ಹೈದ್ರಾಬಾದ್ :  ಭಾರತ ನನ್ನ ತಂದೆ ಜನಿಸಿದ ದೇಶ, ಇಲ್ಲಿಂದ ಯಾರೂ ನಮ್ಮನ್ನು ಓಡಿಸಲು ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಹಾಗೂ ಅಕ್ಬರುದ್ದಿನ್ ಓವೈಸಿ ಹೇಳಿದ್ದಾರೆ. 

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಓವೈಸಿಯನ್ನು ಓಡಿಸುವುದಾಗಿ ಹೇಳಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಓವೈಸಿ ಸಹೋದರರು ಈ ರೀತಿ ತಿರುಗೇಟು ನೀಡಿದ್ದಾರೆ. 

ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ನಾವು ಮಣ್ಣಿನ ಮಕ್ಕಳು, ಮಜ್ಲೀಶ್ ಮುಕ್ತ್ ಹೈದ್ರಾಬಾದ್ ಮಾಡಲು ನಿಮ್ಮಂತೆ ಹಿಂದೆ ಅನೇಕರು ಬಂದು ಹೋದರು. ಆದರೆ ಯಾರಿಂದಲೂ ಸಾಧ್ಯವಾಗಲಿಲ್ಲ. ದೇವರು ನಮ್ಮನ್ನು ಕಾಯಲು ಏಂಜಲ್ ಗಳನ್ನು ಇಲ್ಲಿಗೆ ಕಳಿಸುತ್ತಾನೆ. ಯಾರಿಗೂ ಭಯ ಪಡುವ ಅಗತ್ಯವೂ ಇಲ್ಲ ಎಂದಿದ್ದಾರೆ.

ಅಲ್ಲದೇ ಆದಿತ್ಯನಾಥ್ ಅವರು ಸರಿಯಾಗಿ ಇತಿಹಾಸ ತಿಳಿದುಕೊಳ್ಳಲಿ. ನಿಜಾಮ ಹೈದ್ರಾಬಾದ್ ಬಿಟ್ಟು ಓಡಿಹೋಗಲಿಲ್ಲ. ಇದು ನನ್ನ ತಂದೆಯ ದೇಶವಾಗಿದ್ದು, ಇಲ್ಲಿಂದ ತೆರಳಲು ಯಾರೂ ನನಗೆ ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಆದಿತ್ಯನಾಥ್ ಅವರು  ಮೊದಲು ಗೋರಕ್ ಪುರ ಘಟನೆ ಬಗ್ಗೆ ತಿಳಿದುಕೊಳ್ಳಲಿ, ಅಲ್ಲಿನ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಲಿ. ನಂತರ ಹೈದ್ರಬಾದ್ ಬಗ್ಗೆ ಚಿಂತಿಸಲಿ ಎಂದು ಓವೈಸಿವಾಗ್ದಾಳಿ ನಡೆಸಿದ್ದಾರೆ.