ಬೆಂಗಳೂರು(ಜ.31): ಕೊರೋನಾ ಸೋಂಕು ಹಾಗೂ ತೀವ್ರ ಉಸಿರಾಟ ತೊಂದರೆಯಿಂದಾಗಿ ಕಳೆದ ಹತ್ತು ದಿನದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‌ ಗುಣಮುಖರಾಗಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

ಆಸ್ಪತ್ರೆಯಿಂದ ಭಾನುವಾರ ಬಿಡುಗಡೆಯಾಗಲಿರುವ ಚಿನ್ನಮ್ಮ (ಶಶಿಕಲಾ) ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹತ್ತಾರು ಕಾರುಗಳ ಮೂಲಕ ಆಗಮಿಸಿ ಚಿನ್ನಮ್ಮರನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಶಶಿಕಲಾ ಬೆಂಬಲಿಗರು ಈವರೆಗೆ ಪೊಲೀಸರಿಂದ ಅನುಮತಿ ಕೇಳಿಲ್ಲ. ಕೊರೋನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಜನ ಸೇರಲು ಅವಕಾಶ ನೀಡುವುದಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ಐಸೋಲೇಷನ್‌ಗೆ ಒಳಪಡಬೇಕಾಗುತ್ತದೆ. ಹೀಗಾಗಿ ಯಾವುದೇ ರೀತಿಯ ಕೊರೋನಾ ಮಾರ್ಗಸೂಚಿ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೆಂದು ಮುಖರ್ಜಿ ತಿಳಿಸಿದ್ದಾರೆ.

ಶಶಿಕಲಾ ಗ್ರ್ಯಾಂಡ್ ಎಂಟ್ರಿ; ತಮಿಳುನಾಡು ರಾಜಕೀಯಕ್ಕೆ ಕಳೆ ಕಟ್ತಾರಾ, ಮೊಳೆ ಹೊಡೆಯುತ್ತಾರಾ..?

ಆರೋಗ್ಯ ಸುಧಾರಣೆ:

ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿದ್ದ ಶಶಿಕಲಾ ನಟರಾಜನ್‌ ಅವರಿಗೆ ತೀವ್ರ ಶ್ವಾಸಕೋಶ ಸೋಂಕು ಉಂಟಾಗಿದ್ದ ಹಿನ್ನೆಲೆಯಲ್ಲಿ ಜ.20ರಂದು ನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಜ. 21ರಂದು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಈ ವೇಳೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು.

ಪ್ರಾರಂಭದಲ್ಲಿ ಅಧಿಕ ರಕ್ತದೊತ್ತಡ, ಸಾರಿ ಲಕ್ಷಣ (ತೀವ್ರ ಉಸಿರಾಟ ತೊಂದರೆ), ಟೈಪ್‌-2 ಮಧುಮೇಹ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆ ಹೊಂದಿದ್ದರಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಹತ್ತು ದಿನ ಕಳೆದಿದ್ದು, ಈಗ ಆರೋಗ್ಯ ಸಂಪೂರ್ಣ ಸುಧಾರಿಸಿದೆ. ಜ.27ರ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರೂ ಕೊರೋನಾ ಕಾರಣದಿಂದ ಆಸ್ಪತ್ರೆಯಲ್ಲೇ ಇದ್ದ ಶಶಿಕಲಾ ನಟರಾಜನ್‌ ಭಾನುವಾರ ಬಿಡುಗಡೆಯಾಗಲಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

4 ವರ್ಷದ ಬಳಿಕ ಶಶಿಕಲಾ ಜೈಲಿನಿಂದ ರಿಲೀಸ್

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನಿರ್ದೇಶಕಿ ಡಾ.ಸಿ.ಆರ್‌. ಜಯಂತಿ, ಶಶಿಕಲಾ ಅವರು ಆಸ್ಪತ್ರೆಗೆ ದಾಖಲಾಗಿ 10 ದಿನ ಕಳೆದಿದ್ದು ಸಂಪೂರ್ಣ ಗುಣಮುಖರಾಗಿದ್ದಾರೆ. ಪ್ರಸ್ತುತ ಅವರಿಗೆ ಯಾವುದೇ ರೋಗ ಲಕ್ಷಣಗಳೂ ಇಲ್ಲ. ಕಳೆದ ಮೂರು ದಿನಗಳಿಂದ ಆಕ್ಸಿಜನ್‌ ಬೆಂಬಲವಿಲ್ಲದೆ ಅವರ ಉಸಿರಾಟವನ್ನು ನಿಗಾ ವಹಿಸಿದ್ದು, ಅವರ ಆರೋಗ್ಯ ಉತ್ತಮವಾಗಿದೆ. ಹೀಗಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಜ.31 ರಂದು ಭಾನುವಾರ ಅವರನ್ನು ಬಿಡುಗಡೆ ಮಾಡಬಹುದು ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಭಾನುವಾರ ಬಿಡುಗಡೆ ಮಾಡಲಾಗುವುದು. ಬಳಿಕ ಐಸೋಲೇಷನ್‌ ನಿಯಮಾವಳಿಯಂತೆ ನಿರ್ದಿಷ್ಟ ಮಯದವರೆಗೆ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಹೇಳಿದರು.