Asianet Suvarna News Asianet Suvarna News

ಉ.ಪ್ರ. ಸಿಎಂ ಆಯ್ಕೆ: ಗುಪ್ತಚರರಿಂದ ಕೇಂದ್ರಕ್ಕೆ ಅಭ್ಯರ್ಥಿಗಳ ಮಾಹಿತಿ; ಯಾರಿಗೆ ಒಲಿಯುತ್ತೆ ಹಾಟ್ ಸೀಟ್?

ಮೋದಿ ಮತ್ತು ಅಮಿತ್ ಶಾ ರಾಷ್ಟ್ರರಾಜಕಾರಣಕ್ಕೆ ಬಂದಬಳಿಕ ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ್ ಪ್ರಸಾದ್ ಮೌರ್ಯ, ಪಕ್ಷದ ಸಂಘಟನೆಯಲ್ಲಿ ಪಳಗಿದವರು. ಸಿಎಂ ರೇಸ್'ನಲ್ಲಿ ತಾನಿರುವುದಾಗಿ ಸೂಚಿಸಿರುವ ಇವರು, ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.

uttarpradesh cm race
  • Facebook
  • Twitter
  • Whatsapp

ಲಕ್ನೋ(ಮಾ. 12): ಉತ್ತರಪ್ರದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿರುವ ಭಾರತೀಯ ಜನತಾ ಪಕ್ಷಕ್ಕೆ ಈಗ ಸಿಎಂ ಆಯ್ಕೆಯ ಅಗ್ನಿಪರೀಕ್ಷೆ ಎದುರಾಗಿದೆ. ಉತ್ತರಪ್ರದೇಶದಲ್ಲಿನ ತೀರಾ ಸಂಕೀರ್ಣ ಜಾತಿ ವ್ಯವಸ್ಥೆಯಲ್ಲಿ ಬಿಜೆಪಿ ಹೇಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಎಂಬುದು ನಿಜಕ್ಕೂ ಬಹಳ ಕುತೂಹಲ ಮೂಡಿಸಿದೆ. ತಮ್ಮ ವರ್ಚಸ್ಸಿನಿಂದ ಯುಪಿ ಮತದಾರರನ್ನು ಒಲಿಸಿಕೊಂಡ ಮೋದಿ-ಶಾ ಜೋಡಿ ಸಿಎಂ ಆಯ್ಕೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆನ್ನಲಾಗಿದೆ. ಚುನಾವಣೆಗಳೆಲ್ಲವೂ ಮುಕ್ತಾಯಗೊಂಡು ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ ಜಯ ಸಿಗುವ ಸೂಚನೆ ಸಿಗುತ್ತಿದ್ದಂತೆಯೇ ಮುಖ್ಯಮಂತ್ರಿಯಾಗಬಲ್ಲ ಅಭ್ಯರ್ಥಿಗಳ ಹುಡುಕಾಟವನ್ನು ಬಿಜೆಪಿ ನಡೆಸಲು ಆರಂಭಿಸಿದೆ. ಅದಕ್ಕಾಗಿ ಇಂಟೆಲಿಜೆನ್ಸ್ ಬ್ಯೂರೋ ಗುಪ್ತಚರ ಸಂಸ್ಥೆಯ ನೆರವನ್ನು ಪಡೆದುಕೊಳ್ಳಲಾಗಿದೆ. ಉತ್ತರಪ್ರದೇಶದ ಸಿಎಂ ಆಗಬಲ್ಲಂತಹ ನಾಯಕರು, ಈ ನಿಟ್ಟಿನಲ್ಲಿ ಜನಸಾಮಾನ್ಯರ ಅಭಿಪ್ರಾಯಗಳು ಇತ್ಯಾದಿ ವಿವಿರಗಳನ್ನು ಗುಪ್ತಚರ ಸಂಸ್ಥೆ ಕಳೆದ ಕೆಲವು ದಿನಗಳಿಂದ ಅವಿರತವಾಗಿ ಕಲೆಹಾಕುತ್ತಾ ಬಂದಿದೆ. ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಪೈಕಿಯಲ್ಲಿಯೇ ಒಬ್ಬರನ್ನು ಆಯ್ಕೆ ಮಾಡಿದರೆ ಏನಾಗುತ್ತದೆ? ಹೊರಗಿನವರನ್ನು ಕರೆತಂದರೆ ಏನಾಗುತ್ತದೆ? ಯಾವ ಜಾತಿಯವರಿಗೆ ಸಿಎಂ ಪಟ್ಟ ಕೊಟ್ಟರೆ ಹೇಗಿರುತ್ತೆ? ಇತ್ಯಾದಿ ಪ್ರಶ್ನೆಗಳಿಗೆ ಗುಪ್ತಚರ ಅಧಿಕಾರಿಗಳು ಒಂದಷ್ಟು ಲೆಕ್ಕಾಚಾರಗಳನ್ನು ಕೊಟ್ಟಿದ್ದಾರೆನ್ನಲಾಗಿದೆ.

ಸಿಎಂ ಆಯ್ಕೆಯಲ್ಲಿನ ಸವಾಲು:
ಬ್ರಾಹ್ಮಣ ಮೊದಲಾದ ಮೇಲ್ವರ್ಗದ ಸಮುದಾಯಗಳು, ಯಾದವರಂತಹ ಪ್ರಬಲ ಓಬಿಸಿ ವರ್ಗದವರು, ದಲಿತರು, ಅತೀ ಹಿಂದುಳಿದ ಜಾತಿ ಇತ್ಯಾದಿ ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಇರುವ ಉತ್ತರಪ್ರದೇಶದಲ್ಲಿ ಯಾರಿಗೇ ಸಿಎಂ ಪಟ್ಟ ಕೊಟ್ಟರೂ ಇತರೆ ಜಾತಿಗಳು ಮುನಿಸಿಕೊಂಡುಬಿಡುತ್ತವೆ. ದೇಶದ ಎಲ್ಲೆಡೆಯೂ ಇದೇ ಸಮಸ್ಯೆಯೇ. ಆದರೆ, ಉತ್ತರಪ್ರದೇಶದಲ್ಲಿ ಇದು ಹೆಚ್ಚು ಸಂಕೀರ್ಣ.

ಯಾರಿದ್ದಾರೆ ರೇಸ್'ನಲ್ಲಿ?

ಕೇಶವ್ ಪ್ರಸಾದ್ ಮೌರ್ಯ:
ಮೋದಿ ಮತ್ತು ಅಮಿತ್ ಶಾ ರಾಷ್ಟ್ರರಾಜಕಾರಣಕ್ಕೆ ಬಂದಬಳಿಕ ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ್ ಪ್ರಸಾದ್ ಮೌರ್ಯ, ಪಕ್ಷದ ಸಂಘಟನೆಯಲ್ಲಿ ಪಳಗಿದವರು. ಸಿಎಂ ರೇಸ್'ನಲ್ಲಿ ತಾನಿರುವುದಾಗಿ ಸೂಚಿಸಿರುವ ಇವರು, ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಸಂಘಟನೆಯ ಕಾರ್ಯದಲ್ಲಿ ಸಿದ್ಧಹಸ್ತರಾದ ಇವರಿಗೆ ಪಕ್ಷದ ಕಾರ್ಯಕರ್ತರ ಬೆಂಬಲವಿದೆ. ಅದಕ್ಕಿಂತ ಹೆಚ್ಚಾಗಿ ಇವರು ಆರೆಸ್ಸೆಸ್ ಹಿನ್ನೆಲೆ ಹೊಂದಿದವರು. ವಿಶ್ವಹಿಂದೂ ಪರಿಷತ್'ನ ಪ್ರಮುಖ ನಾಯಕರಾಗಿದ್ದವರು. ಇನ್ನೂ ವಿಶೇಷವೆಂದರೆ ಇವರು ಅತೀ ಹಿಂದುಳಿದ ಜಾತಿಗಳ ವರ್ಗಕ್ಕೆ ಸೇರಿದವರು. ಇಲ್ಲಿ ವಿಶೇಷತೆ ಎಂದರೆ, ಇವರ ಜಾತಿ ಜೊತೆ ಮೇಲ್ವರ್ಗದವರಿಗೆ ಅಷ್ಟೇನೂ ತಿಕ್ಕಾಟವಿಲ್ಲ. ಹೀಗಾಗಿ, ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಸಿಎಂ ಪಟ್ಟ ಒಲಿಯುವ ಸಾಧ್ಯತೆ ಹೆಚ್ಚಿದೆ.

ಮನೋಜ್ ಸಿನ್ಹಾ:
ಬ್ರಾಹ್ಮಣ ಸಮುದಾಯದ ಇವರು ಸದ್ಯ ಕೇಂದ್ರ ರೈಲ್ವೆ ಮತ್ತು ಟೆಲಿಕಾಂನ ರಾಜ್ಯ ಸಚಿವರಾಗಿದ್ದಾರೆ. ಎಂಟೆಕ್ ಓದಿರುವ ಇವರು ನಿಪುಣ ಆಡಳಿತಗಾರನೆಂಬ ಖ್ಯಾತಿ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇವರ ಪ್ರಭಾವ ಹೆಚ್ಚಿದೆ. ಇವರು ಸಿಎಂ ಆದರೂ ಅಚ್ಚರಿ ಇಲ್ಲ.

ದಿನೇಶ್ ಶರ್ಮಾ:
ಉತ್ತರಪ್ರದೇಶ ರಾಜಧಾನಿ ಲಕ್ನೋ ನಗರದ ಮೇಯರ್ ಆಗಿರುವ ದಿನೇಶ್ ಶರ್ಮಾ ಬ್ರಾಹ್ಮಣರು. ಲಕ್ನೋ ವಿವಿಯಲ್ಲಿ ಪ್ರೊಫೆಸರ್ ಆಗಿರುವ ಇವರು ಪಕ್ಷದ ವಲಯದಲ್ಲಿ ಸಾಕಷ್ಟು ಗೌರವ ಹೊಂದಿದ್ದಾರೆ. ಮೋದಿ ಕೂಡ ದಿನೇಶ್ ಶರ್ಮಾ ಅವರ ಸಾಧನೆಯನ್ನು ಗೌರವಿಸಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಇವರಿಗೆ ಗುಜರಾತ್ ಚುನಾವಣೆಗೆ ಬಿಜೆಪಿಯನ್ನು ಅಣಿಗೊಳಿಸುವ ಜವಾಬ್ದಾರಿ ನೀಡಲಾಗಿದೆ.

ಸಿದ್ಧಾರ್ಥ್ ನಾಥ್ ಸಿಂಗ್:
ಉ.ಪ್ರ.ದ ಕಾಯಸ್ತ ಸಮುದಾಯಕ್ಕೆ ಸೇರಿದ ಇವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಪಶ್ಚಿಮ ಬಂಗಾಳದಂತಹ ಸಂಕೀರ್ಣ ರಾಜಕಾರಣದ ಸ್ಥಳಗಳಲ್ಲಿ ಪಕ್ಷದ ಜೊತೆ ದುಡಿದು ಅವರು ಪಡೆದಿರುವ ಅನುಭವವು ಉತ್ತರಪ್ರದೇಶದಲ್ಲಿ ನೆರವಿಗೆ ಬರಬಹುದು. ಮೇಲಾಗಿ ಇವರು ಹಾಲಿ ಶಾಸಕರಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಮೊಮ್ಮಗನಾಗಿರುವ ಇವರಿಗೆ ಉ.ಪ್ರ. ಸಿಎಂ ಸ್ಥಾನ ಒಲಿದರೂ ಒಲಿಯಬಹುದು.

(ಮಾಹಿತಿ ನೆರವು: ರಾಹುಲ್ ಶ್ರೀವಾಸ್ತವ, ಎನ್'ಡಿಟಿವಿ ಹಿರಿಯ ಸಂಪಾದಕರು)

Follow Us:
Download App:
  • android
  • ios