Asianet Suvarna News Asianet Suvarna News

Karnataka MLC Election:ಪರಿಷತ್‌ ಚುನಾವಣೆ ಟಿಕೆಟ್‌ಗಾಗಿ ಪೈಪೋಟಿ, ಮೂರು ಪಕ್ಷದಲ್ಲಿ ಶುರುವಾಯ್ತು ಜಟಾಪಟಿ!

  • ಮಂಡ್ಯದಿಂದ ಮತ್ತೆ ಅಪ್ಪಾಜಿಗೌಡಗೆ ಟಿಕೆಟ್‌ ಬಹುತೇಕ ಖಚಿತ
  • ತುಮಕೂರು ಉಳಿಸಿಕೊಳ್ಳಲು ಜೆಡಿಎಸ್‌ ಇನ್ನಿಲ್ಲದ ಕಸರತ್ತು
  • ಮೈಸೂರು- ಚಾಮರಾಜನಗರ: ಧರ್ಮಸೇನಗೆ ಮತ್ತೆ ಟಿಕೆಟ್‌?
  • ಶಿವಮೊಗ್ಗ: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ
Candidates lobbying for the tickets Karnataka legislative council election Ticket Fight details ckm
Author
Bengaluru, First Published Nov 11, 2021, 6:21 AM IST

ಬೆಂಗಳೂರು(ನ.11): ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನಿಂದ ಹಾಲಿ ವಿಧಾನ ಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ಅಭ್ಯರ್ಥಿಯಾಗುವುದು ಬಹುತೇಕ ಅಂತಿಮವಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಎಂಎಲ್ಸಿ ಸದಸ್ಯ ಬಿ.ರಾಮಕೃಷ್ಣ, ಎಂ.ಪುಟ್ಟೇಗೌಡ, ಎಂ.ಎಚ್‌.ಶಿವಕುಮಾರ್‌ ಪೈಪೋಟಿ ನಡೆಸುತ್ತಿದ್ದರೆ, ಬಿಜೆಪಿಯಿಂದ ಸಿ.ಪಿ.ಉಮೇಶ್‌, ಎಲೆಚಾಕನಹಳ್ಳಿ ಬಸವರಾಜು, ಬೂಕಳ್ಳಿ ಮಂಜುನಾಥ್‌, ಶೀಳನೆರೆ ಅಂಬರೀಶ್‌ ಅವರ ಹೆಸರುಗಳು ಚಲಾವಣೆಯಲ್ಲಿವೆ.

ಮೈಸೂರು- ಚಾಮರಾಜನಗರ: ಧರ್ಮಸೇನಗೆ ಮತ್ತೆ ಟಿಕೆಟ್‌?
ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಆರ್‌.ಧರ್ಮಸೇನ ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಕೆ.ಮರೀಗೌಡ, ಸಿ.ಎನ್‌.ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮಹದೇವ್‌, ಟಿ.ಮರಯ್ಯ, ಮುನಾವರ್‌ ಪಾಷ, ಚಲುವರಾಜು, ಪ್ರದ್ಯಮ್ನ ಆಲನಹಳ್ಳಿ ಟಿಕೆಟ್‌ ಕೇಳುತ್ತಿದ್ದಾರೆ. ಬಿಜೆಪಿಯಲ್ಲಿ ಸಿ.ಬಸವೇಗೌಡ, ಕಳೆದ ಬಾರಿ ಸೋಲುಂಡಿದ್ದ ಆರ್‌.ರಘು ಕೌಟಿಲ್ಯ ಅವರ ಹೆಸರಿದೆ. ಇದಲ್ಲದೇ ಇನ್ನೂ ತಾಂತ್ರಿಕವಾಗಿ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ ಸಹ ಟಿಕೆಟ್‌ ಕೇಳುತ್ತಿದ್ದಾರೆ. ಜೆಡಿಎಸ್‌ನಲ್ಲಿ ಎನ್‌.ನರಸಿಂಹಸ್ವಾಮಿ, ಅಭಿಷೇಕ್‌, ವಿವೇಕಾನಂದ ಆಕಾಂಕ್ಷಿಗಳಾಗಿದ್ದಾರೆ.

Karnataka MLC Election : ಸಿಎಂಗೆ ಈಗ ಪರಿಷತ್‌ ಚುನಾವಣೆ ಸವಾಲ್‌!

ತುಮಕೂರು ಉಳಿಸಿಕೊಳ್ಳಲು ಜೆಡಿಎಸ್‌ ಇನ್ನಿಲ್ಲದ ಕಸರತ್ತು
ಕಳೆದ ಬಾರಿ ತುಮಕೂರು ಜಿಲ್ಲೆಯಿಂದ ಬೆಮೆಲ್‌ ಕಾಂತರಾಜು ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಈಗ ಅವರು ಕಾಂಗ್ರೆಸ್‌ ಪಕ್ಷದತ್ತ ಕಾಲಿಟ್ಟಿದ್ದಾರೆ. ಆದರೆ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‌ ಪಕ್ಷದಿಂದ ಮಾಜಿ ಶಾಸಕ ಕೆ.ಎನ್‌. ರಾಜಣ್ಣರ ಪುತ್ರರಾಜೇಂದ್ರ ಹೆಸರು ಮುಂಚೂಣಿಯಲ್ಲಿದೆ. ಇನ್ನು ಬಿಜೆಪಿಯಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಆರ್‌.ಹುಲಿನಾಯ್ಕರ್‌ ಅಥವಾ ಅವರ ಪುತ್ರಿ ಅಂಬಿಕಾರನ್ನು ಕಣಕ್ಕಿಳಿಸಲು ಪಕ್ಷ ಯೋಚಿಸುತ್ತಿದೆ. ಅರ್ಧಕ್ಕೂ ಹೆಚ್ಚು ಮಹಿಳಾ ಮತದಾರರಿರುವುದರಿಂದ ಮಹಿಳಾ ಮತವನ್ನು ಒಗ್ಗೂಡಿಸುವ ಸಲುವಾಗಿ ಅಂಬಿಕಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರವಾಗಿ ಯೋಜಿಸುತ್ತಿದೆ. ಇನ್ನು ಕಳೆದ ಬಾರಿ ಈ ಕ್ಷೇತ್ರವನ್ನು ಗೆದ್ದಿದ್ದ ಜೆಡಿಎಸ್‌ ಮತ್ತೆ ಸ್ಥಾನ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದೆ. ಈ ಹಿಂದೆ ಜಿ.ಪಂ. ಸದಸ್ಯರಾಗಿದ್ದ ರಾಮಾಂಜಿನಪ್ಪ ಅಥವಾ ಅವರ ಪುತ್ರ ಅನಿಲ್‌ರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ಕೋಲಾರದಲ್ಲಿ ಹೊಸಮುಖಕ್ಕೆ ಜೆಡಿಎಸ್‌ ಹುಡುಕಾಟ
ಕೋಲಾರದಲ್ಲಿ ಜೆಡಿಎಸ್‌ನ ಸಿ.ಆರ್‌.ಮನೋಹರ್‌ ಅವಧಿ ಪೂರ್ಣಗೊಳ್ಳಲಿದ್ದು, ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಎಂ.ಎಲ್‌.ಅನಿಲ್‌ ಕುಮಾರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಅನಂದರೆಡ್ಡಿ, ಮ್ಯಾಕಲ ನಾರಾಯಣ ಸ್ವಾಮಿ, ಊರುಬಾಗಿಲು ಶ್ರೀನಿವಾಸ್‌ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸೂಚಿಸಿದವರಿಗೆ ಕಾಂಗ್ರೆಸ್‌ ಟಿಕೆಟ್‌ ಗ್ಯಾರಂಟಿ ಎನ್ನಲಾಗಿದೆ.

ಇನ್ನು ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್‌ನ ಕೇಶವರೆಡ್ಡಿ, ಚೇತನಗೌಡ, ಮುನೇಗೌಡ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಮನೋಹರ್‌ ಗೆದ್ದ ನಂತರ ಕೋಲಾರದತ್ತ ತಲೆ ಹಾಕಿದ್ದೇ ಅಪರೂಪ. ಹೀಗಾಗಿ ಕ್ಷೇತ್ರದಲ್ಲಿ ಹೊಸ ಮುಖಂಡನಿಗಾಗಿ ಜೆಡಿಎಸ್‌ ಪರಿಶೀಲನೆ ನಡೆಸಿದೆ. ಬಿಜೆಪಿಯಲ್ಲಿ ಇನ್ನೂ ಆಕಾಂಕ್ಷಿಗಳು ಕಂಡುಬಂದಿಲ್ಲ. ಬೆಂಗಳೂರಿನ ಒಂದಿಬ್ಬರು ಟಿಕೆಟ್‌ ಕೋರಿ ಸಂಸದ ಮುನಿಸ್ವಾಮಿ, ಸಚಿವ ಡಾ.ಸುಧಾಕರ್‌ಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

Karnataka MLC Election: ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ತಂತ್ರ!

ಬೆಳಗಾವಿಯಲ್ಲಿ ಕೈ ಆಕಾಂಕ್ಷಿಗಳೇ ಹೆಚ್ಚು
ಬೆಳಗಾವಿಯ 2 ವಿಧಾನ ಪರಿಷತ್‌ ಸ್ಥಾನಗಳಿಗೆ ಬಿಜೆಪಿಗಿಂತ ಕಾಂಗ್ರೆಸ್‌ನಲ್ಲೇ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ.ಕಾಂಗ್ರೆಸ್‌ನಿಂದ ಚಿಕ್ಕೋಡಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್‌ ಮಾಜಿ ಸದಸ್ಯ ವಿವೇಕರಾವ್‌ ಪಾಟೀಲ, ವೀರಕುಮಾರ ಪಾಟೀಲ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ, ಅಂಕಲಿಯ ಡಾ.ಎ.ಎ.ಮಗದುಮ್ಮ, ಕಾಂಗ್ರೆಸ್‌ ಗ್ರಾಮೀಣ ಕಮಿಟಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಿರಣ ಸಾಧುನವರ, ಆನಂದಸ್ವಾಮಿ ಗಡ್ಡದೇವರಮಠ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಮರು ಆಯ್ಕೆ ಬಯಸಿದ್ದಾರೆ. ಇವರ ಜೊತೆಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ರಾಯಚೂರು-ಕೊಪ್ಪಳ: ಸ್ಪರ್ಧೆಗೆ ಜೆಡಿಎಸ್‌ ಹಿಂದೇಟು
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ವಿಧಾನ ಪರಿಷತ್‌ ಸ್ಥಾನಕ್ಕೆ ಇದೀಗ ಚುನಾವಣೆ ಘೋಷಣೆಗೊಂಡಿದೆ. ಹಿಂದೆ ಈ ಕ್ಷೇತ್ರದಿಂದ ಕಾಂಗ್ರೆಸ್‌ನ ಬಸವರಾಜ ಪಾಟೀಲ್‌ ಇಟಗಿ ಅವರು ಎಂಎಲ್ಸಿ ಆಗಿದ್ದರು. ಇದೀಗ ಅವರು ಮತ್ತೆ ಸ್ಪರ್ಧೆ ಹಿಂದೇಟು ಹಾಕಿದ್ದರಿಂದ ಪಕ್ಷದಿಂದ ಶರಣಗೌಡ ಬಯ್ಯಾಪುರ, ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ, ಶರಣಗೌಡ ಮದರಕಲ್‌ ಮತ್ತು ಜಿ.ಬಸವರಾಜ ರೆಡ್ಡಿ ಅವರು ಟಿಕೆಟ್‌ಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಬಿಜೆಪಿಯಿಂದ ಮಾನ್ವಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಉದ್ಯಮಿ ಈ.ಆಂಜನೇಯ್ಯ ಅವರು ಟಿಕೆಟ್‌ ಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದೇ ಅನುಮಾನವಾಗಿದೆ.

ಶಿವಮೊಗ್ಗ: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ
ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಹಣಾಹಣಿ ಏರ್ಪಡುವುದು ಖಚಿತವಾಗಿದೆ. ಕಾಂಗ್ರೆಸ್‌ನ ಹಾಲಿ ಪರಿಷತ್‌ ಸದಸ್ಯರಾಗಿರುವ ಆರ್‌.ಪ್ರಸನ್ನ ಕುಮಾರ್‌ಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಕಳೆದ ಬಾರಿ ಸ್ಪರ್ಧಿಸಿದ್ದ ಬಿಜೆಪಿಯ ಆರ್‌.ಕೆ.ಸಿದ್ದರಾಮಣ್ಣ ಪುನಃ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಡಿ.ಎಸ್‌.ಅರುಣ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌, ಎಸ್‌.ದತ್ತಾತ್ರಿ, ಗಿರೀಶ್‌ ಪಟೇಲ್‌ ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದಾರೆ. ಜೆಡಿಎಸ್‌ನಿಂದ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಹಾಸನದಿಂದ ರೇವಣ್ಣ ಪತ್ನಿ ಅಥವಾ ಪುತ್ರಗೆ ಟಿಕೆಟ್‌?
ಹಾಸನದ ವಿಧಾನ ಪರಿಷತ್‌ ಕ್ಷೇತ್ರದಿಂದ ಈ ಬಾರಿ ಜೆಡಿಎಸ್‌ದಿಂದ ರೇವಣ್ಣರ ಪತ್ನಿ ಭವಾನಿ ರೇವಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಜೊತೆಗೆ ರೇವಣ್ಣರ ಪುತ್ರ ಡಾ.ಸೂರಜ್‌ ರೇವಣ್ಣ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್‌ ಪಕ್ಷ ಗೋಪಾಲಸ್ವಾಮಿ ಅವರನ್ನು ಕಣಕ್ಕಿಳಿಸಲು ಮುಂದಾಗಿದೆಯಾದರೂ ಅವರು ಅದನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಯು ಅಭ್ಯರ್ಥಿಯ ಹುಡುಕಾಟದಲ್ಲಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಆಯ್ಕೆಯೇ ಕಷ್ಟವಾಗಿದೆ.

ಚಿತ್ರದುರ್ಗದಲ್ಲಿ ಶಾಸಕಿ ಪೂರ್ಣಿಮಾ ಪತಿ ಕಣಕ್ಕೆ?
ಚಿತ್ರದುರ್ಗ ವಿಧಾನ ಪರಿಷತ್‌ ಚುನಾವಣೆ ಸ್ಪರ್ಧಿಸಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಅಂತಹ ಉತ್ಸಾಹಗಳು ಕಂಡು ಬಂದಿಲ್ಲ. ಕಾಂಗ್ರೆಸ್‌ನಿಂದ ಕಳೆದ ಬಾರಿ ಗೆದ್ದಿದ್ದ ರಘು ಆಚಾರ್‌ ಮತ್ತೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಯಾರೂದರೂ ಬಂದರೆ ಸ್ಥಾನ ಬಿಟ್ಟುಕೊಡುವೆ, ಹೈಕಮಾಂಡ್‌ ಹೇಳಿದರೆ ಸ್ಪರ್ಧಿಸುವೆ ಎಂದಿದ್ದಾರೆ. ಹಿರಿಯೂರು ಶಾಸಕಿ ಪೂರ್ಣಿಮಾರ ಪತಿ ಶ್ರೀನಿವಾಸ್‌ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವರೆಂಬ ಸುದ್ದಿಗಳು ಹರಿದಾಡುತ್ತಿವೆ. ಬಿಜೆಪಿಯಲ್ಲಿ ಕಳೆದ ಬಾರಿ ಪರಾಜಯಗೊಂಡಿದ್ದ ನವೀನ್‌, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಜಿಲ್ಲಾ ಅಧ್ಯಕ್ಷ ಕಂದಿಕೆರೆ ಯಶೋಧರ ಸ್ಪರ್ಧಿಸುವ ಸಾಧ್ಯತೆಗಳಿವೆ.

ಕೋಟ ನಾಲ್ಕನೇ ಬಾರಿ ಮೇಲ್ಮನೆಗೆ ಸ್ಪರ್ಧೆ?
ಅವಿಭಜಿತ ದ.ಕ. ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ 2 ಸ್ಥಾನಗಳಿದ್ದು, ಬಿಜೆಪಿಯಿಂದ ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಲ್ಕನೇ ಬಾರಿ ಕಣಕ್ಕಿಳಿಯುವುದು ಖಚಿತವಾಗಿದೆ. ಇವರ ಹೆಸರು ಘೋಷಣೆಯಾಗುವುದೇ ಬಾಕಿ. ಆದರೆ ಕಾಂಗ್ರೆಸ್‌ನಲ್ಲಿ ಉಡುಪಿಯಿಂದ ಐವರು ಹಾಗೂ ದ.ಕ.ದಿಂದ ಏಳು ಮಂದಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾಗಿದ್ದ ಮಂಜುನಾಥ ಭಂಡಾರಿ ಸ್ಪರ್ಧೆಗೆ ಮುಂಚೂಣಿಯಲ್ಲಿದ್ದಾರೆ. ಎಐಸಿಸಿ ಕಾರ್ಯದರ್ಶಿ ಆಗಿರುವ ಐವನ್‌ ಡಿಸೋಜಾ, ಪಿ.ವಿ.ಮೋಹನ್‌, ಮಾಜಿ ಮೇಯರ್‌ ಶಶಿಧರ ಹೆಗ್ಡೆ , ಮುಖಂಡ ಕಾವು ಹೇಮನಾಥ ಶೆಟ್ಟಿಹೆಸರು ಕೇಳಿಬರುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡುತ್ತಿರುವ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆ ಸುಳಿವು ನೀಡಿದ್ದಾರೆ.

ಪರಿಷತ್ತಿಗೆ ಕಾಂಗ್ರೆಸ್‌ನಿಂದ ಯು.ಬಿ. ಶೆಟ್ಟಿಸ್ಪರ್ಧೆ?
ದ.ಕ. ಕ್ಷೇತ್ರದ ಮತ್ತೊಬ್ಬ ಸದಸ್ಯ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಅವರ ಬದಲಿಗೆ ಬೈಂದೂರಿನ ಗುತ್ತಿಗೆದಾರ ಯು.ಬಿ. ಶೆಟ್ಟಿಹೆಸರು ಪ್ರಸ್ತಾಪಿಸಲಾಗಿದೆ. ಧಾರವಾಡದಲ್ಲಿ ಗುತ್ತಿಗೆ ವ್ಯವಹಾರ ನಡೆಸುವ ಯು.ಬಿ. ಶೆಟ್ಟಿಉಡುಪಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ತುಂಬಾ ಚಾಲ್ತಿಯಲ್ಲಿರುವವರಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪರಮಾಪ್ತರಾಗಿದ್ದು, ಅವರು ಕರಾವಳಿಗೆ ಬಂದಾಗಲೆಲ್ಲಾ ಪಕ್ಕದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಯು.ಬಿ. ಶೆಟ್ಟಿಜೊತೆಗೆ ಈ ಹಿಂದೆ ಅವಕಾಶವಂಚಿತರಾಗಿರುವ ನ್ಯಾಯವಾದಿ ಶ್ಯಾಮಲಾ ಭಂಡಾರಿ ಹೆಸರು ಪಟ್ಟಿಯಲ್ಲಿದೆ.

ಮಡಿಕೇರಿಯಲ್ಲಿ ಮೂರೂ ಪಕ್ಷಗಳಲ್ಲೂ ಪೈಪೋಟಿ
ಕೊಡಗು ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂ.ಪಿ.ಸುನಿಲ್‌ ಸುಬ್ರಮಣಿ ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ 15 ಮಂದಿ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಲಾಗಿದೆ. ಸುನಿಲ್‌ ಸುಬ್ರಮಣಿ, ರವಿ ಕುಶಾಲಪ್ಪ, ರಾಬಿನ್‌ ದೇವಯ್ಯ, ಬಿ.ಬಿ. ಭಾರತೀಶ್‌, ಮಾಚಿಮಾಡ ರವೀಂದ್ರ, ಮನು ಮುತ್ತಪ್ಪ ಸೇರಿ ಹಲವು ಆಕಾಂಕ್ಷಿಗಳು ಬಿಜೆಪಿಯಲ್ಲಿದ್ದಾರೆ.

ಕಾಂಗ್ರೆಸ್‌ನಿಂದ ಶಿವು ಮಾದಪ್ಪ, ಹರೀಶ್‌ ಬೋಪಣ್ಣ, ತೆನ್ನೀರ ಮೈನಾ ಹಾಗೂ ಹೊರಗಿನ ಕೆಲವು ಆಕಾಂಕ್ಷಿಗಳಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ ಪಕ್ಷದಲ್ಲಿ ಮೂರು ಮಂದಿ ಆಕಾಂಕ್ಷಿಗಳಿದ್ದು, ಇಬ್ಬರು ಸ್ಥಳೀಯರು ಹಾಗೂ ಒಬ್ಬರು ಹೊರಗಿನವರಿದ್ದಾರೆ.

ಉತ್ತರ ಕನ್ನಡದಲ್ಲಿ ಹೊಸ ಅಭ್ಯರ್ಥಿಗಾಗಿ ಕೈ ಕಸರತ್ತು
ಉತ್ತರ ಕನ್ನಡದಲ್ಲಿ ಬಿಜೆಪಿ ಹೊರತು ಪಡಿಸಿದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಲು ಯಾರೂ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ.
ಬಿಜೆಪಿಯಿಂದ ಕೆ.ಜಿ.ನಾಯ್ಕ, ಗಣಪತಿ ಉಳ್ವೇಕರ, ನ್ಯಾಯವಾದಿ ನಾಗರಾಜ ನಾಯಕ, ನಾಗರಾಜ ನಾಯಕ ತೊರ್ಕೆ ಮತ್ತಿತರರ ಹೆಸರು ಮುಂಚೂಣಿಯಲ್ಲಿವೆ. ಕಾಂಗ್ರೆಸ್‌ನಿಂದ ನಿವೇದಿತ್‌ ಆಳ್ವ ಹಾಗೂ ರವೀಂದ್ರ ನಾಯ್ಕ ಸೇರಿದಂತೆ ಕೆಲವರ ಹೆಸರು ಪರಿಶೀಲನೆಯಲ್ಲಿದೆ. ಜೆಡಿಎಸ್‌ನಿಂದ ಸದ್ಯಕ್ಕೆ ಯಾರೂ ಸ್ಪರ್ಧಿಸಲು ಮುಂದಾಗಿಲ್ಲ. ಕಳೆದ ಬಾರಿ ಗೆದ್ದ ಎಸ್‌.ಎಲ್‌. ಘೋಟ್ನೇಕರ್‌ ಈ ಬಾರಿ ಚುನಾವಣೆ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಕಾಂಗ್ರೆಸ್‌ ಅನಿವಾರ್ಯವಾಗಿ ಬೇರೊಬ್ಬ ಅಭ್ಯರ್ಥಿಯನ್ನು ಹುಡುಕಿಕೊಳ್ಳಬೇಕಾಗಿದೆ.

ಚಿಕ್ಕಮಗಳೂರಲ್ಲಿ ಬಿಜೆಪಿಯಿಂದ ಮತ್ತೆ ಪ್ರಾಣೇಶ್‌ ಕಣಕ್ಕೆ?
ಚಿಕ್ಕಮಗಳೂರಿಂದ ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಎರಡನೇ ಭಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ಆಸಕ್ತಿ ತೋರಿದ್ದು, ಅವರಿಗೆ ಟಿಕೆಟ್‌ ನೀಡಲು ಈಗಾಗಲೇ ತೀರ್ಮಾನವನ್ನು ಸಹ ಪಕ್ಷ ತೆಗೆದುಕೊಂಡಿದೆ. ಆದರೆ, ಕಾಂಗ್ರೆಸ್‌ ಪಕ್ಷದಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಗಾಯತ್ರಿ ಶಾಂತೇಗೌಡ ಮತ್ತೆ ಆಸಕ್ತಿ ತೋರದ್ದರಿಂದ ಅಭ್ಯರ್ಥಿಯ ಆಯ್ಕೆಯ ಕಸರತ್ತು ಶುರುವಾಗಿದೆ. ತಕ್ಷಣಕ್ಕೆ ಬೇರೆ ಆಕಾಂಕ್ಷಿಗಳು ಕಂಡುಬರುತ್ತಿಲ್ಲ. ಕಳೆದ ಬಾರಿ ಜೆಡಿಎಸ್‌ ಸ್ಪರ್ಧೆ ಮಾಡಿತ್ತು. ಆದರೆ, ಈ ಬಾರಿ ಸ್ಪರ್ಧೆಯ ಬಗ್ಗೆ ಇನ್ನೂ ನಿಗದಿಯಾಗಿಲ್ಲ.

ಕಲಬುರಗಿಯಿಂದ ಮತ್ತೆ ಬಿ.ಜಿ.ಪಾಟೀಲಗೆ ಟಿಕೆಟ್‌?
ಕಲಬುರಗಿ ಸ್ಥಳೀಯ ಸಂಸ್ಶೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಬಿಜೆಪಿಯಿಂದ ಹಾಲಿ ಸದಸ್ಯ ಬಿ.ಜಿ.ಪಾಟೀಲ ಪುನರಾಯ್ಕೆ ಬಯಸಿ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಪಾಟೀಲ್‌ ಅವರಿಗೆ ವರಿಷ್ಠರು ಬೆಂಬಲ ಸೂಚಿಸಿದ್ದು, ಯಾರೂ ಆಕಾಂಕ್ಷಿಗಳು ಕಂಡು ಬರುತ್ತಿಲ್ಲ. ಕಾಂಗ್ರೆಸ್‌ನಿಂದ ಕಲಬುರಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ನೀಲಕಂಠ ನೀಲಕಂಠ ಮೂಲಗೆ, ಕೀಲು ಮೂಳೆ ತಜ್ಞ ಡಾ. ಶರಣಬಸಪ್ಪ ಕಾಮರೆಡ್ಡಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿವೆ. ಜೆಡಿಎಸ್‌ನಿಂದ ಯಾರೂ ಆಕಾಂಕ್ಷಿಗಳು ಇಲ್ಲ. ಅಲ್ಲದೆ ಜೆಡಿಎಸ್‌ ಪಕ್ಷ ಈ ಕ್ಷೇತ್ರ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ.

ಬೀದರ್‌ನಲ್ಲಿ ಕಾಂಗ್ರೆಸ್‌ ಹೊಸಬರಿಗೆ ಹುಡುಕಾಟ
ಬೀದರ್‌ ವಿಧಾನ ಪರಿಷತ್‌ಗೆ ಕಳೆದ ಬಾರಿ ಆಯ್ಕೆಯಾಗಿದ್ದ ಮಾಜಿ ಸಿಎಂ ದಿ.ಧರಂಸಿಂಗ್‌ ಅವರ ಪುತ್ರ ವಿಜಯಸಿಂಗ್‌ ಕಣ್ಣು ಈ ಬಾರಿ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಮೇಲಿದ್ದು ಅವರು, ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಿಂದ ಭೀಮರಾವ್‌ ಪಾಟೀಲ್‌, ಆನಂದ ದೇವಪ್ಪ ಹಾಗೂ ಬೆಂಗಳೂರಿನ ಸುಬ್ಬಾರೆಡ್ಡಿ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಉಮಾಕಾಂತ ನಾಗಮಾರಪಳ್ಳಿ, ಉದ್ಯಮಿ ಗುರುನಾಥ ಕೊಳ್ಳೂರ್‌, ಡಾ. ಶೈಲೇಂದ್ರ ಬೆಲ್ದಾಳೆ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಎಸ್‌ನಿದ ಯಾವುದೇ ಹೆಸರು ಪ್ರಮುಖ ಚರ್ಚೆಯಲ್ಲಿ ಬಂದಿಲ್ಲ.

ಬಳ್ಳಾರಿಯಲ್ಲಿ ಕೊಂಡಯ್ಯಗೆ ಕಾಂಗ್ರೆಸ್‌ ಮತ್ತೆ ಮಣೆ
ಬಳ್ಳಾರಿ ವಿಧಾನ ಪರಿಷತ್‌ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಎಂಎಲ್ಸಿ ಕೆ.ಎಸ್‌.ಎಲ್‌. ಸ್ವಾಮಿ, ಮುಂಡ್ರಿಗಿ ನಾಗರಾಜ್‌, ಅನಿಲ್‌ಲಾಡ್‌ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಆದರೆ, ಕೊಂಡಯ್ಯಗೆ ಈ ಬಾರಿ ಸ್ಪರ್ಧೆಗೂ ಅವಕಾಶ ಸಿಗಲಿದೆ ಎಂದು ತಿಳಿದುಬಂದಿದ್ದು, ಪ್ರಚಾರ ಸೇರಿದಂತೆ ಚುನಾವಣೆ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ- ವಿಜಯನಗರ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್‌ ಹೆಸರು ಕೇಳಿ ಬಂದಿದೆ. ಕೆ.ಎ. ರಾಮಲಿಂಗಪ್ಪ, ಅಯ್ಯಾಳಿ ತಿಮ್ಮಪ್ಪ, ಶಶಿಕಲಾ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ.

ಧಾರವಾಡದಲ್ಲಿ 2ನೇ ಸ್ಥಾನಕ್ಕಾಗಿ ಕಾಂಗ್ರೆಸ್‌, ಬಿಜೆಪಿ ಮೆಗಾ ಫೈಟ್‌
ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರೊಳಗೊಂಡ ದ್ವಿಸದಸ್ಯ ಸ್ಥಾನದ ಕ್ಷೇತ್ರವಾಗಿರುವ ಇಲ್ಲಿ ಈವರೆಗೂ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ಒಬ್ಬರನ್ನಷ್ಟೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿವೆ. ಬಿಜೆಪಿಯ ಪ್ರದೀಪ ಶೆಟ್ಟರ್‌ ಹಾಗೂ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಜಯ ಸಾಧಿಸಿದ್ದರು. ಇದೀಗ ಮಾನೆ ವಿಧಾನಸಭೆಗೆ ಪ್ರವೇಶಿಸಿರುವುದರಿಂದ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಲಿಂಗಾಯತ, ಪರಿಶಿಷ್ಟಜಾತಿ, ಮುಸ್ಲಿಂ ಹೀಗೆ ಎಲ್ಲ ಸಮುದಾಯಗಳು ತಮ್ಮ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಪೈಪೋಟಿಗೆ ಇಳಿದಿದ್ದಾರೆ.

ಬಿಜೆಪಿಯ ಹಾಲಿ ಸದಸ್ಯ ಪ್ರದೀಪ ಶೆಟ್ಟರ್‌ ಮತ್ತೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಕುಟುಂಬ ರಾಜಕಾರಣದ ಕೊಂಡಿ ಕತ್ತರಿಸಲು ಇವರ ಬದಲಿಗೆ ಮತ್ತೆ ಯಾರಾದರೂ ಹೊಸಮುಖಗಳಿಗೆ ಮಣೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಎರಡನೆಯ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪಾಲಾಕ್ಷಗೌಡ ಪಾಟೀಲ, ಲಿಂಗರಾಜ ಪಾಟೀಲ ಹೆಸರು ಮುಂಚೂಣಿಯಲ್ಲಿದೆ.

ವಿಜಯಪುರ-ಬಾಗಲಕೋಟೆಯಲ್ಲಿ ಮತ್ತೆ ಮೇಲುಗೈ ಸಾಧಿಸುತ್ತಾ ಕೈ?
ಬಾಗಲಕೋಟೆ ಮತ್ತು ವಿಜಯಪುರದಿಂದ ಹಾಲಿ ಸದಸ್ಯರಾದ ಎಸ್‌.ಆರ್‌.ಪಾಟೀಲ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉಳಿದಂತೆ ಕಾಂಗ್ರೆಸ್‌ನಲ್ಲಿ ಅಷ್ಟೊಂದು ಪೈಪೋಟಿ ಇಲ್ಲ. ಆದರೆ, ಬಿಜೆಪಿಯಲ್ಲಿ ಮಾಜಿ ಶಾಸಕ ಪಿ.ಎಚ್‌. ಪೂಜಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಬಸವೇಶ್ವರ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.

ವಿಜಯಪುರದಿಂದ ಕಾಂಗ್ರೆಸ್‌ನ ಹಾಲಿ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮರು ಆಯ್ಕೆ ಬಯಸಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಹಾಲಿ ಸದಸ್ಯರಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ಗೂ ಒಲವಿದೆ ಎನ್ನಲಾಗಿದ್ದು, ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ ಇಲ್ಲವಾಗಿದೆ. ಬಿಜೆಪಿಯಲ್ಲಿ ಆರ್‌.ಎಸ್‌. ಪಾಟೀಲ ಕೂಚಬಾಳ, ಭೀಮಾಶಂಕರ ಹದನೂರ, ಗೂಳಪ್ಪ ಶೆಟಗಾರ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರ ಪುತ್ರ ಚಂದ್ರಶೇಖರ ಬೆಳ್ಳುಬ್ಬಿ, ಗುರುಲಿಂಗಪ್ಪ ಅಂಗಡಿ ಮುಂತಾದವರು ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದಾರೆ. ಜೆಡಿಎಸ್‌ನಲ್ಲಿ ಮಲ್ಲಿಕಾರ್ಜುನ ಯಂಡಿಗೇರಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿವೆ. ಈ ವಿಷಯದಲ್ಲಿ ವರಿಷ್ಠರ ನಿರ್ಧಾರವನ್ನು ಅವಲಂಬಿಸಿದೆ.

Follow Us:
Download App:
  • android
  • ios