ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ ಆದೇಶಾನುಸಾರ ಜನವರಿ 1ರಿಂದ ‘ಚಿಪ್‌ ರಹಿತ’ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳ ಕಾರ್ಯನಿರ್ವಹಣೆ ನಿಲ್ಲಲಿದೆ. ಚಿಪ್‌ ಇರುವ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳು ಮಾತ್ರ ಕಾರ್ಯನಿರ್ವಹಿಸಲಿವೆ.

ಹೆಚ್ಚು ಸುರಕ್ಷಿತ ಹಾಗೂ ಕ್ಲೋನ್‌ ಮಾಡಿ ದುರ್ಬಳಕೆ ಮಾಡಲಾಗದು ಎಂಬ ಕಾರಣಕ್ಕೆ 3 ವರ್ಷದ ಹಿಂದೆಯೇ ಚಿಪ್‌ ಆಧರಿತ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಬಳಕೆಗೆ ರಿಸವ್‌ರ್‍ ಬ್ಯಾಂಕ್‌ ಸೂಚಿಸಿತ್ತು ಹಾಗೂ ಚಿಪ್‌ರಹಿತ ಕಾರ್ಡುಗಳನ್ನು ಬದಲಿಸಲು 2018ರ ಡಿ.31ರ ಕೊನೆಯ ದಿನಾಂಕ ನಿಗದಿಪಡಿಸಿತ್ತು.

ಈ ಪ್ರಕಾರ ಜನವರಿ 1ರಿಂದ ಚಿಪ್‌ರಹಿತ ಕಾರ್ಡುಗಳನ್ನು ಎಟಿಎಂನಲ್ಲಾಗಲಿ ಅಥವಾ ವಸ್ತುಗಳ ಖರೀದಿಗಾಗಿ ಸ್ವೈಪಿಂಗ್‌ ಮಶಿನ್‌ನಲ್ಲಿ ಬಳಸಲು ಆಗುವುದಿಲ್ಲ. ಆದರೆ ಈಗಾಗಲೇ ಕಾರ್ಡು ಬದಲಿಸಿಕೊಳ್ಳದವರು ಈಗಲೂ ಕಾರ್ಡು ಬದಲಿಸಲು ಹಾಗೂ ಕಾರ್ಡು ಬದಲಿಸಿಕೊಂಡರೂ ಹೊಸ ಕಾರ್ಡನ್ನು ಇನ್ನೂ ಸಕ್ರಿಯಗೊಳಿಸಿಕೊಳ್ಳದವರಿಗೆ ಅವುಗಳನ್ನು ಸಕ್ರಿಯಗೊಳಿಸಿಕೊಳ್ಳಲು ಅವಕಾಶವಿದೆ.