Asianet Suvarna News Asianet Suvarna News

ಮೇಕೆದಾಟು ಯೋಜನೆ ಸಾಧಕ-ಬಾಧಕಗಳೇನು?

ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ಒಪ್ಪಿಗೆ | ತಮಿಳುನಾಡು ಸರ್ಕಾರದ ಖ್ಯಾತೆ | ಈ ಯೋಜನೆಯ ಸಾಧಕ-ಬಾಧಕಗಳೇನು? ಇಲ್ಲಿದೆ ಸಮಗ್ರ ವಿವರ. 

pros and cons  of Mekedatu project
Author
Bengaluru, First Published Dec 7, 2018, 10:37 AM IST

ಬೆಂಗಳೂರು (ಡಿ. 07):  ಕರ್ನಾಟಕ ಸರ್ಕಾರ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಆದರೆ ರಾಜ್ಯದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಖ್ಯಾತೆ ತಗೆಯುತ್ತಿದೆ.

ಸದ್ಯ ಕೇಂದ್ರ ಜಲ ಆಯೋಗ ಮೇಕೆದಾಟು ಯೋಜನೆಯ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ವರದಿ ಸಲ್ಲಿಕೆಗೂ ಮೊದಲು ಸ್ಥಳ ಪರಿಶೀಲನೆಗೆ ಸಚಿವ ಡಿ.ಕೆ ಶಿವಕುಮಾರ್‌ ಇಂದು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಎಂದರೆ ಏನು? ಏನೆಲ್ಲಾ ಸಿದ್ಧತೆ ನಡೆಯುತ್ತಿದೆ? ಅಲ್ಲಿನ ಸ್ಥಳೀಯರ ಅಭಿಮತ ಏನು? ಕುರಿತ ವಿವರ ಇಲ್ಲಿದೆ.

ಏನಿದು ಮೇಕೆದಾಟು ಯೋಜನೆ?

ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ. ಅಲ್ಲದೆ ಬೃಹತ್‌ ಪ್ರಮಾಣದ ವಿದ್ಯುತ್‌ ಉತ್ಪಾದನೆಗೂ ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ. ಮೇಕೆದಾಟು ಯೋಜನೆ ಮೂಲಕ ಬೇಸಿಗೆ ಕಾಲದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ನೀಗಿಸಿ, ಅಗತ್ಯಬಿದ್ದಾಗ ಕೃಷಿಗೂ ಬಳಸಿಕೊಳ್ಳಬಹುದು.

ಪ್ರಸ್ತುತ ಬೆಂಗಳೂರು ನಗರಕ್ಕೆ 1,350 ಮಿಲಿಯನ್‌ ಲೀಟರ್‌ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. 2030ರ ವೇಳೆಗೆ 2285 ಮಿಲಿಯನ್‌ ಲೀಟರ್‌ ನೀರು ಬೇಕಾಗುತ್ತದೆ. ಮೇಕೆದಾಟುವಿನಿಂದ 2030ರ ವೇಳೆಗೆ ಬೇಕಾಗುವಷ್ಟುಪ್ರಮಾಣದ ನೀರನ್ನು ಬೆಂಗಳೂರು ನಗರ ಹಾಗೂ ಬಯಲುಸೀಮೆ ಜಿಲ್ಲೆಗಳಿಗೆ ಪೂರೈಸಿ ಸಮಸ್ಯೆ ಬಗೆಹರಿಸುವುದು. ತಮಿಳುನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿ, ಬಾಕಿ ಸಮುದ್ರಕ್ಕೆ ಹೋಗಿ ವ್ಯರ್ಥವಾಗುವ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಬಹುದು ಎಂಬುದು ರಾಜ್ಯ ಸರ್ಕಾರದ ಲೆಕ್ಕಾಚಾರವಾಗಿದೆ.

ಯೋಜನೆ ಅನುಷ್ಠಾನಕ್ಕೆ ಸಕಲ ಸಿದ್ಧತೆ

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಸ್ಥಳವನ್ನು ಈಗಾಗಲೇ ಸಾಂಕೇತಿಕವಾಗಿ ಗುರುತು ಮಾಡಲಾಗಿದೆ. ಮುಗ್ಗೂರು ಅರಣ್ಯ ವಲಯದ ವಾಚಿಂಗ್‌ ಟವರ್‌ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟೆನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ.

ಈ ಒಂಟಿಗುಂಡು ಸ್ಥಳ ಮೇಕೆದಾಟು ಮತ್ತು ಸಂಗಮದ ಮಧ್ಯದಲ್ಲಿದೆ. ಅಣೆಕಟ್ಟೆನಿರ್ಮಾಣವಾಗುವ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿರುವ ಮೇಕೆದಾಟು ಬಳಿ ಜಲವಿದ್ಯುತ್‌ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸುವ ಕಾರ್ಯವೂ ನಡೆದಿದೆ. ಈ ಹಿಂದೆಯೇ ಮೇಕೆದಾಟು ಅಣೆಕಟ್ಟೆನಿರ್ಮಿಸುವ ಜಾಗದಲ್ಲಿ ಸಣ್ಣ ಸಣ್ಣ ಸಿಮೆಂಟ್‌ ಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಅವೆಲ್ಲವೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಇದೀಗ ಜಲಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳು ಎರಡು ಗುಡ್ಡಗಳ ಬಂಡೆ, ಮರಗಳು ಹಾಗೂ ಕಾವೇರಿ ನದಿಯಲ್ಲಿನ ಬಂಡೆಗಳ ಮೇಲೆ ಹಳದಿ ಬಣ್ಣದಿಂದ ಗೆರೆ ಎಳೆದು ಗುರುತು ಮಾಡಿದ್ದಾರೆ.

5,912 ಕೋಟಿ ಯೋಜನೆ

ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕಾಗಿ 5,912 ಕೋಟಿ ರುಪಾಯಿ ವೆಚ್ಚದಲ್ಲಿ ಮೇಕೆದಾಟು ಅಣೆಕಟ್ಟೆನಿರ್ಮಾಣ. 441.2 ಮೀಟರ್‌ ಎತ್ತರದ ಅಣೆಕಟ್ಟೆಯಲ್ಲಿ 66.5 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಇದಾಗಿದೆ. 440 ಮೀ.ನಲ್ಲಿ 64 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. 7.7 ಟಿಎಂಸಿ ನೀರು ಅಣೆಕಟ್ಟೆಯಲ್ಲಿ ಡೆಡ್‌ ಸ್ಟೋರೇಜ್‌ ಇರುತ್ತದೆ. 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ.

ಆನೆ ಕಾರಿಡಾರ್‌ಗೆ ಧಕ್ಕೆ

ಈ ಯೋಜನೆಯಿಂದಾಗಿ ಮೇಕೆದಾಟು ವ್ಯಾಪ್ತಿಯ ಸುಮಾರು 4,996 ಹೆಕ್ಟೇರ್‌ ಅರಣ್ಯ ಪ್ರದೇಶ ಮುಳುಗಡೆಯಾಗುವ ಸಾಧ್ಯತೆಗಳಿವೆ. ಇದರಲ್ಲಿ ಶೇ.90ರಷ್ಟುಅರಣ್ಯ ಭೂಮಿ ಮತ್ತು ಉಳಿದ ಕಂದಾಯ ಭೂಮಿ ಸೇರಿದೆ. ಆನೆ, ಜಿಂಕೆ ಸೇರಿದಂತೆ ಇನ್ನಿತರ ವನ್ಯ ಸಂಕುಲಗಳೂ ನೆಲೆ ಕಳೆದುಕೊಳ್ಳಲಿವೆ.

ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್‌ ಕರ್ನಾಟಕ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಳಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗಲಿದೆ. ಭವಿಷ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಪರಿಸರವಾದಿಗಳು.

ಒಳ್ಳೇದಾಗೋದಾದ್ರೆ ಜಾಗ ಬಿಡ್ತೀವಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾಕು

ಮೇಕೆದಾಟುವಿನಿಂದ 6-7 ಕಿ.ಮೀ ವ್ಯಾಪ್ತಿಯೊಳಗಿನ ಆರು ಜನವಸತಿ ಹಾಗೂ ಆರು ಧಾರ್ಮಿಕ ಸ್ಥಳಗಳು ಮುಳುಗಡೆ ಆಗಲಿವೆ. ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ನಿವಾಸಿಗಳು ಗುಳೆ ಹೋಗಬೇಕಿದೆ. ಪ್ರೇಕ್ಷಣಿಯ ಸ್ಥಳವಾಗಿರುವ ಮೇಕೆದಾಟುಗೆ ಪ್ರತಿವಾರ ಸುಮಾರು ಮೂರು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಇದು ತನ್ನ ರಮ್ಯತೆ ಕಳೆದುಕೊಂಡು ಪ್ರವಾಸಿಗರಿಂದ ಸೊರಗಲಿದೆ. ಬೊಮ್ಮಸಂದ್ರ, ಗಾಳೆಬೋರೆ, ಮಡಿವಾಳ, ಕೊಗ್ಗೆದೊಡ್ಡಿ (ಮಾವಳ್ಳಿ), ನೆಲ್ಲೂರು ದೊಡ್ಡಿ , ಸಂಪತಗೆರೆ ದೊಡ್ಡಿ ಗ್ರಾಮಗಳು ಹಾಗೂ ಪ್ರಸಿದ್ಧ ಶ್ರೀ ಶಿವಾಂಕರೇಶ್ವರ ಸ್ವಾಮಿ ದೇವಸ್ಥಾನ, ಎಲೆ ಮಾರಮ್ಮ, ಬಸವೇಶ್ವರ , ಸಿದ್ದಪ್ಪಾಜಿ ದೇವಾಲಯ, ಮರಿಯಮ್‌, ಸಂಗಮೇಶ್ವರ ಧಾರ್ಮಿಕ ಸ್ಥಳಗಳು ಮುಳುಗಡೆಯಾಗಲಿವೆ.

ಅಣೆಕಟ್ಟೆನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿರುವ ವಿಷಯ ತಿಳಿದ ಸ್ಥಳೀಯರು ಗ್ರಾಮ ತೊರೆಯಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಕೊಡಬೇಕೆಂಬ ಬೇಡಿಕೆಯನ್ನೂ ಮುಂದಿಡುತ್ತಿದ್ದಾರೆ. ‘ನಾವು ಬಿದ್ಹೋಗ ಮರಗಳು. ನಾವೆಷ್ಟುದಿನ ಭೂಮಿನಲ್ಲಿ ಬದುಕ್ತೀವಿ ಹೇಳಿ. ಭವಿಷ್ಯದಲ್ಲಿ ಜನರಿಗೆ ಒಳ್ಳೆದಾಗುತ್ತದೆ ಅಂದರೆ ಗ್ರಾಮ ಬಿಟ್ಟು ಕೊಡಲು ಸಿದ್ಧವಿದ್ದೇವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಸಚಿವರ ವೀಕ್ಷಣೆಗೆ ಭರದಿಂದ ಸಾಗಿರುವ ಸಿದ್ಧತಾ ಕಾರ್ಯ

ಮೇಕೆದಾಟು ಯೋಜನೆಗೆ ಅಗತ್ಯವಾದ ಭೂ ಸ್ವಾಧೀನ, ಮುಳುಗಡೆಯಾಗುವ ಪ್ರದೇಶ ಎಂಬಿತ್ಯಾದಿ ಮಾಹಿತಿ ಪಡೆಯಲು ತಜ್ಞರು, ಅರಣ್ಯ, ಹಣಕಾಸು ಹಾಗೂ ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳೊಂದಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಖುದ್ದಾಗಿ ಡಿ.7ರಂದು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದ ತಂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೇಕೆದಾಟು ಮಾರ್ಗದ ರಸ್ತೆಯನ್ನು ದುರಸ್ಥಿ ಪಡಿಸುವ ಕಾರ್ಯವೂ ಭರದಿಂದ ಸಾಗಿದೆ. ಬದಗುಂಡಿಯಿಂದ ರಾಣಿ ರಸ್ತೆ ಮಾರ್ಗವಾಗಿ ಮೇಕೆದಾಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿತ್ತು. ಅರಣ್ಯ ಇಲಾಖೆ , ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಖುದ್ಧು ಮುಂದೆ ನಿಂತು ರಸ್ತೆಯನ್ನು ದುರಸ್ತಿ ಪಡಿಸುವ ಕೆಲಸ ಮಾಡಿದ್ದಾರೆ.

ಮೇಕೆದಾಟು ಹೆಸರು ಬಂದಿದ್ದು ಹೇಗೆ?

ಮೇಕೆದಾಟು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಪ್ರವಾಸಿ ಸ್ಥಳ ಸಂಗಮದ ಸನಿಹದಲ್ಲಿದೆ. ಅಂದರೆ ಇದು ಕರ್ನಾಟಕದ ಗಡಿ ಭಾಗ. ಮೇಕೆದಾಟು ಒಂದು ವಿಹಾರ ಸ್ಥಳ. ಕಾವೇರಿ ನದಿಯು ಅತ್ಯಂತ ರಭಸದಿಂದ ಹರಿದು ಬಂಡೆಗಳನ್ನು ಕೊರೆದು ವಿಚಿತ್ರ ಆಕೃತಿಗಳನ್ನು ಮೂಡಿಸಿದೆ.

ಈ ಜಾಗದಲ್ಲಿ ಬಂಡೆಗಳ ಅಂತರ ಕಿರಿದಾಗಿದ್ದು ಆಹಾರ ತಿನ್ನಲು ಹೋದ ಮೇಕೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟುತ್ತಿದ್ದವಂತೆ ಆದ್ದರಿಂದ ಈ ಸ್ಥಳಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ. ಈ ಜಾಗದಲ್ಲಿಯೇ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟೆನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಪ್ರಾಕೃತಿಕವಾಗಿ ಅತ್ಯಂತ ರಮಣೀಯವಾದ ಸ್ಥಳವಾಗಿರುವುದಲ್ಲದೆ. ತುಂಬಾ ಅಪಾಯಕಾರಿ ಸ್ಥಳವೂ ಹೌದು. ಪ್ರವಾಸಿಗರು ಇಲ್ಲಿ ನಿಸರ್ಗದ ರಮ್ಯ ಸೊಬಗನ್ನು ವೀಕ್ಷಿಸುವುದು ವಾಡಿಕೆ.

ಹೋಗೋದು ಹೇಗೆ?

ಬೆಂಗಳೂರಿನಿಂದ ಸಾತನೂರು ಮಾರ್ಗವಾಗಿ 113 ಕಿ.ಮೀ ಹಾಗೂ ಕನಕಪುರದಿಂದ ಸಾತನೂರು, ಆಲಹಳ್ಳಿ, ಉಯ್ಯಂಬಳ್ಳಿಗಳ ಮಾರ್ಗವಾಗಿ ಸುಮಾರು 40 ಕಿ.ಮೀ ಕ್ರಮಿಸಿದರೆ ಮೇಕೆದಾಟು ಸಿಗುತ್ತದೆ. ಕಾವೇರಿ-ಅರ್ಕಾವತಿ ನದಿಯ ಸಂಗಮ ಪ್ರವಾಸಿ ಸ್ಥಳದಿಂದ 4 ಕಿ.ಮೀ ದೂರದಲ್ಲಿದೆ. ಸಂಗಮದವರೆಗೆ ವಾಹನದಲ್ಲಿ ಹೋಗಬಹುದು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಬೇಕು.

-ಎಂ ಅಪ್ರೋಜ್ ಖಾನ್ 

Follow Us:
Download App:
  • android
  • ios