ನವದೆಹಲಿ(ಡಿ.08): ಹಿರಿಯ ಹಾಗೂ ಯುವ ಅಥ್ಲೀಟ್‌ಗಳಿಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಶುಕ್ರವಾರ 11 ಒಲಿಂಪಿಯನ್‌ ಹಾಗೂ 3 ಪ್ಯಾರಾ ಒಲಿಂಪಿಯನ್‌ಗಳನ್ನು ಕೋಚ್‌ ಹಾಗೂ ಸಹಾಯಕ ಕೋಚ್‌ಗಳಾಗಿ ನೇಮಕ ಮಾಡಿದೆ. ಈ ಪೈಕಿ ಕರ್ನಾಟಕದ ತಾರಾ ಅಥ್ಲೀಟ್‌ ಅಶ್ವಿನಿ ಅಕ್ಕುಂಜಿ ಸಹ ಇದ್ದಾರೆ. ರಿಯೋ ಪ್ಯಾರಾಲಿಂಪಿಕ್ಸ್‌ ಚಿನ್ನ ವಿಜೇತ ಮರಿಯಪ್ಪನ್‌ ತಂಗವೇಲು ‘ಎ’ ದರ್ಜೆ ಕೋಚ್‌ ಆಗಿ ನೇಮಕಗೊಂಡರೆ, ಇನ್ನುಳಿದವರಿಗೆ ‘ಬಿ’ ದರ್ಜೆ ಕೋಚ್‌ ಹಾಗೂ ಸಹಾಯಕ ಕೋಚ್‌ ಹುದ್ದೆಗಳನ್ನು ನೀಡಲಾಗಿದೆ.

ಹಿರಿಯ ಹಾಗೂ ಅನುಭವಿ ಅಥ್ಲೀಟ್‌ಗಳು ತಾವು ಕ್ರೀಡೆಯಲ್ಲಿ ಸಕ್ರಿಯರಾಗಿರುವಾಗ ಹಾಗೂ ನಿವೃತ್ತಿ ನಂತರವೂ ದೇಶದಲ್ಲಿ ಕ್ರೀಡಾಭಿವೃದ್ಧಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಯ್‌ನ ಸಿಬ್ಬಂದಿಯಾಗಿ ನೇಮಕ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಪ್ರಯತ್ನ ಇದಾಗಿದ್ದು, ಅವರು ತಮ್ಮ ದೈನಂದಿನ ಅಭ್ಯಾಸ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. 

ನೇಮಕಗೊಂಡಿರುವ ನಿವೃತ್ತ ಕ್ರೀಡಾಪಟುಗಳು ಜ.5, 2019ರಿಂದ ಕಾರ್ಯ ಆರಂಭಿಸಲಿದ್ದಾರೆ. ಕ್ರೀಡೆಯಲ್ಲಿ ಸಕ್ರಿಯರಾಗಿರುವ ಕ್ರೀಡಾಪಟುಗಳು, ನಿವೃತ್ತಿ ಬಳಿಕ ಕೋಚ್‌ ಸ್ಥಾನಕ್ಕೇರಲಿದ್ದು ಅಲ್ಲಿಯ ವರೆಗೂ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ತಮ್ಮ ಸ್ಪರ್ಧೆ ಮುಂದುವರಿಸಲಿದ್ದಾರೆ.