ಬೆಂಗಳೂರು:  ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯ ‘ಸನ್ಯಾಸಿ ಕೊಡಮಗ್ಗಿ’ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯನ್ನೇ ಗ್ರಾಮ ಪಂಚಾಯಿತಿ ಕಚೇರಿ ಮಾಡಿಕೊಂಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಎರಡು ವರ್ಷಗಳಿಂದ ಪ್ರಾಥಮಿಕ ಶಾಲಾ ಕಟ್ಟಡದಲ್ಲಿಯೇ ಗ್ರಾಮ ಪಂಚಾಯಿತಿ ಕಚೇರಿ ನಡೆಸಲಾಗುತ್ತಿದೆ. ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ತರಗತಿಗಳು ನಡೆಯುತ್ತಿದ್ದು, ಮಕ್ಕಳಿಗೆ ಪಾಠ ಕಲಿಯಲು ಮತ್ತು ಶಿಕ್ಷಕರಿಗೆ ಬೋಧನೆಗೆ ಕಿರಿಕಿರಿಯಾಗುತ್ತಿದೆ.ಕಲಿಕಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರೆ, ಪಂಚಾಯಿತಿ ನಡೆಯಲು ಕಟ್ಟಡವಿಲ್ಲವೆಂಬ ಸಬೂಬು ಹೇಳಿ ಶಾಲಾ ಕಟ್ಟಡದಲ್ಲಿಯೇ ಪಂಚಾಯಿತಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪಂಚಾಯಿತಿ ಕಟ್ಟಡ ನಿರ್ಮಿಸುವುದಕ್ಕಾಗಿ ಸನ್ಯಾಸಿ ಕೊಡಮಗ್ಗಿ ಹೊಸೂರು ಗ್ರಾಮದ ಮುಖ್ಯರಸ್ತೆಯಲ್ಲಿಯೇ 15 ಗುಂಟೆ ಜಾಗ ನೀಡಲಾಗಿದೆ. ಪಕ್ಕದ ಕನಸಿನಕಟ್ಟೆಮತ್ತು ಸನ್ಯಾಸಿ ಕೊಡಮಗ್ಗಿ ಎರಡೂ ಗ್ರಾಮಗಳ ಮಧ್ಯೆ ಜಾಗ ನೀಡಲಾಗಿದೆ. ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಅವನತಿಯತ್ತ ಸಾಗುತ್ತಿದೆ. ಕೂಡಲೇ ಕಟ್ಟಡವನ್ನು ಶಾಲೆ ನಡೆಸಲು ಬಿಟ್ಟು ಕೊಡಬೇಕು ಮತ್ತು ಪಂಚಾಯಿತಿಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆ ಉಳಿಸಿ ಟ್ವೀಟ್‌:  ಸಮಸ್ಯೆ ಬಗ್ಗೆ ‘ಸರ್ಕಾರಿ ಶಾಲೆ ಉಳಿಸಿ’ ಅಭಿಯಾನ ಆರಂಭಿಸಿರುವ ನವಭಾರತ್‌ ಡೆಮಾಕ್ರೆಟಿಕ್‌ ಪಾರ್ಟಿ ಈ ಟ್ವೀಟ್‌ ಮಾಡಿದ್ದು ಸರ್ಕಾರಿ ಶಾಲೆ ಉಳಿಸುವಂತೆ ಒತ್ತಾಯಿಸಿದೆ.