ಬೆಂಗಳೂರು (ಜೂ. 22):  ಉದ್ಯಾನನಗರಿ ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಿ ಸಾಧಕ-ಬಾಧಕಗಳ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ನೇಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಉದ್ಯಾನ ನಗರಿ ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ವಿವಾದಿತ ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಜನತೆ, ಪರಿಸರ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಬಹಿರಂಗವಾಗಿ ಪ್ರತಿಭಟನೆಗೆ ಇಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಗರಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಗಳ ಪ್ರಕಾರ ಗುರುವಾರ ನಡೆದ ಸಭೆಯಲ್ಲೇ ಯೋಜನೆಗೆ ವಿರೋಧ ವ್ಯಕ್ತವಾಗುವ ಬಗ್ಗೆ ಚರ್ಚೆ ನಡೆದಿತ್ತು.

ಒಂದು ವೇಳೆ ವಿರೋಧ ತೀವ್ರಗೊಂಡರೆ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಗೆ ಮಂಡಿಸಿ ಬಳಿಕ ಸಮಿತಿ ರಚನೆ ಮಾಡಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅಭಿಪ್ರಾಯಪಟ್ಟಿದ್ದರು. ಈ ವೇಳೆ ನಾವೆಲ್ಲರೂ ನೀವೇ ಸಮಿತಿ ಅಧ್ಯಕ್ಷರಾಗಬೇಕು ಎಂದು ಸಲಹೆ ನೀಡಿದ್ದೆವು ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭಕ್ಕೆ’ ತಿಳಿಸಿದ್ದಾರೆ.

ಗುರುವಾರದ ಸಭೆ ಬಳಿಕ ಯೋಜನೆಗೆ ವಿರೋಧ ತೀವ್ರಗೊಂಡಿದೆ. ‘ಸೇವ್‌ ಶರಾವತಿ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ತೀವ್ರಗೊಂಡಿದೆ. ಅಲ್ಲದೆ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಹೋರಾಟಗಳನ್ನು ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಸಮಿತಿಯಲ್ಲಿ ಆ ಭಾಗದ ಜನಪ್ರತಿನಿಧಿ, ಪರಿಸರ ತಜ್ಞರನ್ನು ಸೇರಿಸಿಕೊಳ್ಳಲಾಗುವುದು. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಅವರಿಗಿರುವ ತಪ್ಪು ಕಲ್ಪನೆಗಳನ್ನು ಬಗೆಹರಿಸಲಾಗುವುದು.

ಲಿಂಗನಮಕ್ಕಿಯ ನೀರು ವಿದ್ಯುತ್‌ ಉತ್ಪಾದನೆಗೆ ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಕೆ ಮಾಡುತ್ತಿಲ್ಲ. ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನಷ್ಟೇ ಬೆಂಗಳೂರಿಗೆ ಪಂಪ್‌ ಮಾಡಲಾಗುವುದು. ಕೊಳವೆ ಮಾರ್ಗದಿಂದಾಗಿ ಹಸಿರು ನಾಶವೂ ತುಂಬಾ ಕಡಿಮೆ ಇರಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಏನಿದು ಶರಾವತಿ ಯೋಜನೆ?

ಬಿಡಿಎ ಮಾಸ್ಟರ್‌ ಪ್ಲಾನ್‌ ಪ್ರಕಾರ 2031ರ ವೇಳೆಗೆ ನಗರದ ಜನಸಂಖ್ಯೆ 2.01 ಕೋಟಿಯಷ್ಟಾಗಲಿದೆ. ಈಗಾಗಲೇ ಕಾವೇರಿ ನೀರಿನ ಮೂಲದಿಂದ ಗರಿಷ್ಠ ಪ್ರಮಾಣದ ನೀರನ್ನು ಪಡೆಯಲು ಅಗತ್ಯ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

ಅಲ್ಲದೆ, ಕಾವೇರಿ ಜಲಾನಯನ ಭಾಗವಾಗಿರುವ ಕೊಡಗು ಭಾಗದಲ್ಲಿ ಮಳೆಯ ಪ್ರಮಾಣವೂ ಕುಸಿಯುತ್ತಿದೆ. ಹೀಗಾಗಿ ಹೀಗಾಗಿ ಕಾವೇರಿ ಬದಲಿಗೆ ಪಶ್ಚಿಮ ಘಟ್ಟದ ಕೇಂದ್ರ ಭಾಗದತ್ತ ರಾಜ್ಯ ಸರ್ಕಾರ ಪರ್ಯಾಯ ನೀರಿನ ಮೂಲಗಳಿಗಾಗಿ ಮುಖ ಮಾಡಿದೆ.

2014ರಲ್ಲಿ ತ್ಯಾಗರಾಜ ಸಮಿತಿಯು ವರದಿ ನೀಡಿ ಲಿಂಗನಮಕ್ಕಿಯಿಂದ ನೀರು ಬಳಸಿಕೊಳ್ಳಬಹುದು ಎಂದು ಶಿಫಾರಸು ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದಕ್ಕೆ ಇಷ್ಟುವರ್ಷ ಸುಮ್ಮನಿದ್ದ ರಾಜ್ಯ ಸರ್ಕಾರವು ಮತ್ತೆ ಡಿಪಿಆರ್‌ ಸಿದ್ಧಪಡಿಸಲು ಮುಂದಾಗಿದೆ. ಹೀಗಾಗಿ ವಿವಾದ ಮತ್ತೆ ಚಾಲ್ತಿಗೆ ಬಂದಿದೆ.