ಬೀಜಿಂಗ್‌[ಜು.14]: ದಾರಿಯಲ್ಲಿ ಹೋಗುವಾಗ ಭಿಕ್ಷುಕರು ಎದುರು ಬಂದರೆ ಚಿಲ್ಲರೆ ಇಲ್ಲ ಎಂದು ತಪ್ಪಿಸಿಕೊಳ್ಳುತ್ತೇವೆ. ಆದರೆ, ಚೀನಾದಲ್ಲಿ ಹೀಗೆ ನೆಪ ಹೇಳಿ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಏಕೆಂದರೆ ಚೀನಾದಲ್ಲಿ ಭಿಕ್ಷುಕರು ಕೂಡಾ ಡಿಜಿಟಲ್‌ ಆಗಿದ್ದಾರೆ. ಇ- ವ್ಯಾಲೆಟ್‌, ಕ್ಯೂಆರ್‌ ಕೋಡ್‌ನಂತಹ ಆಧುನಿಕ ಹಣ ವರ್ಗಾವಣೆ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ.

ಪ್ರವಾಸಿ ತಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷುಕರು ಕೊರಳಿಗೆ ಕ್ಯೂಆರ್‌ ಕೋಡ್‌ ಹಾಗೂ ಇ ವ್ಯಾಲೆಟ್‌ಗಳನ್ನು ಕೊರಳಿಗೆ ತೂಗುಹಾಕಿಕೊಂಡು ಭಿಕ್ಷೆ ಬೇಡುತ್ತಿರುವ ದೃಶ್ಯಗಳು ಚೀನಾದೆಲ್ಲೆಡೆ ಸಾಮಾನ್ಯವಾಗಿವೆ. ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದು ಜನರ ಬಳಿ ಹೋಗಿ ಹಣಕ್ಕೆ ಕೈ ಒಡ್ಡುವುದಕ್ಕಿಂತ ಇ ವಾಲೆಟ್‌ಗಳ ಬಳಕೆಯಿಂದ ಭಿಕ್ಷುಕರಿಗೆ ಬರುತ್ತಿರುವ ದೇಣಿಗೆಯ ಪ್ರಮಾಣ ಹೆಚ್ಚಾಗಿದೆಯಂತೆ. ಅಲ್ಲದೇ ಪ್ರತಿ ಬಾರಿ ಇ- ವಾಲೆಟ್‌ಗಳನ್ನು ಸ್ಕಾ್ಯನ್‌ ಮಾಡಿದಾಗಲೂ ಭಿಕ್ಷುಕರಿಗೆ ಸಣ್ಣ ಉದ್ದಿಮೆಗಳು ಹಾಗೂ ಸ್ಥಳೀಯ ಸ್ಟಾರ್ಟ್‌ಅಪ್‌ ಕಂಪನಿಗಳು ಕಮೀಷನ್‌ ನೀಡುತ್ತಿವೆ.

ಪ್ರತಿ ಸಲದ ವ್ಯವಹಾರಕ್ಕೆ ಭಿಕ್ಷುಕರು 7ರಿಂದ 15 ರು. ಪಡೆಯುತ್ತಿದ್ದಾರೆ. ಭಿಕ್ಷುಕರು ಒಂದು ವಾರಕ್ಕೆ ಏನಿಲ್ಲವೆಂದರೂ 44,838 ರು. ಗಳಿಸುತ್ತಿದ್ದಾರಂತೆ. ಅಂದರೆ ಚೀನಾದಲ್ಲಿ ಸಾಮಾನ್ಯ ನೌಕರನೊಬ್ಬ ಗಳಿಸುವಷ್ಟೆಹಣವನ್ನು ಭಿಕ್ಷುಕರು ಗಳಿಸುತ್ತಿದ್ದಾರೆ.