ಸರ್ಕಾರ ಭರವಸೆ ಈಡೇರಿಸಿದೆ: ಇನ್ನು ಕೋರ್ಟಲ್ಲಿ ಫೈಟ್, ರಸ್ತೆಯಲ್ಲಿ ಅಲ್ಲವೆಂದ ರೆಸ್ಲರ್ಸ್..!
5 ತಿಂಗಳ ನಿರಂತರ ಪ್ರತಿಭಟನೆಗೆ ಕೊನೆ ಹಾಡಿದ ಕುಸ್ತಿಪಟುಗಳು
ನಮ್ಮ ಹೋರಾಟ ಇನ್ನು ಮುಂದೆ ಕೋರ್ಟ್‌ನಲ್ಲಿ ಎಂದ ರೆಸ್ಲರ್ಸ್
ಜನವರಿಯಿಂದಲೂ ಪ್ರತಿಭಟನೆ ನಡೆಸುತ್ತಿದ್ದ ದೇಶದ ಅಗ್ರ ಕುಸ್ತಿಪಟುಗಳು
ನವದೆಹಲಿ(ಜೂ.26): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಜನವರಿಯಿಂದಲೂ ಪ್ರತಿಭಟನೆ ನಡೆಸುತ್ತಿರುವ ದೇಶದ ಅಗ್ರ ಕುಸ್ತಿಪಟುಗಳು ಇನ್ನು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಜಂತರ್‌ಮಂತರ್ ಅಥವಾ ಬೇರೆ ಕಡೆ ಪ್ರತಿಭಟನೆ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಭಾನುವಾರ ಈ ಬಗ್ಗೆ ಕುಸ್ತಿಪಟುಗಳಾದ ಭಜರಂಗ್, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಟ್ವೀಟರ್ ಮೂಲಕ ಘೋಷಿಸಿದ್ದಾರೆ. ‘ಸರ್ಕಾರ ಕುಸ್ತಿಪಟುಗಳಿಗೆ ನೀಡಿದ ಬೇಡಿಕೆಗಳನ್ನು ಈಡೇರಿಸಿದೆ. ತನಿಖೆ ಪೂರ್ಣಗೊಳಿಸಿ, ಚಾರ್ಜ್‌ಶೀಟ್ ಕೂಡಾ ಸಲ್ಲಿಕೆಯಾಗಿದೆ. ಇನ್ನು ನಮ್ಮ ಹೋರಾಟ ನ್ಯಾಯ ಸಿಗುವವರೆಗೂ ನ್ಯಾಯಾಲಯದಲ್ಲಿಯೇ ಮುಂದುವರಿಯಲಿದೆ, ರಸ್ತೆಯಲ್ಲಿ ಅಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ಕುಸ್ತಿಪಟುಗಳು ಸರ್ಕಾರದ ಭರವಸೆ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್, ಓರ್ವ ಅಪ್ರಾಪ್ತೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಬ್ರಿಜ್‌ಭೂಷಣ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಒಲಿಂಪಿಯನ್‌ಗಳಾದ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಹಾಗೂ ಭಜರಂಗ್ ಪೂನಿಯಾ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ದೀರ್ಘಕಾಲದವರೆಗೆ ಪ್ರತಿಭಟನೆ ನಡೆಸಿದ್ದರು.
ಭಾರತ ಟೆಸ್ಟ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ವಿಡಿಯೋ ಸಂದೇಶ ರವಾನಿಸಿದ ಚೇತೇಶ್ವರ್ ಪೂಜಾರ..!
ಕಳೆದ ಏಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿದಂತೆ 7 ಮಂದಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೋ ಸೇರಿ 2 ಎಫ್ಐಆರ್ ದಾಖಲಿಸಿದ್ದರು. ಈ ಬಗ್ಗೆ 5 ದೇಶಗಳಲ್ಲಿ ನಡೆದಿದ್ದ ಕುಸ್ತಿ ಕೂಟಗಳ ವೇಳೆ ದಾಖಲಾಗಿದ್ದ ಸಿಸಿಟೀವಿ ದೃಶ್ಯಗಳ ಪರಿಶೀಲನೆ, ಕುಸ್ತಿಪಟುಗಳು, ರೆಫ್ರಿ ಹಾಗೂ ಕೋಚ್ಗಳು ಸೇರಿದಂತೆ 180ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿ ದೆಹಲಿ ಮ್ಯಾಜಿಸ್ಪ್ರೇಟ್ ಕೋರ್ಚ್‌ಗೆ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.
ವಿವಿಧ ಸೆಕ್ಷನ್ಗಳಡಿ ಚಾರ್ಜ್‌ಶೀಟ್
ಬ್ರಿಜ್ ವಿರುದ್ಧ ಪೋಕ್ಸೋ ಕೇಸ್ ರದ್ದುಗೊಳಿಸಲು ಶಿಫಾರಸು ಮಾಡಲಾಗಿದ್ದರೂ ಇತರರ ದೂರುಗಳಿಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್ಗಳಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಐಪಿಸಿ 354(ಮಹಿಳೆಯರ ಮೇಲೆ ಹಲ್ಲೆ), 354ಎ(ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ) ಹಾಗೂ 506(ಬೆದರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಇದರ ಜೊತೆಗೆ ಈಗಾಗಲೇ ಅಮನತುಗೊಂಡಿರುವ ಡಬ್ಲ್ಯುಎಫ್ಐನ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಐಪಿಸಿ 109, 354, 354ಎ ಹಾಗೂ 506 ಸೆಕ್ಷನ್ಗಳಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಡಬ್ಲ್ಯುಎಫ್‌ಐ ಚುನಾವಣೆಗೆ ಗುವಾಹಟಿ ಹೈಕೋರ್ಟ್ ತಡೆ!
ಗುವಾಹಟಿ: ಜುಲೈ 11ರಂದು ನಡೆಯಬೇಕಿದ್ದ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆಗೆ ಭಾನುವಾರ ಗುವಾಹಟಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಡಬ್ಲ್ಯುಎಫ್ಐನ ಅಂಗಸಂಸ್ಥೆ ಸದಸ್ಯನಾಗಲು ಅರ್ಹತೆ ಹೊಂದಿದ್ದರೂ ಸದಸ್ಯತ್ವ ನೀಡಿಲ್ಲ ಎಂದು ಅಸ್ಸಾಂ ಕುಸ್ತಿ ಸಂಸ್ಥೆಯು ಡಬ್ಲ್ಯುಎಫ್‌ಐ, ತಾತ್ಕಾಲಿ ಸಮಿತಿ ಹಾಗೂ ಕ್ರೀಡಾ ಸಚಿವಾಯಲಯದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಚುನಾವಣೆಗೆ ತಡೆ ನೀಡಿತು.
2014ರಲ್ಲಿ ಡಬ್ಲ್ಯುಎಫ್‌ಐ ಕಾರ್ಯಕಾರಿ ಸಮಿತಿ ಶಿಫಾರಸು ಮಾಡಿದ್ದರೂ ಸದಸ್ಯತ್ವಕ್ಕೆ ಪರಿಗಣಿಸಿಲ್ಲ. ಹೀಗಾಗಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಲು ಅವಕಾಶವಿಲ್ಲ. ಆದ್ದರಿಂದ ಚುನಾವಣೆಗೆ ತಡೆ ಹೇರಬೇಕು ಎಂದು ಅಸ್ಸಾಂ ಸಂಸ್ಥೆ ಮನವಿ ಮಾಡಿತ್ತು. ಇದನ್ನು ಪರಿಗಣಿಸಿದ ನ್ಯಾಯಾಲಯ, ಚುನಾವಣೆಗೆ ತಡೆ ಹೇರಿ, ಅರ್ಜಿ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.