ನವದೆಹಲಿ: ಕೇಂದ್ರ ಸಚಿವ ಸಂತೋಷ್‌ ಗಂಗ್ವಾರ್‌ ‘ಭಾರತದಂತಹ ದೊಡ್ಡ ರಾಷ್ಟ್ರಗಳಲ್ಲಿ ಒಂದೋ ಎರಡೋ ಅತ್ಯಾಚಾರ ಘಟನೆಗಳು ಸಾಮಾನ್ಯ. ಅದನ್ನು ಹೆಚ್ಚು ಪ್ರಚಾರ ಮಾಡಬಾರದಷ್ಟೆ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಭಾನುವಾರ ಕಠುವಾ, ಉನ್ನಾವ್‌ ಅತ್ಯಾಚಾರ ಘಟನೆ ಉದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್‌, ‘ದೇಶದಲ್ಲಿ ಅತಿರೇಕದ ಅತ್ಯಾಚಾರ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಆದರೆ ಕೆಲವು ವೇಳೆ ಇಂಥಹ ಘಟನೆಗಳನ್ನು ನಿಯಂತ್ರಿಸುವುದು ಕಷ್ಟಕರ. ಅಂಥವುಗಳಿಗೆ ಹೆಚ್ಚು ಪ್ರಚಾರ ನೀಡಬಾರದು’ ಎಂದು ಕೀಳು ಮಟ್ಟದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಚಿವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.