ಬೆಂಗಳೂರು :  ಪ್ರಮಾಣ ವಚನ ಸ್ವೀಕಾರ ಸಮಾ​ರಂಭದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಎಂ.ಬಿ. ಪಾಟೀಲ್‌ ಅವರು ಪರೋ​ಕ್ಷ​ವಾಗಿ ಜಲ​ಸಂಪ​ನ್ಮೂಲ ಖಾತೆ ಮೇಲೆ ಆಸೆ ವ್ಯಕ್ತ​ಪ​ಡಿ​ಸಿದ ಘಟನೆ ನಡೆ​ಯಿ​ತು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಿದ್ದರಿಂದ ಅಸಮತೋಲನ ಸ್ವಲ್ಪ ಕಡಿಮೆ ಆಗಿದೆ. ಈ ಹಿಂದೆಯೇ ನಾವ್ಯಾರೂ ದ್ವಿತೀಯ ದರ್ಜೆ ಜನರಲ್ಲ ಎಂದು ಹೇಳಿದ್ದೆ. ಇದೀಗ ನಮಗೆ ಸ್ವಲ್ಪ ಮಟ್ಟಿಗೆ ನ್ಯಾಯ ದೊರಕಿದೆ. 

ಖಾತೆ ವಿಷಯಕ್ಕೆ ಬಂದರೆ ಈ ಹಿಂದೆ ಜಲಸಂಪನ್ಮೂಲ ಖಾತೆ ಉತ್ತಮವಾಗಿ ನಿರ್ವಹಿಸಿದ್ದೆ ಎಂದು ಹೇಳಿದರು. ಇದಕ್ಕೆ ಈ ಬಾರಿ ಜಲಸಂಪನ್ಮೂಲ ಇಲಾಖೆ ಖಾಲಿ ಇಲ್ಲವಲ್ಲಾ ಎಂದರೆ, ನೋಡೋಣ ಕೆಲವು ಖಾತೆಗಳು ಬದಲಾವಣೆ ಆಗಬಹುದು ಎಂದು ಹೇಳಿ​ದ​ರು.

ಇಬ್ಬರು ಪೊಲೀಸರ ವಶಕ್ಕೆ

ಬಿಗಿ ಬಂದೋಬಸ್ತ್ ನಡುವೆ ನಡೆದ ಕಾರ್ಯಕ್ರಮದಲ್ಲಿ ಪಾಸು ಇಲ್ಲದೆ ಯಾರಿಗೂ ಪ್ರವೇಶ ಕಲ್ಪಿಸಲಿಲ್ಲ. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಬ್ಯಾಗ್‌ಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕಳುಹಿಸಲಾಗುತ್ತಿತ್ತು. ಈ ವೇಳೆ ಹಿರಿಯ ವ್ಯಕ್ತಿಯೊಬ್ಬರು ಬ್ಯಾಗ್‌ನೊಂದಿಗೆ ಕಾರ್ಯಕ್ರಮದಲ್ಲಿ ಆಸೀನರಾಗಿದ್ದಾಗ ಬ್ಯಾಗ್‌ ಪರೀಕ್ಷೆಗೆ ಒಳಪಡಿಸಲು ನಿರಾಕರಿಸಿದರು. ಹೀಗಾಗಿ ಅವರನ್ನು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. ಇದೇ ವೇಳೆ ಮೊದಲ ಸಾಲಿನಲ್ಲಿ ಗಣ್ಯರು ಕೂರುವ ಸ್ಥಳದಲ್ಲಿ ಕುಳಿತಿದ್ದ ಕಾಂಗ್ರೆಸ್‌ ಕಾರ್ಯಕರ್ತೆಯನ್ನು ಮಹಿಳಾ ಪೊಲೀಸ್‌ ಪೇದೆಗಳು ಬಲವಂತಾಗಿ ಹೊರಹಾಕಿದರು.