ಡೂನ್ ಸ್ಪೋರ್ಟ್ಸ್ ಸ್ಪರ್ಧೆಯಲ್ಲಿ 3 ಚಿನ್ನ ಗೆದ್ದ 106 ವರ್ಷದ 'ಚಿರಯುವತಿ'..!
ಸಾಧನೆ ಮಾಡಲು ವಯಸ್ಸು ಅಡ್ಡಿಯಾಗಲ್ಲವೆಂದು ತೋರಿಸಿದ 106 ವರ್ಷದ ರಾಮ್‌ಬಾಯಿ
ಕಳೆದ ವರ್ಷ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ರಾಮ್‌ಬಾಯಿ
ಇದೀಗ 106ನೇ ವಯಸ್ಸಿ ರಾಮ್‌ಬಾಯಿ ಕೊರಳಿಗೆ 3 ಚಿನ್ನದ ಪದಕ
ಡೆಹರಾಡೂನ್(ಜೂ.28): ಎರಡು ವರ್ಷಗಳ ಹಿಂದೆ ಓಟದ ಅಭ್ಯಾಸ ಆರಂಭಿಸಿದ್ದ ರಾಮ್‌ಬಾಯಿ ಇದೀಗ ಎರಡು ವರ್ಷಗಳ ಬಳಿಕ ಅಂದರೆ ತಮ್ಮ 106ನೇ ವಯಸ್ಸಿನಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಭೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ 85 ವರ್ಷ ಮೇಲ್ಪಟ್ಟ ವಯೋಮಾನದವರ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ರಾಮ್‌ಬಾಯಿ, ಇದೀಗ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತಷ್ಟು ಗರಿ ಸೇರಿಸಿಕೊಂಡಿದ್ದಾರೆ.
ಹೌದು, ಇಲ್ಲಿನ ಯುವರಾಣಿ ಸ್ಪೋರ್ಟ್ಸ್ ಕಮಿಟಿ ಆಯೋಜಿಸಿದ್ದ 18ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ರಾಮ್‌ಬಾಯಿ 100 ಮೀಟರ್ ಓಟ, 100 ಮೀಟರ್ ಓಟ ಹಾಗೂ ಶಾಟ್‌ಫುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಕೊಳ್ಳೆ ಹೊಡೆಯುವಲ್ಲಿ 106 ವರ್ಷದ ಚಿರಯುವತಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಾಧನೆ ಮಾಡಲು ವಯಸ್ಸಿನ ಅಡ್ಡಿ ಎದುರಾಗುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ರಾಮ್‌ಬಾಯಿ ಸಾಧಿಸಿ ತೋರಿಸಿದ್ದಾರೆ.
ಈ ಮೂರು ಸ್ಪರ್ಧೆಯು 85 ವರ್ಷ ಮೇಲ್ಪಟ್ಟ ವಿಭಾಗದ ಸ್ಪರ್ಧೆಯಾಗಿತ್ತು. ರಾಮ್‌ಬಾಯಿ ಒಟ್ಟು 5 ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಮೂರು ವಿಭಾಗದ ಸ್ಪರ್ಧೆಯಲ್ಲಿ ರಾಮ್‌ಬಾಯಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಚಿನ್ನದ ಪದಕ ಸ್ವೀಕರಿಸಲು ವೇದಿಕೆಗೆ ಬಂದ ರಾಮ್‌ಬಾಯಿ, ನನಗೆ ಈ ಸಾಧನೆ ಮಾಡಿದ್ದು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಗಿಂತ ಒಳ್ಳೆ ಟ್ರ್ಯಾಕ್ ರೆಕಾರ್ಡ್ ಇದ್ರೂ ಸಚಿನ್‌ನ ಈ ಗೆಳಯನಿಗೆ ಸಿಗಲಿಲ್ಲ ಟೀಂ ಇಂಡಿಯಾ ಚಾನ್ಸ್!
ರಾಮ್‌ಬಾಯಿ, ಚರ್ಕಿ ದಾದ್ರಿ ಸಮೀಪದ ಕಡ್ಮಾ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದರು. ತನ್ನ ಜೀವನದ ಬಹುಪಾಲು ಸಮಯವನ್ನು ಗೃಹಿಣಿಯಾಗಿ ಮನೆಗೆಲಸದಲ್ಲೇ ತೊಡಗಿಕೊಂಡಿದ್ದರು. ರೈತ ಕುಟುಂಬದಿಂದ ಬಂದ ರಾಮ್‌ಬಾಯಿ, ಅವರಿಗೆ 2016ರಲ್ಲಿ ತಾವು ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಪಣತೊಟ್ಟರು. ಯಾಕೆಂದರೆ ಅದೇ ಸಂದರ್ಭದಲ್ಲಿ ಪಂಜಾಬಿನ ಮನ್ ಕೌರ್, ತಮ್ಮ ನೂರನೇ ವಯಸ್ಸಿನಲ್ಲಿ ವ್ಯಾಂಕೋವರ್‌ನಲ್ಲಿ ನಡೆದ ಅಮೆರಿಕನ್ ಮಾಸ್ಟರ್ಸ್ ಗೇಮ್‌ನಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಗತ್ತಿನ ಅತಿವೇಗದ ಸೆಂಚೂರಿಯನ್ ಓಟಗಾರ್ತಿ ಎನ್ನುವ ದಾಖಲೆ ನಿರ್ಮಿಸಿದ್ದರು. ಇದು ಸಾಕಷ್ಟು ಪತ್ರಿಕೆಗಳಲ್ಲಿ ಹೆಡ್‌ಲೈನ್ ಆಗಿ ಗಮನ ಸೆಳೆದಿತ್ತು. ಮನ್ ಕೌರ್ 100 ಮೀಟರ್ ಓಟವನ್ನು ಕೇವಲ 1 ನಿಮಿಷ 20 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಇದಾದ ಮರು ವರ್ಷ ತಮ್ಮದೇ ವಿಶ್ವದಾಖಲೆಯನ್ನು ಮನ್ ಕೌರ್ ಮತ್ತಷ್ಟು ಉತ್ತಮಪಡಿಸಿಕೊಂಡಿದ್ದರು. 2017ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್‌ನಲ್ಲಿ ಮನ್ ಕೌರ್ 100 ಮೀಟರ್ ಸ್ಪರ್ಧೆಯನ್ನು ಕೇವಲ 1 ನಿಮಿಷ 14 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.
ಇದನ್ನು 41 ವರ್ಷದ ಮೊಮ್ಮಗಳು ಶರ್ಮಿಳಾ ಸಾಂಗ್ವಾನ್ ತಮ್ಮ ಅಜ್ಜಿ ರಾಮ್‌ಬಾಯಿ ಅವರಿಗೆ ಮನ್ ಕೌರ್ ಸಾಧನೆಯನ್ನು ಹೇಳಿದರು. 100 ವರ್ಷದ ಮನ್ ಕೌರ್ ಅವರೇ ಈ ಸಾಧನೆ ಮಾಡಿದ್ದಾರೆ ಎಂದರೆ ನೀವೇಕೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಶರ್ಮಿಳಾ ಸಾಂಗ್ವಾನ್ ತಮ್ಮ ಅಜ್ಜಿಗೆ ಹುರಿದುಂಬಿಸಿದ್ದರು.
ಇದಾದ ಬಳಿಕ ಇದನ್ನೇ ಒಂದು ಸವಾಲಾಗಿ ಸ್ವೀಕರಿಸಿದ ರಾಮ್‌ಬಾಯಿ, ಕೊಂಚ ವೃತ್ತಿಪರ ಅಭ್ಯಾಸ ಹಾಗೂ ಜೀವನದುದ್ದಕ್ಕೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಒಳ್ಳೆಯ ಹಾಲು, ತರಕಾರಿಗಳನ್ನು ಸೇವಿಸಿದ್ದರ ಪರಿಣಾಮ ಕಳೆದ ವರ್ಷದ ಜೂನ್‌ನಲ್ಲಿ ವಡೋದರಾದಲ್ಲಿ ನಡೆದ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಾಮ್‌ಬಾಯಿ 100 ಮೀಟರ್ ಓಟದ ಸ್ಪರ್ಧೆಯನ್ನು ಕೇವಲ 45.50 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ವಿಶ್ವದಾಖಲೆ ನಿರ್ಮಿಸಿ ಬೀಗಿದ್ದರು.