ಮುಂಬೈ [ಜು.29]: ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್ ಹಾಗೂ ಐಸಿಸ್‌ನಿಂದ ಪ್ರೇರಣೆ ಪಡೆದ ಉಗ್ರರ ಗುಂಪೊಂದು ಮುಂಬೈನ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 400ಕ್ಕೂ ಹೆಚ್ಚು ಮಂದಿ ಹತ್ಯೆ ಮಾಡಲು ಭಾರೀ ದುಷ್ಕೃತ್ಯ ಎಸಗಲು ಸಂಚು ರೂಪಿಸಿತ್ತು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಜನವರಿ ತಿಂಗಳಲ್ಲೇ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್‌) 9 ಜನರನ್ನು ಬಂಧಿಸುವ ಮೂಲಕ ಉಗ್ರರ ಇನ್ನಷ್ಟುಇಂಥ ಕೃತ್ಯಗಳನ್ನು ತಡೆದಿತ್ತು. ಆದರೆ ಉಗ್ರರು ಏನೆಲ್ಲಾ ಸಂಚು ರೂಪಿಸಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?

ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್‌್ಕ ಹಾಗೂ ಐಸಿಸ್‌ನಿಂದ ಪ್ರೇರೇಪಣೆ ಪಡೆದಿದ್ದ 9 ಉಗ್ರರ ತಂಡವೊಂದು ಮುಂಬೈನಲ್ಲಿ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಉಮ್ಮತ್‌ ಅಹಮದೀಯ ಎಂಬ ಸಂಘಟನೆ ಸ್ಥಾಪಿಸಿಕೊಂಡಿತ್ತು. ರಾಜ್ಯದಲ್ಲಿ ಉಗ್ರ ಕೃತ್ಯ ನಡೆಸುವುದು ಸಂಘಟನೆಯ ಉದ್ದೇಶವಾಗಿತ್ತು. ಇದಕ್ಕೆಂದೇ 500 ಜನರ ತಂಡವೊಂದನ್ನು ಕಟ್ಟಿಕೊಂಡಿದ್ದ ಉಗ್ರರು, ದಾಳಿ ಕುರಿತ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲೆಂದೇ 6 ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಿಕೊಂಡಿತ್ತು.

ತನ್ನ ಸಂಚಿನ ಮೊದಲ ಭಾಗವಾಗಿ ಉಗ್ರರು, ಮುಂಬೈ ಸಮೀಪದ ಮುಂಬ್ರಾದ ಶಂಕರ ದೇವಾಲಯದಲ್ಲಿ 2018ರ ಡಿಸೆಂಬರ್‌ನಲ್ಲಿ ನಡೆಯಲಿರುವ ‘ಶ್ರೀಮದ್‌ ಭಗವದ್‌ ಗೀತಾ ಕಾಂತ’ದ ವೇಳೆ ನೀಡುವ ಪ್ರಸಾದಕ್ಕೆ ವಿಷ ಬೆರೆಸಿ ಸಾಮೂಹಿಕ ಹತ್ಯೆ ನಡೆಸಲು ಸಂಚು ರೂಪಿಸಿದ್ದರು. ಆದರೆ, ಕಾರಣಾಂತರಗಳಿಂದಾಗಿ ಈ ಯೋಜನೆ ವಿಫಲಗೊಂಡಿತ್ತು. ಹೀಗಾಗಿ ಮತ್ತೆ ಇಂಥದ್ದೇ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉಗ್ರರ ತಂಡ ನಾನಾ ರೀತಿಯ ಸಿದ್ಧತೆಗಳನ್ನು ಆರಂಭಿಸಿತ್ತು.

ತಂಡದ ಸದಸ್ಯನಾಗಿದ್ದ ತಲ್ಹಾ ಪ್ಯಾಟ್ರಿಕ್‌ ಪ್ರಸಾದಕ್ಕೆ ವಿಷ ಬೆರೆಸುವ ಸಂಚಿನ ಪ್ರಮಖ ಸೂತ್ರಧಾರನಾಗಿದ್ದ. ಆದರೆ, ಮಾರುಕಟ್ಟೆಯಲ್ಲಿ ವಿಷ ಸುಲಭವಾಗಿ ಲಭ್ಯವಿಲ್ಲದೇ ಇರುವುದರಿಂದ ತಲ್ಹಾ, ಔಷಧ ವ್ಯಾಪಾರಿ ಅಬು ಕಿತ್ತಲ್‌ ಎಂಬಾತನಿಂದ ರಾಸಾಯನಿಕಗಳನ್ನು ಸಂಪಾದಿಸಿದ್ದ. ಸಂಚು ರೂಪಿಸಲು ಸಲ್ಮಾನ್‌ ಸಿರಾಜುದ್ದೀನ್‌ ಖಾನ್‌ ಎಂಬಾತನ ಮನೆಯಲ್ಲಿ ಆರೋಪಿಗಳು ಸಭೆ ಸೇರುತ್ತಿದ್ದರು. ಆನ್‌ಲೈನ್‌ನಲ್ಲಿ ತಮ್ಮ ಚಟುವಟಿಕೆಗಳನ್ನು ಬೇರೆಯವರು ಪತ್ತೆ ಹಚ್ಚದಂತೆ ವೆಬ್‌ ಟೂಲ್‌, ಟೆಕ್ಟ್ ನೌ, ಫ್ರೀಡಂ ವಿಪಿಎನ್‌ನಂತಹ ಆಧುನಿಕ ಉಪಕರಣಗಳನ್ನು ಬಳಕೆ ಮಾಡಿಕೊಂಡಿದ್ದರು.

ಈ ನಡುವೆ ಉಗ್ರರ ಸಂಚಿನ ಮಾಹಿತಿ ಪಡೆದ ಮಹಾ ಎಟಿಎಸ್‌ ಪಡೆ ಮುಂಬೈನ ಮುಂಬ್ರಾ ಪ್ರದೇಶದ ಮೇಲೆ ದಾಳಿ ನಡೆಸಿ 9 ಜನರನ್ನು ಬಂಧಿಸಿತ್ತು. ಈ ದಾಳಿ ವೇಳೆ ಬಂಧಿತರಿಂದ ಭಾರೀ ಪ್ರಮಾಣದ ರಾಸಾಯನಿಕ ಬಾಟಲಿಗಳು, ಆರು ಪೆನ್‌ಡ್ರೈವ್‌ಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಎಟಿಎಸ್‌ ಮುಂಬೈ ಕೋರ್ಟ್‌ವೊಂದರಲ್ಲಿ ಚಾರ್ಜ್ ಶೀಟರ್ ದಾಖಲಿಸಿದ್ದು, ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.