ಶ್ರೀನಗರ (ಫೆ.20):  ಪುಲ್ವಾಮಾ ದಾಳಿಯ ನಂತರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಭಾರತೀಯ ಸೇನಾಪಡೆ ಕಠಿಣ ನಿರ್ಧಾರ ಕೈಗೊಂಡಿದ್ದು, ‘ಗನ್‌ ಹಿಡಿದರೆ ಕೊಲ್ಲುತ್ತೇವೆ’ ಎಂದು ಸ್ಪಷ್ಟ ಎಚ್ಚರಿಕೆ ನೀಡಿದೆ.

ಅಲ್ಲದೆ, ‘ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯು ಪಾಕಿಸ್ತಾನ ಸೇನೆಯ ‘ಕೂಸು’. ಹೀಗಾಗಿ ಜೈಷ್‌ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್‌ಐ ಹಾಗೂ ಸೇನೆಯ ಪಾತ್ರ 100ಕ್ಕೆ  100ರಷ್ಟುಸತ್ಯ’ ಎಂದಿದೆ. 

‘ಯಾರ್ಯಾರು ಗನ್‌ ಕೈಗೆತ್ತಿಕೊಂಡಿದ್ದಾರೋ ಅವರನ್ನು ಕೊಲ್ಲಲಾಗುವುದು. ಶರಣಾದರಷ್ಟೇ ಕೊಲ್ಲುವುದಿಲ್ಲ. ಭಯೋತ್ಪಾದನೆ ನಿಯಂತ್ರಿಸುವಲ್ಲಿ ನಮ್ಮ ಗುರಿ ಸ್ಪಷ್ಟವಾಗಿದೆ. ಕಾಶ್ಮೀರಿ ಕಣಿವೆಗೆ ಗನ್‌ ಹಿಡಿದು ಪ್ರವೇಶಿಸುವ ಯಾರೊಬ್ಬರೂ ಜೀವಂತವಾಗಿ ವಾಪಸ್‌ ಹೋಗುವುದಿಲ್ಲ’ ಎಂದು ಲೆಫ್ಟಿನೆಂಟ್‌ ಜನರಲ್‌ ಧಿಲ್ಲೋನ್‌  ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಧಿಲ್ಲೋನ್‌ ಅವರು ಜಮ್ಮು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯನ್ನು ಕಾಯುವ ಹೊಣೆ ಹೊತ್ತಿರುವ 15 ಕೋರ್‌ ಅಥವಾ ಚಿನಾರ್‌ ಕೋರ್‌ ಎಂದು ಕರೆಯಲ್ಪಡುವ ಪಡೆಯ ಕಮಾಂಡರ್‌. ಜಮ್ಮು ಕಾಶ್ಮೀರದ ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ.ಪಾಣಿ ಹಾಗೂ ಸಿಆರ್‌ಪಿಎಫ್‌ ಐಜಿ ಜುಲ್ಫಿಕರ್‌ ಹಸನ್‌ ಅವರೊಂದಿಗೆ ಮಾತನಾಡಿದ ಧಿಲ್ಲೋನ್‌, ಪುಲ್ವಾಮಾ ದಾಳಿ ನಡೆದ 100 ಗಂಟೆಯೊಳಗೆ ಆ ದಾಳಿಗೆ ಕಾರಣರಾದ ಜೈಷ್‌-ಎ-ಮೊಹಮ್ಮದ್‌ (ಜೆಇಎಂ) ಸಂಘಟನೆಯ ನಾಯಕರನ್ನು ಹೊಡೆದುರುಳಿಸಿದ್ದೇವೆ. ಅಂದು ನಡೆದ ಕಾರ್‌ ಬಾಂಬ್‌ ದಾಳಿ ಕಾಶ್ಮೀರದಲ್ಲಿ ಬಹಳ ವರ್ಷಗಳ ನಂತರ ನಡೆದಿದೆ. ಇಂತಹ ದಾಳಿಯನ್ನು ಎದುರಿಸಲು ಎಲ್ಲಾ ಆಯ್ಕೆಗಳನ್ನೂ ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಹೇಳಿದರು.

ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದಾರೆ. ನಾನು ಈ ಮೂಲಕ ಭಯೋತ್ಪಾದಕ ಸಂಘಟನೆಗಳನ್ನು ಸೇರಿದ ಕಾಶ್ಮೀರಿ ಯುವಕರ ತಾಯಂದಿರಲ್ಲಿ ಮನವಿ ಮಾಡುತ್ತಿದ್ದೇನೆ. ಶರಣಾಗತರಾಗುವ ಮೂಲಕ ಮುಖ್ಯವಾಹಿನಿಗೆ ಬರುವಂತೆ ನಿಮ್ಮ ಮಕ್ಕಳಿಗೆ ಹೇಳಿ. ಗನ್‌ ಕೈಗೆತ್ತಿಕೊಂಡವರನ್ನೆಲ್ಲ ಕೊಲ್ಲಲಾಗುವುದು. ಶರಣಾದರಷ್ಟೇ ಕೊಲ್ಲುವುದಿಲ್ಲ. ನಮ್ಮ ಗುರಿ ಸ್ಪಷ್ಟವಾಗಿದೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್‌ ಮುಖ್ಯಸ್ಥ ಪಾಣಿ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಭಯೋತ್ಪಾದಕ ಸಂಘಟನೆ ಸೇರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಲ್ಲಿ ಕುಟುಂಬಗಳ ಪಾತ್ರ ಮುಖ್ಯವಾಗಿದೆ. ಹೀಗಾಗಿ ಭಯೋತ್ಪಾದಕ ಸಂಘಟನೆ ಸೇರುವವರನ್ನು ತಡೆಯುವಂತೆ ಕುಟುಂಬಗಳು ಹಾಗೂ ಸಮುದಾಯವನ್ನು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಹೆಲ್ಪ್‌ಲೈನ್‌

ಪುಲ್ವಾಮಾ ಘಟನೆಯ ನಂತರ ದೇಶಾದ್ಯಂತ ಇರುವ ಕಾಶ್ಮೀರಿ ವಿದ್ಯಾರ್ಥಿಗಳು ದಾಳಿಯ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ರಕ್ಷಣೆಗೆ ಸಿಆರ್‌ಪಿಎಫ್‌ ಸಹಾಯವಾಣಿ ಆರಂಭಿಸಿದೆ. ಆತಂಕದಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳು 14411ಗೆ ಡಯಲ್‌ ಮಾಡಿ ನೆರವು ಪಡೆಯಬಹುದು.

ನಾನು ಕಾಶ್ಮೀರದ ತಾಯಂದಿರಿಗೆ ಮನವಿ ಮಾಡುತ್ತೇವೆ. ನಿಮ್ಮ ಮಕ್ಕಳಲ್ಲಿ ಯಾರಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದ್ದರೆ ಅವರಿಗೆ ಶರಣಾಗಲು ಹೇಳಿ. ಯಾರೇ ಗನ್‌ ಕೈಗೆತ್ತಿಕೊಂಡರೂ ಅವರನ್ನು ಮುಗಿಸುತ್ತೇವೆ. ಶರಣಾದರೆ ಕೊಲ್ಲುವುದಿಲ್ಲ. ಉಗ್ರವಾದ ನಿರ್ಮೂಲನೆಯಲ್ಲಿ ನಮ್ಮ ಗುರಿ ಸ್ಪಷ್ಟವಾಗಿದೆ. ಕಾಶ್ಮೀರಿ ಕಣಿವೆಗೆ ಗನ್‌ ಹಿಡಿದು ಬಂದವರು ಯಾರೂ ಜೀವಂತವಾಗಿ ಹೊರಹೋಗುವುದಿಲ್ಲ.

- ಲೆಫ್ಟಿನೆಂಟ್‌ ಜನರಲ್‌ ಧಿಲ್ಲೋನ್‌, ಎಲ್‌ಒಸಿ ಕಾಯುತ್ತಿರುವ ಚಿನಾರ್‌ ಕೋರ್‌ ಮುಖ್ಯಸ್ಥ