ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ತೂರ್, ಪಾರುಲ್..!
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮುಂದುವರೆದ ಪದಕ ಬೇಟೆ
ಶುಕ್ರವಾರ 2 ಚಿನ್ನ, 1 ಬೆಳ್ಳಿ ಪದಕ ಜಯಿಸಿದ ಭಾರತ
ಶಾಟ್‌ಪುಟ್‌ನಲ್ಲಿ ಏಷ್ಯನ್ ದಾಖಲೆ ಹೊಂದಿರುವ ತೇಜಿಂದರ್‌ಪಾಲ್ ತೂರ್
ಬ್ಯಾಂಕಾಕ್(ಜು.15): ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದ್ದು, ಶುಕ್ರವಾರ 2 ಚಿನ್ನ, 1 ಬೆಳ್ಳಿ ಪದಕ ಜಯಿಸಿದೆ. ಇದರೊಂದಿಗೆ ಭಾರತದ ಪದಕ ಗಳಿಕೆ 9ಕ್ಕೆ ಏರಿಕೆಯಾಗಿದೆ. ಶಾಟ್‌ಪುಟ್‌ನಲ್ಲಿ ಏಷ್ಯನ್ ದಾಖಲೆ ಹೊಂದಿರುವ ತೇಜಿಂದರ್‌ಪಾಲ್ ತೂರ್ ಸಿಂಗ್ ಶುಕ್ರವಾರ 20.23 ದೂರಕ್ಕೆ ಎಸೆದು ಚಿನ್ನ ತಮ್ಮದಾಗಿಸಿಕೊಂಡರು. 2017ರಲ್ಲಿ ಬೆಳ್ಳಿ ಗೆದ್ದಿದ್ದ ತೂರ್. 2019ರಲ್ಲಿ ಚಿನ್ನ ಗೆದ್ದಿದ್ದರು.
ಇನ್ನು, ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ ಕೂಡಾ ಬಂಗಾರಕ್ಕೆ ಮುತ್ತಿಟ್ಟರು. 28 ವರ್ಷದ ಪಾರುಲ್ 9 ನಿಮಿಷ 38.76 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡರು. ಇನ್ನು, ಮಹಿಳೆಯರ ಲಾಂಗ್‌ಜಂಪ್‌ನಲ್ಲಿ 19 ವರ್ಷದ ಶೈಲಿ ಸಿಂಗ್ 6.76 ಮೀ. ದೂರಕ್ಕೆ ಜಿಗಿದು ಬೆಳ್ಳಿ ಪದಕ ಜಯಿಸಿದರು. ಈ ಮೊದಲ ಹಿರಿಯರ ವಿಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಕೂಟದಲ್ಲೇ ಪದಕ ಗೆದ್ದ ಸಾಧನೆ ಮಾಡಿದರು. ಮೊದಲ ದಿನ 1 ಕಂಚು ಗೆದ್ದಿದ್ದ ಭಾರತ ಗುರುವಾರ 3 ಚಿನ್ನ, 2 ಕಂಚು ಜಯಿಸಿತ್ತು.
Duleep Trophy Final: ಪಶ್ಚಿಮ ವಲಯಕ್ಕೆ ಗೆಲ್ಲಲು ಕಠಿಣ ಗುರಿ ನೀಡಿದ ದಕ್ಷಿಣ ವಲಯ
ವೇಟ್‌ಲಿಫ್ಟಿಂಗ್: ಭಾರತದ ಶುಭಂಗೆ ಚಿನ್ನದ ಪದಕ
ಗ್ರೇಟರ್ ನೋಯ್ಡಾ: ಭಾರತದ ತಾರಾ ವೇಟ್‌ಲಿಫ್ಟರ್ ಶುಭಂ ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ಪುರುಷರ 61 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಶುಭಂ ಒಟ್ಟು 259 ಕೆ.ಜಿ. ಭಾರ ಎತ್ತಿ ಬಂಗಾರದ ಸಾಧನೆ ಮಾಡಿದರು. ಇದೇ ವೇಳೆ ಕಿರಿಯ ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಹರಿಕಾ ಬಿ. 172 ಕೆ.ಜಿ. ಭಾರ ಎತ್ತಿ ಚಿನ್ನ ತಮ್ಮದಾಗಿಸಿಕೊಂಡರು. ಇನ್ನು, ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಪೋಪಿ ಹಜಾರಿಕಾ 189 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.
ಕಿರಿಯರ ಏಷ್ಯಾಕಪ್‌ನಲ್ಲಿ ಭಾರತ ‘ಎ’ ಶುಭಾರಂಭ
ಕೊಲಂಬೊ: ಯಶ್ ಧುಳ್ ಶತಕದ ನೆರವಿನಿಂದ ಉದಯೋನ್ಮುಕ ಪುರುಷರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ‘ಎ’ ತಂಡ ಯುಎಇ ‘ಎ’ ತಂಡದ ವಿರುದ್ಧ 8 ವಿಕೆಟ್ ಜಯಗಳಿಸಿದೆ. ಶುಕ್ರವಾರ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಸುಲಭ ಗುರಿಯನ್ನು ಭಾರತ 26.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಬೆನ್ನತ್ತಿತು. ಕರ್ನಾಟಕದ ನಿಕಿನ್ ಜೋಸ್ ಔಟಾಗದೆ 41 ಹಾಗೂ ಯಶ್ ಧುಳ್ ಔಟಾಗದೆ 108 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
200ನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ ಸ್ಮೃತಿ ಮಂಧನಾ
ಢಾಕಾ: ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಗುರುವಾರ ತಮ್ಮ 200ನೇ ಅಂತಾರಾಷ್ಟ್ರೀಯ ಪಂದ್ಯ ಆಡಿದರು. ಬಾಂಗ್ಲಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು. ಅಲ್ಲದೇ ಈ ಸಾಧನೆ ಮಾಡಿದ ಭಾರತದ 4ನೇ ಆಟಗಾರ್ತಿ ಎನಿಸಿಕೊಂಡರು. ಮಿಥಾಲಿ ರಾಜ್(333), ಜೂಲನ್ ಗೋಸ್ವಾಮಿ(284) ಹಾಗೂ ಹರ್ಮನ್‌ಪ್ರೀತ್ ಕೌರ್(280) ಕೂಡಾ ಭಾರತದ ಪರ 200 ಪಂದ್ಯಗಳನ್ನಾಡಿದ್ದಾರೆ. ಸ್ಮೃತಿ ಈವರೆಗೆ ಭಾರತದ ಪರ 119 ಟಿ20, 77 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಟಿ20ಯಲ್ಲಿ 2854 ರನ್ ಕಲೆಹಾಕಿರುವ ಅವರು, ಏಕದಿನದಲ್ಲಿ 3073 ಹಾಗೂ ಟೆಸ್ಟ್‌ನಲ್ಲಿ 325 ರನ್ ಗಳಿಸಿದ್ದಾರೆ.