಣದಲ್ಲಿ ಸಹ ಸ್ಪರ್ಧಿಗಳಿಗೆ ಹಂಚಿದ ಮಾಸ್ಟರ್‌ಗೆ ಸಿಎಂ ಸಲಾಂ..! ..

ದಿಸಾಳೆ ಮೊದಲು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಲು ಬಯಸಿದ್ದರು. ಆದರೆ ಕಾರಣಾಂತರದಿಂದ ಆಗಲಿಲ್ಲ. ಹೀಗಾಗಿ ಅವರ ತಂದೆಯು ‘ಶಿಕ್ಷಕ ಆಗು’ ಎಂದು ಪ್ರೇರೇಪಿಸಿದರು. ಇದಕ್ಕೆ ಒಪ್ಪಿದ ದಿಸಾಳೆ, ‘ನಿಜವಾದ ಪರಿವರ್ತನೆ ಮಾಡಬೇಕು ಎಂದರೆ ಶಿಕ್ಷಕ ಆಗಬೇಕು’ ಎಂದು ಮನಗಂಡರು.

ಮೊದಲು ಇವರು ಸೊಲ್ಲಾಪುರದ ಪರಿಟೇವಾಡಿ ಪ್ರಾಥಮಿಕ ಶಾಲೆಗೆ 2009ರಲ್ಲಿ ಶಿಕ್ಷಕನಾಗಿ ಬಂದರು. ಶಾಲೆ ಶಿಥಿಲಾವಸ್ಥೆಯಲ್ಲಿತ್ತು. ಸೊಲ್ಲಾಪುರ ಮಹಾರಾಷ್ಟ್ರದ ಕನ್ನಡ ಬಾಹುಳ್ಯದ ಪ್ರದೇಶ. ಆದರೆ ಮರಾಠಿ ಮಾಧ್ಯಮ ಅಲ್ಲಿದ್ದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿರಲಿಲ್ಲ. ಅಲ್ಲದೆ, ಬುಡಕಟ್ಟು ಪ್ರದೇಶ ಅದಾಗಿದ್ದರಿಂದ ವಿದ್ಯಾರ್ಥಿನಿಯರಿಗೆ ಬಾಲ್ಯವಿವಾಹ ನೆರವೇರಿಸಲಾಗುತ್ತಿತ್ತು.

ಇದನ್ನು ಮನಗಂಡ ದಿಸಾಳೆ, ತಾವೇ ಖುದ್ದು ಕನ್ನಡ ಕಲಿತರು. 1ರಿಂದ 4ನೇ ತರಗತಿವರೆಗಿನ ಪಠ್ಯಗಳನ್ನು ಮರುವಿನ್ಯಾಸಗೊಳಿಸಿದರು. ಹಾಡು, ಪಠ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ವಿಡಿಯೋ ಮೂಲಕ ಕಲಿಕೆ ಆರಂಭಿಸಿದರು. ಇದಕ್ಕಾಗಿ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಬಳಸಿದ ವೈಶಿಷ್ಟ್ಯ ಅವರದು.

ಇದರಿಂದ ಕನ್ನಡ ಭಾಷಿಕ ವಿದ್ಯಾರ್ಥಿನಿಯರು ಪ್ರೇರಿತರಾಗಿ ಶಾಲೆಯತ್ತ ಆಕರ್ಷಿತರಾದರು. ಶಾಲೆಯತ್ತ ತಾತ್ಸಾರ ಧೋರಣೆ ಬಿಟ್ಟು ಕಲಿಕೆ ಆರಂಭಿಸಿದರು. ಈ ಹಿಂದೆ ಈ ಸ್ಥಳದಲ್ಲಿ ಭಯೋತ್ಪಾದಕ ದಾಳಿಯಿಂದ ಶಾಲೆ ಮುಚ್ಚಿದ್ದರೂ ಕ್ಯುಆರ್‌ ಕೋಡ್‌ ಬಳಸಿ ವಿದ್ಯಾರ್ಥಿನಿಯರು ನಿರಂತರವಾಗಿ ಕಲಿತರು. ಬಾಲ್ಯವಿವಾಹದ ಭರಾಟೆ ತಗ್ಗಿತು. ಶಾಲೆಗೆ ಶೇ.100ರಷ್ಟುಮಕ್ಕಳು ಹಾಜರಾದರು.

ಈ ಪ್ರಯತ್ನದ ಕಾರಣ ಶಾಲೆಗೆ 2016ರಲ್ಲಿ ಉತ್ತಮ ಶಾಲೆ ಪ್ರಶಸ್ತಿ ಬಂತು. ಶೇ.98 ವಿದ್ಯಾರ್ಥಿಗಳು ತೇರ್ಗಡೆಯಾರು. ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಳ್ಲ ಅವರು ದಿಸಾಳೆ ಅವರ ಕೆಲಸ ಗುರುತಿಸಿ ಪುಸ್ತಕವೊಂದರಲ್ಲಿ ಉಲ್ಲೇಖಿಸಿದರು.

ಕೇಂದ್ರ ಸರ್ಕಾರ 2016ರಲ್ಲಿ ದಿಸಾಳೆ ಅವರನ್ನು ‘ವರ್ಷದ ಸೃಜನಶೀಲ ಸಂಶೋಧಕ’ ಎಂದು ಹೆಸರಿಸಿತು. 2108ರಲ್ಲಿ ಅವರಿಗೆ ರಾಷ್ಟ್ರೀಯ ಸೃಜನಶೀಲ ಪ್ರತಿಷ್ಠಾನ ‘ವರ್ಷದ ಸೃಜನಶೀಲ ವ್ಯಕ್ತಿ’ ಎಂದು ಘೋಷಿಸಿತು. ತಮ್ಮ ಕಲಿಕಾ ವಿಧಾನವನ್ನು ಅವರು 500ಕ್ಕೂ ಹೆಚ್ಚು ದೈನಿಕಗಳು, ಬ್ಲಾಗ್‌ಗಳಲ್ಲಿ ಲೇಖನದ ಮೂಲಕ ಹಂಚಿಕೊಂಡಿದ್ದಾರೆ.

ಪ್ರಶಸ್ತಿ ಮೊತ್ತವೆಲ್ಲ ಹಂಚಿಕೆ:  ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಸಾಳೆ, ‘ನನಗೆ ಬಂದ ಪ್ರಶಸ್ತಿ ಮೊತ್ತದಲ್ಲಿನ ಶೇ.20 ಭಾಗವನ್ನು ಗಡಿಯಾಚೆಗೆ ವಿದ್ಯಾರ್ಥಿಗಳಲ್ಲಿ ಶಾಂತಿ ಸ್ಥಾಪನಾ ಜಾಗೃತಿ ಮೂಡಿಸುವ ಉದ್ದೇಶದ ‘ಲೆಟ್ಸ್‌ ಕ್ರಾಸ್‌ ದ ಬಾರ್ಡರ್‌’ ಯೋಜನೆಗೆ ನೀಡುವೆ. ನನ್ನ ಪಾಲಿಗೆ ಇಡೀ ವಿಶ್ವವೇ ಶಾಲೆ’ ಎಂದರು. ಅಲ್ಲದೆ, ‘ನನಗೆ ಬಂದಿರುವ ಪ್ರಶಸ್ತಿ ಮೊತ್ತದ ಶೇ.50ರಷ್ಟುಭಾಗವನ್ನು ಅಂತಿಮ ಸುತ್ತಿಗೆ ಬಂದ ಸ್ಪರ್ಧಾಳುಗಳ ಜತೆ ಹಂಚಿಕೊಳ್ಳುವೆ’ ಎಂದೂ ಹೇಳಿದರು. ಇನ್ನುಳಿದ ಶೇ.30 ಹಣವನ್ನು ತಾವು ಸ್ಥಾಪಿಸಲು ಉದ್ದೇಶಿಸಿರುವ ಶೀಕ್ಷಕರ ಸೃಜನಶೀಲ ನಿಧಿಗೆ ಅರ್ಪಿಸುವ ಉದ್ದೇಶ ಹೊಂದಿದ್ದಾಗಿ ತಿಳಿಸಿದರು. ಈ ಹಣವನ್ನು ಇತರ ಶಿಕ್ಷಕರು ತೋರುವ ಸೃಜನಶೀಲತೆಯನ್ನು ಕಾರ‍್ಯರೂಪಕ್ಕೆ ತರಲು ಬಳಸುವುದಾಗಿ ಅವರು ವಿವರಿಸಿದರು.

Follow Us:
Download App:
  • android
  • ios