ಅರಬ್ಬಿ ಸಮುದ್ರದಲ್ಲಿ ಏಕೆ ಚಂಡಮಾರುತಗಳು ಹೆಚ್ಚುತ್ತಿವೆ?
ಅರಬ್ಬಿ ಸಮುದ್ರದ ಕೇಂದ್ರ ಭಾಗದಲ್ಲಿ ಉಂಟಾಗಿದ್ದ ಕಡಿಮೆ ಒತ್ತಡ ಪ್ರದೇಶ, ಪ್ರಸ್ತುತ ಪೂರ್ವ ಮಧ್ಯಭಾಗದ ಆಸುಪಾಸಿನಲ್ಲಿ ಕೇಂದ್ರೀಕೃತವಾಗಿದೆ. ಹಾಗಾಗಿ ರಾಜ್ಯದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತಕ್ಕೆ ಕ್ಯಾರ್ ಎಂದು ಹೆಸರಿಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಕರಾವಳಿ, ಗೋವಾ ಮತ್ತು ಮಹಾರಾಷ್ಟ್ರ ಭಾಗದಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲ ಬಂದರುಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಸಾಮಾನ್ಯವಾಗಿ ಅರಬ್ಬಿ ಸಮುದ್ರದಿಂದ ಚಂಡಮಾರುತಗಳು ಅಪ್ಪಳಿಸುವುದು ಕಡಿಮೆ. ಆದರೆ ಈ ಬಾರಿ ಅರಬ್ಬಿ ಸಮುದ್ರದ ಮೂಲಕವೇ ಹೆಚ್ಚು ಚಂಡಮಾರುಗಳು ಅಪ್ಪಳಿಸಿವೆ.
ಚಂಡಮಾರುತ ಎಂದರೇನು?
ಚಂಡಮಾರುತಗಳು ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆಯನ್ನು ಚಂಡಮಾರುತ ಎಂದು ಕರೆಯಲಾಗುತ್ತದೆ.
ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುತ್ತದೆ. ದಕ್ಷಿಣ ಗೋಳದಲ್ಲಿ ಚಂಡಮಾರುತ ಗಡಿಯಾರದ ದಿಕ್ಕಿನಲ್ಲಿ ಸುತ್ತುತ್ತದೆ. ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡಮಾರುತಗಳೇಳುತ್ತವೆ.
ಎಲ್ಲಿದೆ ಅರಬ್ಬಿ ಸಮುದ್ರ?
ಅರಬ್ಬಿ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಈ ಭಾಗದಲ್ಲಿ ಅರಬ್ಬರ ವ್ಯವಹಾರ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬಿ ಸಮುದ್ರವೆಂದು ಕರೆಯಲಾಯಿತು. ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ.
ಅಕ್ಟೋಬರ್‌ನಿಂದ ಮೇ ವರೆಗೆ ಈಶಾನ್ಯ ವಾಣಿಜ್ಯ ಮಾರುತಗಳು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ವಾಣಿಜ್ಯ ಮಾರುತಗಳುನ ಇಲ್ಲಿ ಬೀಸುತ್ತವೆ. 1869ರಲ್ಲಿ ಸೂಯೆಜ್ ಕಾಲುವೆ ತೆರೆದ ನಂತರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ವಾಣಿಜ್ಯ ಮಾರುತಗಳು ಹೆಚ್ಚಿದೆ.
ಅಲ್ಲೀಗ ಏನಾಗುತ್ತಿದೆ?
ಅರಬ್ಬಿ ಸಮುದ್ರದ ಕೇಂದ್ರ ಭಾಗದಲ್ಲಿ ಉಂಟಾಗಿದ್ದ ಕಡಿಮೆ ಒತ್ತಡ ಪ್ರದೇಶ, ಪ್ರಸ್ತುತ ಪೂರ್ವ ಮಧ್ಯಭಾಗದ ಆಸುಪಾಸಿನಲ್ಲಿ ಕೇಂದ್ರೀಕೃತವಾಗಿದೆ. ಹಾಗಾಗಿ ರಾಜ್ಯದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತಕ್ಕೆ ಕ್ಯಾರ್ ಎಂದು ಹೆಸರಿಡಲಾಗಿದೆ. ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿ.ಮೀ ದೂರದ ಅರಬ್ಬಿ ಸಮುದ್ರದ ಮಧ್ಯೆ ತೀವ್ರ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು, ಮಾರುತಗಳು ಸುಂಟರಗಾಳಿಯಾಗಿ ಮಾರ್ಪಡುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.
ಈ ಮಾರುತಗಳು ದಕ್ಷಿಣದಿಂದ ಈಶಾನ್ಯ ಭಾಗ ಎಂದರೆ, ಕರ್ನಾಟಕದ ಕರಾವಳಿ ಮತ್ತು ಗೋವಾ ಭಾಗದತ್ತ ಬರುತ್ತಿದ್ದು, ತೀವ್ರ ಗಾಳಿ ಮತ್ತು ಮಳೆಯೊಂದಿಗೆ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದು ಗಂಟೆಗೆ 200 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿದೆ.
ಅರಬ್ಬಿ ಸಮುದ್ರದಿಂದ ಈ ವರ್ಷ ಅಪ್ಪಳಿಸುತ್ತಿರುವ ಅತಿ ಅಪಾಯಕಾರಿ ಚಂಡಮಾರುತ ಇದಾಗಿದೆ. ಅರಬ್ಬಿ ಸಮುದ್ರ ಮೂಲತಃ ಕಡಿಮೆ ಒತ್ತಡದ ಪ್ರದೇಶ. ಆದರೆ ಈಗಾಗಲೇ ಕಳೆದ ಕೆಲವು ದಿನಗಳಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ನಿರಂತರ ಮಳೆಯಾಗಿದೆ, ಇದರಿಂದಾಗಿ ನದಿಗಳು ಹರಿಯುತ್ತವೆ ಮತ್ತು ಪ್ರವಾಹಕ್ಕೆ ಕಾರಣವಾಗುತ್ತಿದೆ. ಜೂನ್‌ನಿಂದೀಚೆಗೆ ಕರ್ನಾಟಕದಲ್ಲಿ 285 ಜನರು ಸಾವನ್ನಪ್ಪಿದ್ದಾರೆ.
ಮೇ ನಲ್ಲಿ ಫೋನಿ ಮಾಡಿದ ಅವಾಂತರ
ಇದೇ ವರ್ಷ ಮೇ ನಲ್ಲಿ ಅಪ್ಪಳಿಸಿದ್ದ ಫೋನಿ ಚಂಡಮಾರುತಕ್ಕೆ ಒಡಿಶಾದಲ್ಲಿ 12 ಮಂದಿ ಬಲಿಯಾಗಿದ್ದರು. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬಾಂಗ್ಲಾ ಕೂಡ ಇದರ ಭೀಕರತೆಗೆ ಸಾಕ್ಷಿಯಾಗಿತ್ತು. ಸಾಕಷ್ಟುಅವಾಂತರಗಳನ್ನು ಸೃಷ್ಟಿಸಿತ್ತು.
ಕಳೆದ 20 ವರ್ಷಗಳಲ್ಲಿ ಅತಿ ಹೆಚ್ಚು ಜನರನ್ನು ಸ್ಥಳಾಂತರಿಸಿದ ಸೈಕ್ಲೋನ್ ಇದಾಗಿದೆ. ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ 200 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಚಂಡ ಮಾರುಗಳನ್ನು ಮಾತ್ರ ಪರಿಗಣಿಸಿದರೆ, ಅವುಗಳಲ್ಲಿ ಫೋನಿಯ ವೇಗವೇ ಹೆಚ್ಚು.
ಹವಾಮಾನ ಬದಲಾವಣೆಯಿಂದ ಅರಬ್ಬಿ ಸಮುದ್ರದಲ್ಲಿ ಕೋಲಾಹಲ?
ಸಾಮಾನ್ಯವಾಗಿ ಅರಬ್ಬಿ ಸಮುದ್ರಕ್ಕಿಂತ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಹೆಚ್ಚು. ಭಾರತದಲ್ಲಿ ಕಳೆದ 126 ವರ್ಷಗಳಿಂದ ಅಪ್ಪಳಿಸಿರುವ ಚಂಡಮಾರುತಗಳನ್ನು ನೋಡುವುದಾದರೆ 1891-2017ರ ವರೆಗೆ ಅಪ್ಪಳಿಸಿರುವ 305 ಚಂಡಮಾರುಗಳು ಅತಿ ಹೆಚ್ಚು ಹಾನಿಯುಂಟುಮಾಡಿವೆ. ಅದರಲ್ಲಿ 75% ಮಾರುಗಳು ಬಂಗಾಳಕೊಲ್ಲಿಯಿಂದ ಅಪ್ಪಳಿಸಿದವುಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಚಂಡಮಾರುತ ಸೃಷ್ಟಿಯಾಗಲು 28ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬೇಕು. ಬಂಗಾಳಕೊಲ್ಲಿಯ ಮೇಲ್ಮೈ ತಾಪಮಾನವು ಅರಬ್ಬಿ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ಹೆಚ್ಚಿರುತ್ತದೆ.
ಆದರೆ ಈ ಬಾರಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಅತಿ ಹೆಚ್ಚು ಚಂಡಮಾರುತಗಳು ಅಪ್ಪಳಿಸಿವೆ. ಈ ವರ್ಷದ ಪ್ರಾರಂಭವದಲ್ಲಿ ವಾಯು ಮತ್ತು ಹಿಕ್ಕ ಚಂಡಮಾರುಗಳು ಅಪ್ಪಳಿಸಿದರೆ ಈಗ ಕ್ಯಾರ್ ಚಂಡಮಾರುತವು ಕರ್ನಾಟಕ, ಗೋವಾ ಮಹಾರಾಷ್ಟ್ರಗಳಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಹವಾಮಾನ ತಜ್ಞರ ಪ್ರಕಾರ ಅರಬ್ಬಿ ಸಮುದ್ರದಿಂದ ಮತ್ತಷ್ಟುಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ. ಜಾಗತಿಕ ಹವಾಮಾನವು ದಿನೇ ದಿನೇ ಬದಲಾಗುತ್ತಿರುವುದರಿಂದ ಬಿರುಗಾಳಿ ಅಥವಾ ಚಂಡಮಾರುತಗಳ ವರ್ತನೆಗಳು ಬದಲಾಗುತ್ತಿವೆ.
ಮುಂದಿನ ದಿನಗಳಲ್ಲಿ ಚಂಡಮಾರುಗಳು ಯಾವ ಕಡೆಗೆ , ಯಾವಾಗ ಅಪ್ಪಳಿಸುತ್ತವೆ ಎನ್ನುವುದನ್ನೂ ಊಹಿಸುವುದು ಕಷ್ಟವಾಗಬಹುದು ಎನ್ನುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಸೈಕ್ಲೋನಿಕ್ ಬಿರುಗಾಳಿಗಳು ಸಮುದ್ರದ ಮೇಲ್ಮೈಗಳನ್ನು ಬೆಚ್ಚಗಾಗಿಸುವುದರಿಂದ ಮತ್ತು ಗಾಳಿಯ ವೇಗ ಕಡಿಮೆಯಾಗುವುದರಿಂದ ಚಂಡಮಾರುಗಳು ಯಾವಾಗ ಅಪ್ಪಳಿಸುತ್ತವೆ, ಅವುಗಳ ಸ್ವರೂಪ ಹೇಗಿರುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟವಾಗಿದೆ.
ಕರಾವಳಿಯಲ್ಲಿ ಮಾರುತಗಳ ಆರ್ಭಟ ಹೆಚ್ಚು ಏಕೆ?
ಸಮುದ್ರ ಪ್ರದೇಶದಲ್ಲಿ ಚಂಡಮಾರುತದ ತೀವ್ರತೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಸೈಕ್ಲೋನ್ ಕರಾವಳಿಯನ್ನು ತಲುಪಿದಾಗ ಸಮುದ್ರಮಟ್ಟಏರತೊಡಗುತ್ತದೆ. ಹೀಗೆ ದಿಢೀರನೆ ಸಮುದ್ರಮಟ್ಟದಲ್ಲಿ ಏರಿಕೆಯಾದರೆ ನೀರು ಕಡಲಿಗೆ ಹೊಂದಿಕೊಂಡ ಪ್ರದೇಶಗಳನ್ನು ಮುಳುಗಿಸುತ್ತದೆ. ಹೀಗಾಗಿ ಸಮುದ್ರ ದಾಟಿ ಮೊದಲು ಸಿಗುವ ಕರಾವಳಿ ಭಾಗದಲ್ಲಿ ಚಂಡಮಾರುತದ ಪರಿಣಾಮ ಘನಘೋರವಾಗಿರುತ್ತದೆ. ನಾಡಿನತ್ತ ಬಂದಂತೆಲ್ಲಾ ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತದೆ. ಭೂಭಾಗದ ಒಳಬಂದಂತೆಲ್ಲಾ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಭೀಕರ ಮಳೆ ಒಳಪ್ರದೇಶಗಳನ್ನು ಬಾಧಿಸುವ ಸಾಧ್ಯತೆ ಇರುತ್ತದೆ.
ಮಾರುತಗಳು ಯಾವಾಗ ಅಪಾಯಕಾರಿಯಾಗುತ್ತವೆ?
ಪ್ರತಿ ವರ್ಷ ಆರೇಳು ಉಷ್ಣವಲಯಗಳ ಸೈಕ್ಲೋನ್‌ಗಳು ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತವೆ. ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್‌ಗಳು ಉಂಟಾಗುವುದು ಕಡಿಮೆ. ಸೈಕ್ಲೋನ್‌ಗಳಲ್ಲಿ ಒಂದೆರಡು ತೀವ್ರ ಚಂಡಮಾರುಗಳಾಗಿ ಪರಿವರ್ತಿತವಾಗುತ್ತವೆ. ವೇಗವಾಗಿ ಬೀಸುವ ಗಾಳಿ ಹಾಗೂ ಅದರ ಜೊತೆಗೆ ಮಳೆಯೂ ಸೇರಿದರೆ ಅದು ವಿನಾಶಕಾರಿ. ಪ್ರತಿ ಗಂಟೆಗೆ 250 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯ ತೀವ್ರತೆಯನ್ನು ತಡೆದುಕೊಳ್ಳುವುದು ಕಷ್ಟ. ಹಾಗಾಗಿ ಈ ವರ್ಷ ಅಪ್ಪಳಿಸಿರುವ ಫೋನಿ, ಕ್ಯಾರೆ ಚಂಡಮಾರುಗಳು ಗಂಟೆಗೆ 200 ಕಿ.ಮೀ ವೇಗದಲ್ಲಿ ಅಪ್ಪಳಿಸಿರುವುದರಿಂದ ಅಪಾರ ಪ್ರಮಾಣದ ಹಾನಿಗೆ ಕಾರಣವಾಗುತ್ತಿವೆ.
ಚಂಡ ಮಾರುಗಳಿಗೆ ಹೆಸರಿಡುವುದು ಹೇಗೆ?
ಪ್ರತಿ ಚಂಡಮಾರುತಕ್ಕೂ ಹೆಸರಿಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಆಶ್ರಯದಲ್ಲಿರುವ ಜಗತ್ತಿನ 11 ಎಚ್ಚರಿಕೆ ಕೇಂದ್ರಗಳ ಪೈಕಿ ಯಾವುದಾದರೊಂದು ಅಧಿಕೃತ ಹೆಸರನ್ನು ಇಡುತ್ತದೆ.
ಮೊದಲು ಚಂಡಮಾರುತಕ್ಕೆ ಇಡಬಹುದಾಗ ಎಲ್ಲಾ ಸಂಭಾವ್ಯ ಹೆಸರುಗಳನ್ನು ಪೆಸಿಫಿಕ್ ಪ್ರದೇಶದಲ್ಲಿರುವ ವಿಶ್ವ ಹವಾಮಾನ ಸಂಸ್ಥೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿಗೆ ಸಲ್ಲಿಸಬೇಕು. ಈ ಸಮಿತಿ ಹೆಸರುಗಳನ್ನು ತಿರಸ್ಕರಿಸಬಹುದು ಅಥವಾ ಬದಲಾವಣೆ ಮಾಡಬಹುದು. 1971ರಿಂದೀಚೆಗೆ ಆ ಹೆಸರುಗಳನ್ನು ಲಿಂಗಾನುಕ್ರಮಣಿಕೆಗೆ ಅನುಸಾರವಾಗಿ (ಒಮ್ಮೆ ಪುಲ್ಲಿಂಗ, ಇನ್ನೊಮ್ಮೆ ಸ್ತ್ರೀಲಿಂಗ ) ಕರೆಯಲಾಗುತ್ತದೆ.
1891ರಿಂದ 2019ರ ವರೆಗೆ ಅಪ್ಪಳಿಸಿರುವ ಮಾರುತಗಳ ಸಂಖ್ಯೆ
ತಿಂಗಳು ವಾಯುಭಾರ ಕುಸಿತ ಚಂಡಮಾರುತ ತೀವ್ರ ಚಂಡಮಾರುತಗಳು
ಜನವರಿ 10 7 2
ಫೆಬ್ರವರಿ 5 1 1
ಮಾಚ್‌ರ್ 4 3 2
ಏಪ್ರಿಲ್ 12 13 20
ಮೇ 39 25 59
ಜೂನ್ 107 43 22
ಜುಲೈ 142 38 09
ಆಗಸ್ಟ್ 190 29 04
ಸೆಪ್ಟೆಂಬರ್ 162 34 20
ಅಕ್ಟೋಬರ್ 120 66 51
ನವೆಂಬರ್ 61 53 83
ಡಿಸೆಂಬರ್ 37 27 26
ಒಟ್ಟು 890 339 299