ಮಿಜೋರಾಂ (ಡಿ. 12): ಈಶಾನ್ಯ ಭಾರತದ ಕೊನೆಯ ರಾಜ್ಯ ಮಿಜೋರಂನಲ್ಲಿ ಹೊಂದಿದ್ದ ಅಧಿಕಾರವನ್ನೂ ಕಾಂಗ್ರೆಸ್ ಮಂಗಳವಾರ ಕಳೆದುಕೊಂಡಿದೆ. ಹೀಗಾಗಿ ಈಶಾನ್ಯದ ಎಲ್ಲ ಏಳು ರಾಜ್ಯಗಳಿಂದ ಸದ್ಯದ ಮಟ್ಟಿಗೆ ಕಾಂಗ್ರೆಸ್ ಮುಕ್ತವಾದಂತಾಗಿದೆ.

ಮಿಜೋರಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 10 ವರ್ಷಗಳ ಬಳಿಕ ಪ್ರಾದೇಶಿಕ ಪಕ್ಷ ಮೀಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಮತ್ತೆ ಅಧಿಕಾರಕ್ಕೇರಿದೆ. ಒಂದು ದಶಕ ಆಡಳಿತ ನಡೆಸಿದ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಪರಾಭವಗೊಂಡಿದೆ. ಕಾಂಗ್ರೆಸ್ಸಿನ ಮುಖ್ಯಮಂತ್ರಿಯಾಗಿದ್ದ ಲಾಲ್ ಥನ್‌ಹವ್ಲಾ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲೂ ಸೋತಿದ್ದಾರೆ. ಕ್ರೈಸ್ತ ಬಾಹುಳ್ಯದ ಮಿಜೋರಂ ಇತಿಹಾಸದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದು, ಒಂದು ಸ್ಥಾನ ಗಳಿಸಿದೆ.

ಬಿಜೆಪಿಗೆ ಎಂಎನ್‌ಎಫ್ ಮಿತ್ರಪಕ್ಷವಾಗಿದ್ದರೂ, ಬಿಜೆಪಿ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಪರಿಪೂರ್ಣ ಬಹುಮತ ದೊರೆತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಹವಾಸ ಮಾಡದೇ ಏಕಾಂಗಿಯಾಗಿಯೇ ಸರ್ಕಾರ ರಚಿಸುವುದಾಗಿ ಆ ಪಕ್ಷ ಸ್ಪಷ್ಟವಾಗಿ ಹೇಳಿದೆ. ಮಿಜೋರಂನಲ್ಲಿ ಶೇ.58 ರಷ್ಟು ಕ್ರೈಸ್ತರು ಇದ್ದಾರೆ. ಈ ರಾಜ್ಯದಲ್ಲಿ ಪಾನ ನಿಷೇಧ ಜಾರಿಯಲ್ಲಿತ್ತು. ಆದರೆ ಲಾಲ್ ಥನ್‌ಹವ್ಲಾ ಅವರು ಅದನ್ನು ತೆಗೆದುಹಾಕಿದ್ದರು. ಇದು ಜಟಾಪಟಿಗೆ ನಾಂದಿ ಹಾಡಿತ್ತು. ಮದ್ಯಪಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಅಪಘಾತಗಳು ಹೆಚ್ಚಾಗಿ ಹಲವಾರು ಮಂದಿ ಸಾವನ್ನಪ್ಪಿದ್ದರು. 10 ವರ್ಷಗಳ ಆಳ್ವಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು.